ಅಕ್ವಾಪೋನಿಕ್ಸ್ ಎಂಬ ಆಧುನಿಕ ಪದ್ಧತಿಯ ಕೃಷಿಯನ್ನು ಬೆಂಗಳೂರಿನಲ್ಲಿ ಅನುಷ್ಠಾನಿಸಿ ಯಶಸ್ಸಿನತ್ತ ಹೆಜ್ಜೆಯಿಡುತ್ತಿರುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾನಾವಿನ ಸಾಪ್ಟ್ ವೇರ್ ಎಂಜಿನಿಯರ್ ದಂಪತಿಯ ಸಾವಯವ ಕೃಷಿಯ ಸಾಧನೆ ಸಾಧಕರಿಗೆ ಪ್ರೇರಣೆಯ ಸಂಗತಿ. ಕಾನಾವು ತಿರುಮಲೇಶ್ವರ ಭಟ್ ಮತ್ತು ಅನಿತಾ ಕೆ ಭಟ್ ಅವರ ಪುತ್ರ ಸಾಪ್ಟ್ ವೇರ್ ಎಂಜಿನಿಯರ್ ಕಾನಾವು ನರಸಿಂಹ ತೇಜಸ್ವಿ ಮತ್ತು ಅವರ ಪತ್ನಿ ಶ್ವೇತಾ ಕಾನಾವು ಅವರೇ ಈ ಪ್ರಯೋಗಶೀಲ ಸಾಧಕರು. ವೃತ್ತಿಯ ಜತೆಗೆ ಕುಟುಂಬದ ಮೂಲ ನೆಲೆ ಕೃಷಿಯತ್ತ ಮುಖ ಮಾಡಿದ್ದು, ಒಂದು ವರ್ಷದ ಹಿಂದೆ ಆರಂಭಿಸಿದ ಹೊಸ ಪ್ರಯತ್ನ ಈಗ ಫಲ ಕೊಡುತ್ತಿದೆ. ಅಮೇರಿಕಾದಲ್ಲಿ ಸಾಪ್ಟ್ವೇರ್ ಉದ್ಯೋಗದಲ್ಲಿದ್ದ ನರಸಿಂಹ ತೇಜ್ವಸಿ ದಂಪತಿ 2015ಕ್ಕೆ ಬೆಂಗಳೂರಿಗೆ ಬಂದು ನೆಲೆಸಿದರು. ಕನಕಪುರ ರಸ್ತೆಯ ಎಡುಮಾಡ್ ಹಾರೋಹಳ್ಳಿ ಹತ್ತಿರ ಜಾಗ ಖರೀದಿಸಿ 3000 ಚದರ ಅಡಿ ವಿಸ್ತೀರ್ಣದಲ್ಲಿ ಕಾನಾವು ಜಲಜಶ್ರೀ ಫಾರ್ಮ್ಸ್ ಅಕ್ವಾಪೋನಿಕ್ಸ್ ಕೃಷಿ ಆರಂಭಿಸಿದರು. ಇಲ್ಲಿ 1200 ಮೀನು ಸಾಕಾಣೆಯ 3 ತೊಟ್ಟಿ ನಿರ್ಮಿಸಿದ್ದಾರೆ. ಇದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಸ್ಕರಣೆಗೊಂಡು ಪೈಪು ಮಾದರಿಯೊಳಗೆ ಹರಿಯುತ್ತಾ ಗಿಡಗಳಿಗೆ ಆಹಾರವಾಗಿ ಮಾರ್ಪಡುತ್ತದೆ. ಇಲ್ಲಿ ಗಿಡವು ತನಗೆ ಅಗತ್ಯವಿರುವ ತ್ಯಾಜ್ಯವನ್ನು ಹೀರಿ ಮರು ಸಂಸ್ಕರಿಸಿ ಉತ್ತಮ ನೀರನ್ನು ಪುನಃ ಮೀನಿನ ತೊಟ್ಟಿಗೆ ಸೇರಿಸುತ್ತದೆ. ಈ ಪ್ರಕ್ರಿಯೆ ವೃತ್ತಕಾರದಲ್ಲಿ ನಿರಂತರವಾಗಿ ಸಾಗುತ್ತದೆ. 24 ತಾಸು ಗಿಡಗಳಿಗೆ ಆಹಾರ ಸಿಕ್ಕಿ ಅವುಗಳ ಬೆಳವಣಿಗೆ ಮಣ್ಣಿನ ಕೃಷಿಯಲ್ಲಿನ ಬೆಳವಣಿಗಿಂತಲು ವೇಗದಾಯಕವಾಗಿರುತ್ತದೆ. ರಾಸಾಯಿಕ ಪದಾರ್ಥಗಳು ಮೀನಿನ ವಾಸಕ್ಕೆ ತೊಂದರೆಯಾಗುವುದರಿಂದ ಅದಕ್ಕೆ ಸಂಪೂರ್ಣ ನಿರ್ಬಂಧವಿದೆ. ಹಾಗಾಗಿ ಇದು ಸಂಪೂರ್ಣ ಸಾವಯವ ಆಧಾರಿತ ಕೃಷಿ ಎನ್ನುತ್ತಾರೆ ನರಸಿಂಹ ತೇಜಸ್ವಿ ಕಾನಾವು. ಮಣ್ಣಿನ ನೆಲ ಹದ ಮಾಡಿ ಬೀಜ, ಗಿಡ ಮೊಳಕೆಯೊಡೆಯುವುದು ಸಾಮಾನ್ಯ ಸಂಗತಿ. ಆದರೆ ಈ ಕೃಷಿಯಲ್ಲಿ ಮಣ್ಣಿನ ಸಂಪರ್ಕವೇ ಇಲ್ಲದೆ ಬೀಜ ಮೊಳಕೆಯೊಡೆದು ಗಿಡ ಬೆಳೆತು ಫಸಲು ನೀಡುವುದು ವಿಶೇಷ. ಇಲ್ಲಿ ಮೀನು ಸಾಕಾಣೆ ಮುಖ್ಯ ಅಂಗ. ಅಲ್ಲಿಂದ ಉತ್ಪತ್ತಿಯಾಗುವ ತ್ಯಾಜ್ಯವೇ ಕೃಷಿಗೆ ಆಹಾರ. ಇಲ್ಲಿ ಮೀನಿಗಷ್ಟೆ ಆಹಾರ ಕೊಟ್ಟರಾಯಿತು. ಅದರ ವಿಸರ್ಜನೆ ಬೆಳೆಗೆ ಆಹಾರ. ಅಮೋನಿಯವನ್ನು ಬೆಳೆಗೆ ಬೇಕಾಗುವ ರೂಪಕ್ಕೆ ಬ್ಯಾಕ್ಟೀರಿಯ ಬಳಸಿ ಶೋಧಿಸಿ ನೀಡಲಾಗುತ್ತದೆ. ಮನೆ ತಾರಸಿಯ ಮೇಲೆಯು ಈ ವಿಧಾನ ಪ್ರಯೋಗಿಸಬಹುದು, ಆದಾಯ ಗಳಿಕೆ ಉದ್ದೇಶವಿದ್ದರೆ ವಿಸ್ತೃತ ಜಾಗದಲ್ಲಿ ಇದನ್ನು ಅನುಷ್ಠಾನಿಸುವುದು ಉತ್ತಮ ಎನ್ನುತ್ತಾರೆ ಶ್ವೇತಾ ನರಸಿಂಹ ತೇಜಸ್ವಿ ಕಾನಾವು. ಈ ದಂಪತಿಯ ಮನೆಯಿಂದ 26 ಕಿ.ಮೀ.ದೂರದಲ್ಲಿ ಈ ಫಾರ್ಮ್ಸ ಇದೆ. ನರಸಿಂಹ ತೇಜಸ್ವಿ ಸಾಪ್ಟ್ ವೇರ್ ಉದ್ಯೋಗಿ. ಪತ್ನಿ ಶ್ವೇತಾ ಎಂಜಿನಿಯರ್ ಉದ್ಯೋಗ ತೊರೆದು ಕೃಷಿಯಲ್ಲೇ ತೊಡಗಿದ್ದಾರೆ. ಬಿಡುವಿನ ಸಮಯದಲ್ಲಿ ಮನೆಯಲ್ಲೇ ಗಣಿತ ತರಗತಿ ನಡೆಸುತ್ತಿದ್ದಾರೆ. ಎರಡು ದಿನಕೊಮ್ಮೆ ಈ ದಂಪತಿ ಫಾರ್ಮ್ಸ ಗೆ ತೆರಳಿ ಕೃಷಿಯನ್ನು ಗಮನಿಸುತ್ತಾರೆ. ದಿನದ ಚಟುವಟಿಕೆಗೆ ಓರ್ವ ಸಿಬಂದಿಯನ್ನು ಅಲ್ಲಿ ನಿಯೋಜಿಸಿದ್ದಾರೆ. ಭವಿಷ್ಯದಲ್ಲಿ ಇದನ್ನು ಇನ್ನಷ್ಟು ವಿಸ್ತರಿಸುವ ಕನಸು ಹೊಂದಿದ್ದಾರೆ. ದಿನ ಬಳಕೆಯ ತರಕಾರಿಗಳನ್ನು ಮನೆ ಟೇರಸ್ನಲ್ಲಿ ಬೆಳೆಯುವ ಈ ದಂಪತಿಗೆ ಹೊಸ ಕೃಷಿಯ ಅನ್ವೇಷಣೆಯಲ್ಲಿ ತೊಡಗಿದಾಗ ಅಕ್ವಾಪೋನಿಕ್ಸ್ ಕೃಷಿ ಪದ್ಧತಿಯ ಮಾಹಿತಿ ದೊರೆಯಿತು. ಗ್ರೋ ಅಕ್ವಾಪೋನಿಕ್ಸ್ ಸತ್ಯನಾರಾಯಣ ಅವರು ಸಹಕಾರ ನೀಡಿದರು. ತರಬೇತಿ ಕಾರ್ಯಗಾರದಲ್ಲಿಯು ಮಾಹಿತಿ ಪಡೆದುಕೊಂಡರು. ಊರ ಕೃಷಿಯ ಅನುಭವ ಹೊಂದಿದ್ದ ಇಬ್ಬರಿಗೂ ಹೊಸ ಕೃಷಿ ಪದ್ಧತಿ ಮೇಲೆ ಆಸಕ್ತಿ ಮೂಡಿ ಅದನ್ನು ಅನುಷ್ಠಾನಿಸಿದರು. ಎರಡು ರೀತಿಯ ಆದಾಯ ಇಲ್ಲಿ ಮೀನಿನಿಂದಲೂ ಆದಾಯ, ಕೃಷಿಯಿಂದಲು ಆದಾಯ ದೊರೆಯುತ್ತದೆ. ಆರು ತಿಂಗಳಿಗೊಮ್ಮೆ ಅಕ್ವೇರಿಯಾಂ ಮೀನು (ಯಾವುದೇ ಮೀನುಗಳನ್ನು ಸಾಕಬಹುದು) ಮಾರಾಟ ಸಾಧ್ಯವಾಗುತ್ತದೆ. ಬೆಳೆಯುವ ಗಿಡವು ಫಸಲು ಕೊಡುವ ಕಾಲಮಾನ ಆಧರಿಸಿ ಆದಾಯ ಸಿಗುತ್ತದೆ. ದಿನ, ಎರಡು ವಾರ, ತಿಂಗಳಿಗೊಮ್ಮೆ ಕೂಡ ಫಸಲು ಸಿಗುವ ಬೆಳೆಯನ್ನು ಬೆಳೆಯಬಹುದು. ಜಲಜಶ್ರೀ ಫಾರ್ಮ್ಸನಲ್ಲಿ ಆದಾಯದ ದೃಷ್ಟಿಯಿಂದ ಒನಿಯನ್ ಚೈಪ್ಸ್, ಬಾಕ್ ಚಾಯೇ ಮುಖ್ಯ ಕೃಷಿ. ಇದಕ್ಕೆ ವಿದೇಶಿ, ದೇಶಿಯ ಮಾರುಕಟ್ಟೆಗಳಲ್ಲಿ ಬೇಡಿಕೆ ಇದ್ದು, ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತದೆ. ಜತೆಗೆ ಟೊಮೊಟೋ, ಪುದಿನ ಮೊದಲಾದ ಬೆಳೆಗಳು ಇಲ್ಲಿವೆ ಎನ್ನುವ ದಂಪತಿಗಳು, ಈ ಹೊಸ ಪದ್ಧತಿಯ ಕೃಷಿ ಅನುಷ್ಠಾನದ ಸಂದರ್ಭದಲ್ಲಿ ತಾಂತ್ರಿಕ ಪರಿಣಿತರ ಸಲಹೆ, ಸಂಪರ್ಕ ಪಡೆದರೆ ಉತ್ತಮ ಫಲಿತಾಂಶ ದೊರೆಯಲು ಸಾಧ್ಯವಿದೆ ಎನ್ನುತ್ತಾರೆ. ನಮ್ಮದು ಕೃಷಿ ಕುಟುಂಬ. ಸಾಪ್ಟ್ ವೇರ್ ಎಂಜಿನಿಯರ್ ಆಗಿರುವ ಮಗ ಮತ್ತು ಸೊಸೆ ಬೆಂಗಳೂರಿನಲ್ಲಿ ಅಕ್ವಾಪೋನಿಕ್ಸ್ ಕೃಷಿ ಪ್ರಾರಂಭಿಸುವ ಮೂಲಕ ಯಶಸ್ಸು ಸಾಧಿಸುತ್ತಿದ್ದಾರೆ. ಜತೆಗೆ ಈ ಹೊಸ ವಿಧಾನವನ್ನು ಊರಲ್ಲೂ ಅನುಷ್ಠಾನಿಸುವ ಇರಾದೆ ಹೊಂದಿದ್ದಾರೆ. ಅದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ ಎನ್ನುತ್ತಾರೆ ನರಸಿಂಹ ತೇಜಸ್ವಿ ಅವರ ತಂದೆ ತಿರುಮಲೇಶ್ವರ ಭಟ್ ಕಾನಾವು. ಕಿರಣ್ ಪ್ರಸಾದ್ ಕುಂಡಡ್ಕ