Advertisement
ಇತ್ತ ಇದರ ಕುರಿತಾಗಿ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಬಾಲಿವುಡ್ ಗೀತ ರಚನೆಕಾರ ಮತ್ತು ಸಾಮಾಜಿಕ ಹೋರಾಟಗಾರ ಜಾವೇದ್ ಅಖ್ತರ್ ಅವರು, ಬಿಜೆಪಿ ಒಂದು ಕಡೆ ನೆರೆ ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ನಿರಾಶ್ರಿತ ಕ್ರಿಶ್ಚಿಯನ್ನರಿಗೆ ಆಶ್ರಯ ನೀಡುವ ಮಾತನಾಡುತ್ತಿದೆ ಮತ್ತೊಂದೆಡೆ ಆ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲೇ ಏಸುವಿನ ಪ್ರತಿಮೆ ನಿರ್ಮಾಣಕ್ಕೆ ವಿರೋಧ ಮಾಡುತ್ತಾರೆ, ಇದು ಕೇಸರಿ ಪಕ್ಷದ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಅಖ್ತರ್ ಟೀಕಿಸಿದ್ದಾರೆ.
ತಮ್ಮ ಈ ಟೀಕೆಗೆ ಅಖ್ತರ್ ಅವರು ಕೇಂದ್ರ ಸರಕಾರ ಇತ್ತೀಚೆಗೆ ಅನುಷ್ಠಾನಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಉದಾಹರಣೆಯನ್ನು ನೀಡಿದ್ದಾರೆ. ಮೂರು ನೆರೆ ರಾಷ್ಟ್ರಗಳಿಂದ ಭಾರತದ ಆಶ್ರಯ ಬಯಸಿ ಬಂದಿರುವ ಆರು ಧರ್ಮದವರಿಗೆ ಬಿಜೆಪಿ ಪೌರತ್ವ ನೀಡುವ ವಿಚಾರವನ್ನು ಮಾತನಾಡುತ್ತದೆ. ಆದರೆ ಅತ್ತ ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಮುಖಂಡರು ಏಸುವಿನ ಪ್ರತಿಮೆ ನಿರ್ಮಾಣ ವಿಚಾರಕ್ಕೆ ತಮ್ಮ ಖಂಡತುಂಡ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜಾವೇದ್ ಅಖ್ತರ್ ಅವರು ಪ್ರಶ್ನಿಸಿದ್ದಾರೆ. ಕನಕಪುರದ ಹಾರೊಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಅಲ್ಲಿನ ಶಾಸಕ ಡಿ.ಕೆ. ಶಿವಕುಮಾರ್ ಸಹಕಾರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 114 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಬಲಪಂಥೀಯ ಸಂಘಟನೆಗಳು ಇಂದು ಆಯೋಜಿಸಿದ್ದ ಪ್ರತಿಭಟನಾ ಸಭೆಯ ಕುರಿತಾಗಿ ಪ್ರಸ್ತಾಪಿಸಿ ಅಖ್ತರ್ ಅವರು ಬಿಜೆಪಿ ಮತ್ತು ಅದರ ಮಾತೃಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಗೂಢ ಕಾರ್ಯಸೂಚಿಯ ವಿರುದ್ಧ ಧ್ವನಿ ಎತ್ತಿದ್ದಾರೆ.