Advertisement

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

01:27 AM May 20, 2024 | Team Udayavani |

ಕುಂದಾಪುರ ತಂತ್ರಜ್ಞಾನ ಬೆಳೆದಂತೆ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಅದರಿಂದಲೇ ದಿನಕ್ಕೊಂದು ಆನ್‌ಲೈನ್‌ ವಂಚನೆಗಳು ಬೆಳಕಿಗೆ ಬರುತ್ತಲೇ ಇವೆ. ಈಗ ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಬರುವ ಸಂದೇಶವನ್ನು ತೆರೆದರೆ ಮಾಡಿದರೆ ಸಾಕು, ನೀವು ಒಪಿಟಿ ಹೇಳದಿದ್ದರೂ ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುವ ಹೊಸ ಆನ್‌ಲೈನ್‌ ವಂಚನೆಯ ಜಾಲವು ಸಕ್ರಿಯವಾಗಿದೆ.

Advertisement

ಕೆಲವು ದಿನಗಳ ಹಿಂದೆ ಮರವಂತೆಯ ವ್ಯಕ್ತಿಯೊಬ್ಬರ ವಾಟ್ಸ್‌ಆ್ಯಪ್‌ಗೆ ಕೆನರಾ ಬ್ಯಾಂಕ್‌ ಹೆಸರಲ್ಲಿ ಇಂತಹದ್ದೇ ಒಂದು ಲಿಂಕ್‌ ಬಂದಿದ್ದು, ಬಳಿಕ ಅವರ ಎಸ್‌ಬಿ ಖಾತೆಯಿಂದ 48,900 ರೂ., ಎಸ್‌ಬಿ ಸೆಲೆಕ್ಟ್ ಖಾತೆಯಿಂದ 60,900 ರೂ., ಓಡಿ ಖಾತೆಯಿಂದ 1.69 ಸಾವಿರ ರೂ., ಕ್ರೆಡಿಟ್‌ ಕಾರ್ಡ್‌ನಿಂದ 49,162 ರೂ. ಸೇರಿ ಒಟ್ಟು 3.27 ಲಕ್ಷ ರೂ. ಹಣವನ್ನು ವಂಚಕರು ವಿತ್‌ ಡ್ರಾ ಮಾಡಿಕೊಂಡ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲೆಗೆ ಬೀಳಿಸುವ ಬಗೆ ಹೇಗೆ?
ನಿಮ್ಮ ಮೊಬೈಲ್‌ಗೆ ಕೆನರಾ, ಬರೋಡಾ, ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ಹೀಗೆ ವಿವಿಧ ಬ್ಯಾಂಕ್‌ಗಳಿಂದಲೇ ಕಳುಹಿಸಿದ ಮಾದರಿಯಲ್ಲೇ ವಾಟ್ಸ್‌ಆ್ಯಪ್‌ ಸಂದೇಶ ಬರುತ್ತದೆ. ಬ್ಯಾಂಕ್‌ನ ಅಧಿಕೃತ ಮುದ್ರೆಯಂತಹ ಚಿತ್ರವೂ ಇರುತ್ತದೆ. ಅದರ ಕೆಳಗೆ ನಿಮಗೆ ಇಂತಿಷ್ಟು ರಿವಾರ್ಡ್‌ ಇವೆ ಎಂದು, ಎಪಿಕೆ ಲಿಂಕ್‌ವೊಂದನ್ನು ಕೊಟ್ಟಿರುತ್ತದೆ. ರಿವಾರ್ಡ್‌ ಆಸೆಯಿಂದ ನೀವು ಲಿಂಕ್‌ ತೆರೆದರೆ ತತ್‌ಕ್ಷಣವೇ ಮೊಬೈಲ್‌ನಲ್ಲಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಅಪ್ಲಿಕೇಶನ್‌ ತನ್ನಿಂದ ತಾನೆ ಡೌನ್‌ಲೋಡ್‌ ಆಗುತ್ತವೆ. ನಿಮ್ಮ ಮೊಬೈಲ್‌ಗೆ ಆ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಆದ ತತ್‌ಕ್ಷಣವೇ ವಂಚಕ ವ್ಯಕ್ತಿಗೆ ಎಸ್‌ಎಂಎಸ್‌ ಫಾರ್ವರ್ಡ್‌ (ನಿಮ್ಮ ಮೊಬೈಲ್‌ಗೆ ಬಂದಿದ್ದು) ಆಗುತ್ತದೆ. ಆಗ ನಿಮ್ಮ ಮೊಬೈಲ್‌ ಸಂಪೂರ್ಣ ಹ್ಯಾಕ್‌ ಆಗುತ್ತದೆ. ನಿಮಗೆ ಬರುವ ಎಸ್‌ಎಂಎಸ್‌, ಒಟಿಪಿ ಎಲ್ಲವೂ ಅವರಿಗೆ ಹೋಗುತ್ತವೆ. ಜತೆಗೆ ನಿಮ್ಮ ಮೊಬೈಲ್‌ನಲ್ಲಿ ಇರುವ ಎಲ್ಲ ವಾಟ್ಸ್‌ ಆ್ಯಪ್‌ಗ್ರೂಪ್‌ಗ್ಳು, ಸಂಪರ್ಕ ಸಂಖ್ಯೆಗಳನ್ನೂ ಅವರು ಪಡೆಯುತ್ತಾರೆ.

ಮೈಕ್‌ ಮೂಲಕ ಜಾಗೃತಿ
ಜನರನ್ನು ವಂಚಿಸಿ, ಹಣವನ್ನು ಎಗರಿಸುತ್ತಿರುವ ಇಂತಹ ವಂಚಕ ಜಾಲಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ 1930 ಟೋಲ್‌ ಫ್ರೀ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಂತ್ರಸ್ತರು ವಂಚನೆಗೊಳಗಾದ ಅರ್ಧ ಗಂಟೆಯೊಳಗೆ ಮಾಹಿತಿ ನೀಡಿದರೆ ಕಳೆದುಕೊಂಡ ಹಣವನ್ನು ರಕ್ಷಿಸಲು ಪೊಲೀಸರು ಕಾರ್ಯಪ್ರವೃತ್ತರಾಗಲು ನೆರವಾಗಲಿದೆ. ಇನ್ನು ಉಡುಪಿ ಜಿಲ್ಲೆಯಾದ್ಯಂತ ಸೈಬರ್‌ ವಂಚನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸೆನ್‌ ಠಾಣೆಯ ನೇತೃತ್ವದಲ್ಲಿ ಮೈಕ್‌ ಮೂಲಕ ಅಲ್ಲಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಲಿದೆ. ಮನೆ-ಮನೆಗಳಿಗೆ ಕರಪತ್ರಗಳನ್ನು ಹಂಚಲಿದ್ದಾರೆ.

ಏನು ಮಾಡಬೇಕು?
– ಯಾವುದೇ ಬ್ಯಾಂಕ್‌ ಕೂಡ ನಿಮ್ಮ ವಾಟ್ಸ್‌ಆ್ಯಪ್‌ ಅಥವಾ ಇನ್‌ ಬಾಕ್ಸ್‌ಗೆ
ಸಂದೇಶ ಕಳುಹಿಸುವುದಿಲ್ಲ. ನೀವು ಏನಾದರೂ ನಿಮ್ಮ ಖಾತೆಯಿಂದ ಹಣದ ವಹಿವಾಟು ನಡೆಸಿದರೆ ಅದರ ಸಂದೇಶ ಮಾತ್ರ ಇನ್‌ಬಾಕ್ಸ್‌ಗೆ ಬರುತ್ತದೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕ್‌ ಹೆಸರಲ್ಲಿ ಬರುವ ಸಂದೇಶವನ್ನು ಕ್ಲಿಕ್‌ ಮಾಡದಿರುವುದೇ ಉತ್ತಮ.
– ಅಪ್ಪಿತಪ್ಪಿ ಇಂತಹ ಸಂದೇಶ ಬಂದರೆ ಕೂಡಲೇ ನಿಮ್ಮ ಮೊಬೈಲ್‌ ನೆಟ್‌ಪ್ಯಾಕ್‌ ಆಫ್‌ ಮಾಡಿಬಿಡಿ. ಆಗ ಯಾವ ಆ್ಯಪ್‌ಗ್ಳು ಸಹ ಡೌನ್‌ಲೋಡ್‌ ಆಗುವುದಿಲ್ಲ. ಇದರಿಂದ ವಂಚಕರು ನಿಮ್ಮ ಮೊಬೈಲ್‌ ಹ್ಯಾಕ್‌ ಮಾಡುವ ಸಾಧ್ಯತೆ ಕಡಿಮೆ.
– ಇಂತಹ ಸಂದೇಶ ಬಂದಲ್ಲಿ ಕೂಡಲೇ ಸಮೀಪದ ಬ್ಯಾಂಕ್‌ಗಳನ್ನು ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯಿರಿ. (ಬ್ಯಾಂಕಿನ ಸಂಪರ್ಕ ಸಂಖೆಯನ್ನು ಗೂಗಲ್‌ ಮೂಲಕ ಹುಡುಕಲು ಹೋದರೆ ಅಲ್ಲೂ ವಂಚನೆ ಆಗುವ ಸಾಧ್ಯತೆ ಇದೆ)
– ವಂಚನೆಗೊಳಗಾದ ಅರ್ಧ ಗಂಟೆಯೊಳಗೆ ಸಮೀಪದ ಪೊಲೀಸ್‌ ಠಾಣೆ ಅಥವಾ 1930 ಆಪ್ತಮಿತ್ರ ಸಹಾಯವಾಣಿಗೆ ಮಾಹಿತಿ ನೀಡಿದರೆ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಬಹುದು.

Advertisement

25ಕ್ಕೂ ಅಧಿಕ ಕೇಸು
ಉಡುಪಿ ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಈವರೆಗೆ 25ಕ್ಕೂ ಮಿಕ್ಕಿ ವಿವಿಧ ರೀತಿಯ ಆನ್‌ಲೈನ್‌ ವಂಚನೆಗಳ ಪ್ರಕರಣ ದಾಖಲಾಗಿದೆ. ಇನ್ನು 2023ರಲ್ಲಿ 110ಕ್ಕೂ ಮಿಕ್ಕಿ ಪ್ರಕರಣ ಬೆಳಕಿಗೆ ಬಂದಿತ್ತು. ವಂಚನೆಗೊಳಗಾದರವಲ್ಲಿ ಬಹುತೇಕರು ವಿದ್ಯಾವಂತರೇ ಎಂಬುದು ಗಮನೀಯ.

ವಂಚನೆ ಗೊಳಗಾದ ಬಹು ತೇಕರು ವಿದ್ಯಾ ವಂತರು. ನಮ್ಮ ಜಾಗೃತಿ ಯಿಂದ ಇರುವುದು ಮುಖ್ಯ. ನಿಮಗೆ ತಿಳಿಯದೇ ಇರುವವರು ಯಾರೇ ಏನೇ ಸಂದೇಶ ಕಳುಹಿಸಿ ದರೂ ತೆರೆಯಬೇಡಿ. ಇಲ್ಲಿ ಬುದ್ಧಿವಂತಿಕೆ
ಗಿಂತಲೂ ಕಾಮನ್‌ಸೆನ್ಸ್‌ ಉಪಯೋಗ ಬಹಳ ಮುಖ್ಯ. ನಿರ್ಲಕ್ಷ್ಯ ತೋರದೆ ಎಚ್ಚರಿಕೆ ಯಿಂದ ಇರಿ.
– ರಾಮಚಂದ್ರ ನಾಯಕ್‌, ಪೊಲೀಸ್‌ ನಿರೀಕ್ಷಕರು, ಸೆನ್‌ ಠಾಣೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next