ಪಣಜಿ: ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯಗಳ ಬಳಿಕ ಇದೀಗ ಗೋವಾ ರಾಜ್ಯದಲ್ಲಿ ವಾಟರ್ ಬೆಲ್ ಕಾರ್ಯಕ್ರಮವನ್ನು ಅನುಷ್ಠಾನಗೊಳ್ಳುತ್ತಿದೆ. ಶಾಲಾ ಮಕ್ಕಳು ಸಾಕಷ್ಟು ನೀರು ಕುಡಿಯಲು ಉತ್ತೇಜಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಈ ರಾಜ್ಯಗಳು ಅಳವಡಿಸಿಕೊಂಡಿವೆ.
ಈ ರಾಜ್ಯಗಳಲ್ಲಿ ಪ್ರತೀ ತರಗತಿ ಮುಗಿದಾಕ್ಷಣ ಬಾರಿಸುವ ಗಂಟೆಯ ಸದ್ದಿನೊಂದಿಗೆ ವಾಟರ್ ಬೆಲ್ ಕೂಡ ಮೊಳಗುತ್ತಿದೆ. ಇದೀಗ ಗೋವಾ ಸರಕಾರ ಸಹ ನೀರು ಕುಡಿಯಲೆಂದೇ ಮಕ್ಕಳಿಗೆ ಸಮಯ ನಿಗದಿಪಡಿಸುವಂತೆ ತನ್ನ ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೆ ಆದೇಶ ನೀಡಿದೆ.
ಈ ಕುರಿತು ರಾಜ್ಯದ ಎಲ್ಲಾ ಶಾಲೆಗಳಿಗೂ ಸುತ್ತೋಲೆಯನ್ನು ಕಳುಹಿಸಲಾಗಿದ್ದು, ಅನುದಾನಿತ ಶಾಲೆಗಳು ಸೇರಿದಂತೆ ಸರಕಾರಿ, ಅನುದಾನರಹಿತ ಪ್ರಾಥಮಿಕ, ಮಧ್ಯಮ, ಪ್ರೌಢಶಾಲೆ ಮತ್ತು ವಿಶೇಷ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೈಲೇಶ್ ಸಿನ್ಹಾ ಹೇಳಿದ್ದಾರೆ.
ವಿದ್ಯಾರ್ಥಿಗಳು ಸಾಕಷ್ಟು ನೀರು ಕುಡಿಯದೇ ಇರುವುದರಿಂದ, ಇದು ಮಕ್ಕಳಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲದೇ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಶಾಲಾ ಮಕ್ಕಳು ನಿಯಮಿತ ನೀರು ಸೇವಿಸಬೇಕೆಂಬ ಉದ್ದೇಶದಿಂದ ವಾಟರ್ ಬೆಲ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಪ್ರತೀ ಶಾಲೆಯಲ್ಲಿ ಎರಡು ತರಗತಿ ಅವಧಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ತಲಾ ಎರಡು ನಿಮಿಷ ನೀರಿನ ವಿರಾಮ ನೀಡಲು ನಿರ್ಧರಿಸಲಾಗಿದೆ.