Advertisement

ಹೃದಯ ಬೆಸೆಯುವ ಗುಣವಿರಬೇಕು :ಡಾ|ವಿಜಯ ಬಲ್ಲಾಳ್‌

12:48 AM Mar 05, 2020 | Sriram |

ಉಡುಪಿ: ಭವಿಷ್ಯತ್ತಿಗೆ ಗಟ್ಟಿ ಹೆಜ್ಜೆಗಳ ಸ್ಪಷ್ಟ ರೂಪುರೇಷೆ ನೀಡುವಂತಹ ಕಾರ್ಯಕ್ರಮಗಳ ಅಗತ್ಯತೆ ಇಂದಿದೆ. ಅವುಗಳನ್ನು ಶಿಬಿರಗಳು ತುಂಬುತ್ತಿವೆ. ಜೀವನದಲ್ಲಿ ಶಿಸ್ತು, ಆರೋಗ್ಯದ ಕಡೆ ಹೆಚ್ಚು ಗಮನ ವಿರಬೇಕು. ಉತ್ತಮ ಸಂಸ್ಕಾರದ ಮೂಲಕ ಹೃದಯ ಸಂಬಂಧಗಳನ್ನು ಬೆಸೆಯುವ ಗುಣಗಳನ್ನು ಮಕ್ಕಳು ಹೊಂದಿರಬೇಕು ಎಂದು ಶ್ರೀ ಅಂಬಲ ಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಹೇಳಿದರು.

Advertisement

ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಸಹಯೋಗದಲ್ಲಿ ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗ ಉಡುಪಿ ಆಯೋಜಿಸಿರುವ ಅಂಬಲಪಾಡಿ ಸನಿವಾಸ ಶಿಬಿರದ ಸಮಾರೋಪದಲ್ಲಿ ಬುಧವಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊಬೈಲ್‌ ಹಿಡಿದು ಒಳಗೆ ಓಡಬೇಡಿ
ದೈಹಿಕ ಆರೋಗ್ಯಕ್ಕೆ ಸಾತ್ವಿಕ ಆಹಾರ ಸೇವನೆ ಅವಶ್ಯವಾಗಿದೆ. ಹೊರಗಿನ ಆಹಾರಕ್ಕಿಂತ ಮನೆಯಲ್ಲಿ ಅಮ್ಮ ಮಾಡುವ ಅಡುಗೆಯನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಸಿಗುವ ಸಂಸ್ಕಾರ ಜೀವನಕ್ಕೆ ಅತ್ಯಮೂಲ್ಯ. ಅವುಗಳನ್ನು ಪಾಲಿಸುವುದರ ಜತೆಗೆ ಮಕ್ಕಳು ಭಾವನಾತ್ಮಕ ಸಂಬಂಧಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಮನೆಗೆ ಪರಿಚಯಸ್ಥರು, ಸಂಬಂಧಿಕರು ಬಂದಾಗ ಮೊಬೈಲ್‌ ಕೈಯಲ್ಲಿ ಹಿಡಿದುಕೊಂಡು ಒಳಗೆ ಓಡಬೇಡಿ ಎಂದು ಮಕ್ಕಳಿಗೆ ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಬ್ಯಾಂಕ್‌ ಅಧಿಕಾರಿ ಬಾಲಕೃಷ್ಣ ಭಟ್‌ ಅವರು ಶಿಬಿರದಲ್ಲಿ ಕಲಿತ ಶಿಕ್ಷಣವನ್ನು ಜೀವಿತ ಅವಧಿಯಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ. ಶಿಬಿರಗಳಿಂದ ಸಿಗುವ‌ ಜ್ಞಾನ ಬದುಕು ರೂಪುಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದರು. ಸಮಾಜಸೇವಕ ಸತ್ಯನಾರಾಯಣ ಪುರಾಣಿಕ್‌ ಅವರು ಜೀವನದಲ್ಲಿ ಯಶಸ್ಸು ಸಾಧಿಸಲು ಅದೃಷ್ಟ ಮಾತ್ರ ಸಾಕಾಗುವುದಿಲ್ಲ. ಕಠಿನ ಶ್ರಮದ ಜತೆಗೆ ಸಾಧನೆ ಮಾಡುವುದು ಮುಖ್ಯ ಎಂದರು.

ನಿವೃತ್ತ ಪ್ರಾಂಶುಪಾಲೆ ತಾರಾದೇವಿ ಅವರು ಶಿಬಿರದಲ್ಲಿ ಕಲಿಯುವಂತಹ ಅನೇಕ ಸಂಗತಿಗಳಿವೆ. ಶಿಬಿರಗಳಲ್ಲಿ ಭಾಗವಹಿಸುವುದಕ್ಕೆ ಹಿಂಜರಿಕೆ ಇರಬಾರದು ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌, ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಕಿಶನ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಪ್ರವೀಣ್‌ ಗುಡಿ ಅವರು ಅನುಭವ ಹಂಚಿಕೊಂಡರು. ಎಂ. ಗಂಗಾಧರ ರಾವ್‌ ಸ್ವಾಗತಿಸಿದರು, ಮುರಲಿ ಕಡೆಕಾರ್‌ ವಂದಿಸಿದರು. ಪ್ರವೀಣ್‌ ಗುಡಿ ಅವರನ್ನು ಗೌರವಿಸಲಾಯಿತು.

Advertisement

ಶಿಬಿರದಲ್ಲಿ ಮಕ್ಕಳಿಗೆ ಹಲವು ಪಾಠ
5 ದಿನಗಳ ಕಾಲ ನಡೆದ ಶಿಬಿರದಲ್ಲಿ ಜಿಲ್ಲೆಯ ಹಲವು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳು ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಆಂಗ್ಲಭಾಷಾ ಕೌಶಲ, ಸಂವಹನ ಕೌಶಲ, ನಾಯಕತ್ವ ತರ‌ಬೇತಿ, ವ್ಯಕ್ತಿ ಮಾರ್ಗದರ್ಶನ, ಸಮೂಹ ಸಹಭಾಗಿತ್ವ, ಸಮಾಜಮುಖೀ ಚಿಂತನೆ, ಪರಿಪೂರ್ಣ ವ್ಯಕ್ತಿ ನಿರ್ಮಾಣದ ಬಗ್ಗೆ ಮಕ್ಕಳಿಗೆ ಶಿಬಿರದಲ್ಲಿ ಕಲಿಸಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next