Advertisement

ವಾರದಲ್ಲಿ ಬರುವೆನೆಂದಿದ್ದ ಡಿಸಿ ಬರಲೇ ಇಲ್ಲ

06:55 AM May 06, 2018 | |

ಬೆಳ್ತಂಗಡಿ: ಸುತ್ತು ಬಳಸಿ ತಾಲೂಕು ಕೇಂದ್ರಕ್ಕೆ ಬರಬೇಕು. ಸುಮಾರು 150 ಕಿ.ಮೀ. ದೂರ ಕ್ರಮಿಸಬೇಕು.ಎಳನೀರು ಬಳಿ ಸುಮಾರು 7 ಕಿ.ಮೀ.ಉದ್ದದ ರಸ್ತೆ ನಿರ್ಮಾಣ ಮಾಡಿದರೆ ಜನತೆಗೆ ಉಪಯೋಗವಾಗುತ್ತ ಎಂದು ಜಿಲ್ಲಾಧಿಕಾರಿ ಮಲವಂತಿಗೆಗೆ ಭೇಟಿ ನೀಡಿದ್ದ ಸಂದರ್ಭ ಮನವರಿಕೆ ಮಾಡಲಾಗಿತ್ತು. ಅವರೂ ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸುವುದಾಗಿ ತಿಳಿಸಿ ದ್ದರು. ಆದರೆ ಇಲ್ಲಿಯ ವರೆಗೂ ಬಂದಿಲ್ಲ. ನಮ್ಮ ಕಷ್ಟಕ್ಕೆ ಪರಿಹಾರ ಯಾವಾಗಲೋ ಎಂಬ ಚಿಂತೆಯಲ್ಲಿದ್ದಾರೆ ನಕ್ಸಲ್‌ ಪೀಡಿತ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ಜನತೆ. ಇದು ಈ ಭಾಗದಲ್ಲಿ ಕ್ಷೇತ್ರ ಸಂಚಾರ ಸಂದರ್ಭ “ಉದಯವಾಣಿ’ಗೆ ಸಿಕ್ಕಿದ ಚಿತ್ರಣ. 

Advertisement

ಮಲವಂತಿಗೆ, ಎಳನೀರು, ಅಂಬಟೆಮಲೆ ಮೊದಲಾದೆಡೆ ಜನತೆ ಮೂಲ ಸೌಲಭ್ಯಗಳು ಲಭಿಸದೆ ಪರದಾಡುತ್ತಿದ್ದಾರೆ. ಮುಖ್ಯವಾಗಿ ರಸ್ತೆ, ವಿದ್ಯುತ್‌, ಹಕ್ಕುಪತ್ರ ಇತ್ಯಾದಿ ಬೇಕಾಗಿವೆ. ಈ ಬಗ್ಗೆ ಜನರು ಮನಬಿಚ್ಚಿ ಮಾತಾಡುತ್ತಾರೆ; ಅಭಿವೃದ್ಧಿ ಕೆಲವರಿಗಷ್ಟೇ ಸೀಮಿತ, ನಗರ ಪ್ರದೇಶದಿಂದ ದೂರದಲ್ಲಿರುವ ನಮಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಮುಖ್ಯವಾಗಿ ಉತ್ತಮ ರಸ್ತೆ, ಆಸ್ಪತ್ರೆ ಮೊದಲಾದವನ್ನು ಪಡೆಯಲು ಪರದಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
 
ಕಾಡುಪ್ರಾಣಿಗಳ ಹಾವಳಿ
ಕುದುರೆಮುಖ ರಾ. ಉದ್ಯಾನವನ ಅಂಚಿನಲ್ಲಿ ರುವ ಜನತೆ ಮುಖ್ಯವಾಗಿ ಕಾಡುಪ್ರಾಣಿಗಳ ಹಾವಳಿಯಿಂದ ಸಂಕಷ್ಟಪಡುತ್ತಿದ್ದಾರೆ.  ಆನೆ ದಾಳಿ, ಕಾಡುಕೋಣಗಳ ಉಪಟಳ ಹೆಚ್ಚಿದೆ. ಈ ಬಗ್ಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬೆಳೆಹಾನಿ ಯಾದ ಬಳಿಕ ಅಧಿಕಾರಿಗಳು ಆಗಮಿಸುತ್ತಾರೆ ಎನ್ನುವ ಮಾತು ಗಳೂ ಉದಯವಾಣಿ ಸಂಚಾರ ಸಂದರ್ಭ ಕೇಳಿಬಂದಿವೆ. 

ಬಹಿಷ್ಕಾರದ ಎಚ್ಚರಿಕೆ
ಚುನಾವಣೆ ಘೋಷಣೆಯಾದ ಕೂಡಲೇ ಎಳನೀರು ಜನತೆ ಮೂಲ ಸೌಲಭ್ಯ ಒದಗಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಬಳಿಕ ತಾ.ಪಂ.ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನವೊಲಿಸಿದ್ದಾರೆ. ಇದಾದ ಬಳಿಕ ದೇವಗಿರಿ, ಅಂಬಟೆಮಲೆ ಗ್ರಾಮಸ್ಥರೂ ರಸ್ತೆ, ಇತರ ಸೌಲಭ್ಯ ಕಲ್ಪಿಸದೆ ಇದ್ದರೆ ಮತದಾನ ಬಹಿಷ್ಕಾರ ಅಥವಾ ನೋಟಾ ಚಲಾಯಿಸುವ ಎಚ್ಚರಿಕೆ ನೀಡಿದ್ದರು. ಆದರೆ ಸ್ಥಿತಿಗತಿ ಇನ್ನೂ ಬದಲಾಯಿಸಿಲ್ಲ ಎನ್ನುತ್ತಾರೆ ಹಿರಿಯರು. 

ಸೇತುವೆಯಿಲ್ಲ
ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಹಲವೆಡೆ ಸೇತುವೆಗಳ ಅಗತ್ಯ ಇದೆ. ಮಳೆಗಾಲದಲ್ಲಿ ನದಿ-ತೊರೆಗಳು ಉಕ್ಕಿ ಹರಿದರೆ ಹಲವು ಪ್ರದೇಶಗಳು ದ್ವೀಪವಾಗುತ್ತವೆ. ಮಳೆಗಾಲಕ್ಕೆ ಮುನ್ನ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕಾಗಿದೆ. ಇದು ಮುಗಿಯದ ಸಮಸ್ಯೆ ಎನ್ನುತ್ತಾರೆ ಸ್ಥಳೀಯರಾದ ಚಂದಪ್ಪ. ಸಂದೇಶಗಳು ಹರಿದಾಡುತ್ತಿದ್ದು, ಜನರು ಚರ್ಚೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಯಾವ ರೀತಿ ಪ್ರತ್ಯುತ್ತರ ನೀಡಲಿದೆ ಎಂಬ ಚರ್ಚೆ ಚಹಾ ಅಂಗಡಿಯೊಂದರ ಮುಂದೆ ಕೇಳಿಬಂತು. 

ಮಂಜೂರಾಗಿದ್ದ  ಸೇತುವೆಯೂ ಕೈತಪ್ಪಿದೆ.
ಮಲವಂತಿಗೆ ಬಳಿ ನಂದಿಕಾಡು ಹೊಳೆಗೆ ಸೇತುವೆ ನಿರ್ಮಾಣಕ್ಕೆಂದು ಹಣ ಬಿಡುಗಡೆಯಾಗಿತ್ತು. ಆದರೆ ಅಂದಾಜು ಪಟ್ಟಿಯಂತೆ ಹೆಚ್ಚುವರಿ ಹಣ ಬೇಕಾಗಿದ್ದರಿಂದ ಮಂಜೂರಾಗಿದ್ದ ಸೇತುವೆಯೂ ಕೈತಪ್ಪಿದೆ. ಮಳೆಗಾಲದಲ್ಲಿ ನಿತ್ಯ ಪರದಾಡಬೇಕಾದ ಪರಿಸ್ಥಿತಿ ಇದೆ. ಈ ಪ್ರದೇಶಗಳಿಗೆ ಹೆಚ್ಚಿನ ಸರಕು ಸಾಗಿಸಲು ಜೀಪೊಂದೇ ಸಂಚಾರ ಸಾಧನ. ಜೋರಾಗಿ ಮಳೆ ಸುರಿದರಂತೂ ಬೇರೆಡೆ ತೆರಳಲು ಸಾಧ್ಯವಾಗುವುದಿಲ್ಲ. 
– ಉದಯ, ರಾ. ಉದ್ಯಾನವನ ಅಂಚಿನ ನಿವಾಸಿ

Advertisement

– ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next