Advertisement

ಸಂಸತ್‌ ಕಲಾಪ ಆಡಳಿತ-ವಿಪಕ್ಷಗಳ ಮೇಲಾಟದ ಕಣವಾಗಬಾರದು

12:40 AM Dec 23, 2021 | Team Udayavani |

ಸಂಸತ್‌ನ ಚಳಿಗಾಲದ ಅಧಿವೇಶನ ನಿಗದಿತ ದಿನಕ್ಕಿಂತ ಒಂದು ದಿನ ಮುನ್ನವೇ ಅಂತ್ಯಗೊಂಡಿದೆ. ನ. 29ರಂದು ಆರಂಭಗೊಂಡಿದ್ದ ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯಕಲಾ ಪಗಳು ಡಿ. 23ರ ಗುರುವಾರದಂದು ಮುಕ್ತಾಯಗೊಳ್ಳಬೇಕಿತ್ತು.

Advertisement

ಆದರೆ ವಿಪಕ್ಷಗಳ ನಿರಂತರ ಗದ್ದಲ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಸದನಗಳ ಕಲಾಪವನ್ನು ಬುಧವಾರವೇ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ಬಾರಿಯ ಅಧಿವೇಶನದಲ್ಲಿ ಹಲವಾರು ಮಹತ್ವದ ಮಸೂದೆಗಳನ್ನು ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅವುಗಳಿಗೆ ಒಪ್ಪಿಗೆ ಪಡೆದುಕೊಳ್ಳುವ ತರಾತುರಿಯಲ್ಲಿದ್ದ ಸರಕಾರಕ್ಕೆ ವಿಪಕ್ಷಗಳ ಗದ್ದಲ ರಾಜ್ಯಸಭೆಯಲ್ಲಿ ಕೊಂಚ ಹಿನ್ನಡೆ ಉಂಟು ಮಾಡಿದರೆ ಉಳಿದಂತೆ ಲೋಕಸಭೆಯಲ್ಲಿ ಬಹುತೇಕ ಮಸೂದೆಗಳ ಮಂಡನೆ ಮತ್ತು ಅವು ಗ ಳಿಗೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯ ಅಧಿವೇಶನದಲ್ಲಿ ಲೋಕಸಭೆಯ ಕಲಾಪಗಳು ಶೇ. 82ರಷ್ಟು ಉತ್ಪಾದಕತೆ ಸಾಧಿಸಿದ್ದರೆ ರಾಜ್ಯಸಭೆ ಉತ್ಪಾದಕತೆ ಪ್ರಮಾಣ ಕೇವಲ ಶೇ. 48ರಷ್ಟು. ಚಳಿಗಾಲದ ಅಧಿವೇಶನದ ಮೊದಲ ದಿನದಂದೇ ಎರಡೂ ಸದನಗಳಲ್ಲಿ ವಿವಾದಿತ ಮೂರೂ ಕೃಷಿ ಮಸೂದೆಗಳನ್ನು ವಾಪಸು ಪಡೆಯುವ ಮಸೂದೆಯನ್ನು ಮಂಡಿಸಿದ ಕೇಂದ್ರ ಸರಕಾರ ವಿಪಕ್ಷ ಸದಸ್ಯರ ಗದ್ದಲ, ಪ್ರತಿಭಟನೆಯ ನಡುವೆಯೇ ಉಭಯ ಸದನಗಳ ಒಪ್ಪಿಗೆ ಪಡೆದು ಕೊಳ್ಳುವಲ್ಲಿ ಸಫ‌ಲವಾಯಿತು. ಇದೇ ವೇಳೆ ಕಳೆದ ಅಧಿವೇಶನದ ಅವಧಿಯಲ್ಲಿ ಸದನದಲ್ಲಿ ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಯಲ್ಲಿನ ವಿಪಕ್ಷಗಳ 12 ಸದಸ್ಯರನ್ನು ಸಭಾಧ್ಯಕ್ಷರು ಹಾಲಿ ಅಧಿವೇಶನದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರಿಂದಾಗಿ ಕ್ರುದ್ಧರಾದ ವಿಪಕ್ಷ ಸದಸ್ಯರು ಸತತವಾಗಿ ಪ್ರತಿಭಟನೆ ನಡೆಸಿದ್ದೇ ಅಲ್ಲದೆ ಸದನದ ಕಲಾಪಗಳಿಗೆ ಅಡಚಣೆ ಉಂಟು ಮಾಡುತ್ತಲೇ ಬಂದಿದ್ದರು.

ಈ ಬಾರಿಯ ಅಧಿವೇಶನದ ವೇಳೆ ಕೇಂದ್ರ ಸರಕಾರ ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ 10 ಮಸೂದೆಗಳನ್ನು ಮಂಡಿಸಿತು. ಕೃಷಿ ಮಸೂದೆಗಳ ವಾಪಸ್‌, ಇ.ಡಿ. ಮತ್ತು ಸಿಬಿಐ ನಿರ್ದೇಶಕರ ಸೇವಾವಧಿ ಯನ್ನು 5 ವರ್ಷಗಳಿಗೆ ನಿಗದಿ, ಚುನಾವಣ ನಿಯಮ ತಿದ್ದುಪಡಿ ಮಸೂದೆ ಸಹಿತ ಒಟ್ಟಾರೆ 11 ಮಸೂದೆಗಳಿಗೆ ಉಭಯ ಸದನಗಳ ಒಪ್ಪಿಗೆ ಪಡೆದುಕೊಂಡಿತು. ಜೀವ ವೈವಿಧ್ಯ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳ ಜಂಟಿ ಸಮಿತಿಗೆ ಒಪ್ಪಿಸಲಾದರೆ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 21 ವರ್ಷಗಳಿಗೆ ಹೆಚ್ಚಿಸುವ ಮಸೂದೆ ಸಹಿತ 5 ಮಸೂದೆಗಳನ್ನು ಸ್ಥಾಯೀ ಸಮಿತಿಗೆ ಒಪ್ಪಿಸಲಾಗಿದೆ.

ಅಧಿವೇಶನದಲ್ಲಿ ಕೆಲವೊಂದು ಮಹತ್ವದ ಮಸೂದೆಗಳನ್ನು ಉಭಯ ಸದನಗಳಲ್ಲಿ ಮಂಡಿಸಲಾಯಿತಾದರೂ ಯಾವುದೇ ಮಸೂದೆಯ ಬಗೆಗೆ ಉಭಯ ಸದನಗಳಲ್ಲಿ ಸವಿಸ್ತಾರವಾದ ಚರ್ಚೆ ನಡೆಯಲಿಲ್ಲ. ಸರಕಾರ ಈ ಮಸೂದೆಗಳಿಗೆ ವಿಪಕ್ಷ ಸದಸ್ಯರ ಕಿರುಚಾಟದ ನಡುವೆಯೇ ಧ್ವನಿಮತದಿಂದ ಅಂಗೀಕಾರ ಪಡೆದುಕೊಂಡರೆ ವಿಪಕ್ಷಗಳು ಸರಕಾರವನ್ನು ವಿರೋಧಿಸುವುದೇ ತಮ್ಮ ಕರ್ತವ್ಯ ಎಂಬಂತೆ ವರ್ತಿಸಿದವು. ಈ ಹಿಂದಿನ ಅಧಿವೇಶನಗಳಂತೆ ಸಂಸತ್‌ ಕಲಾಪಗಳು ಸಂಪೂರ್ಣ ಗದ್ದಲ, ರಾದ್ಧಾಂತದಲ್ಲಿ ಕೊಚ್ಚಿ ಹೋಗಲಿಲ್ಲ ಎಂಬುದಷ್ಟೇ ಈ ಬಾರಿಯ ಅಧಿವೇಶನದಲ್ಲಿ ಸಮಾಧಾನ ಪಡುವ ವಿಚಾರ. ಸಂಸತ್‌ ಅಥವಾ ವಿಧಾನಸಭೆಗಳ ಅಧಿವೇಶನಗಳನ್ನು “ನಾಮ್‌ ಕೇ ವಾಸ್ತೆ’ ನಡೆಸುವ ಬದಲಾಗಿ ಇದರ ವೆಚ್ಚವನ್ನು ಜನಕಲ್ಯಾಣ ಯೋಜನೆ ಗಳಿಗಾದರೂ ಬಳಸುವುದೇ ಹೆಚ್ಚು ಸೂಕ್ತವಾದೀತು. ಈ ಅಧಿವೇಶನಗಳು ಕೇವಲ ಹರಕೆ ಸಂದಾಯವಾಗು ತ್ತಿದೆಯೇ ವಿನಾ ಪ್ರಜಾಸತ್ತೆಯ ನೈಜ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ವಸ್ತುನಿಷ್ಠ ಚರ್ಚೆ, ಟೀಕೆ, ವಿಮರ್ಶೆ ನಡೆಯದಿರುವುದು ಪ್ರಜೆಗಳನ್ನು ಒಂದಿಷ್ಟು ಚಿಂತನೆಗೆ ಹಚ್ಚಿರುವುದು ಸುಳ್ಳಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next