ಯಾವತ್ತೂ ಅಷ್ಟೇ; ಸುರಕ್ಷಿತ ಅನ್ನಿಸಿದ ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಹೀಗೆ ಹಣ ಹೂಡುವ ಮುನ್ನ ಆ ಯೋಜನೆಯ ಹಿಂದಿರುವ ಸಾಧಕ ಬಾಧಕಗಳನ್ನು ಗಮನಿಸಬೇಕು.
ಹೂಡಿಕೆಯ ಬಗೆಗೆ ಇರುವ ಯಾವುದೇ ಸೆಮಿನಾರ್, ಭಾಷಣಗಳನ್ನು ಕೇಳುವಾಗ ಮೊದಲು ಹೇಳುವುದೇ ಕೆಲವು ಘಟನೆಗಳು. ಹತ್ತು ವರ್ಷದ ಹಿಂದೆ ಕೇವಲ 10 ಸಾವಿರ ರುಪಾಯಿಗಳನ್ನು ಯಾವುದಾದರೂ ವ್ಯವಹಾರದಲ್ಲಿ ತೊಡಗಿಸಿದ್ದಿದ್ದರೆ- 25 ವರ್ಷಗಳ ಹಿಂದೆ ಕೇವಲ 8 ಸಾವಿರ ಹಾಕಿ ಈ ಷೇರು ಖರೀದಿಸಿದ್ದರೆ, ಈಗ ಇಷ್ಟು ಲಕ್ಷ ಆಗುತ್ತಿತ್ತು, ಇಷ್ಟು ಕೋಟಿ ಆಗುತ್ತಿತ್ತು ಎಂದೆಲ್ಲಾ ಹಲವರು ಅಂಕಿ ಅಂಶಗಳ ಸಹಿತ ಹೇಳುವುದುಂಟು. ಅವನ ಮಾತು ಸುಳ್ಳಲ್ಲ ಎನ್ನುವುದಕ್ಕೆ ಅಂಕಿ ಅಂಶಗಳೇ ಕಣ್ಮುಂದೆ ಇರುತ್ತವೆ. ಹಾಗಾದರೆ ಇದು ನಮಗೇಕೆ ಸಾಧ್ಯ ಆಗುವುದಿಲ್ಲ? ಮಾತುಗಳನ್ನು ಕೇಳುತ್ತ ಕುಳಿತ ಎಲ್ಲರಿಗೂ ಅನ್ನಿಸುವ ವಿಷಯ.
ನಮ್ಮ ಮನಸ್ಸು, ಭರವಸೆಯೊಂದಿಗೆ ಆಸೆಯಿಂದಲೇ ಇಂಥ ಭಾಷಣಗಳನ್ನು ಕೇಳುತ್ತದೆ. ಅಷ್ಟೇ ಅಲ್ಲ, ಅಲ್ಲಿಂದ ವಾಪಸ್ ಬರುತ್ತಿದ್ದಂತೆ ಅಥವಾ ಅಲ್ಲಿಯೇ ಈ ಬಾರಿ ನಾವೂ ಒಂದಷ್ಟು ಹಣವನ್ನು ಯಾವುದಾದರೂ ಯೋಜನೆಯಲ್ಲಿ ಬಂಡವಾಳ ಹೂಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು, ಒಂದು ರೀತಿಯಿಂದ ಬಾಗಿಲು ತೆರೆದ ಹಾಗೆ. ಬಾಗಿಲು ತೆರೆಯಿತು ಆದರೆ ಒಳ ಹೋಗಬೇಕಾದವರು ನಾವು. ಒಳಗೂ ಕೈ ಹಿಡಿದುಕೊಂಡೇ ಹೋಗು ಅಂದರೆ ಒಳಗಿರುವ ದೇವರ ದರ್ಶನ ಆಗಬೇಕಾದದ್ದು ನಮಗೆ. ಇಂತಹ ಹೂಡಿಕೆಗಳ ಬಗೆಗೆ ಸ್ನೇಹಿತರ ನಡುವೆ, ಸಂಬಂಧಿಕರ ನಡುವೆ ಮಾತನಾಡುವಾಗ ಹೂಡಿಕೆಯ ವಿಷಯ ಬಂದಾಗಲೂ ಇಂತಹುದೇ ವರ್ಣರಂಜಿತ ಮಾತುಗಳೇ ಇರುತ್ತವೆ. ಆದರೆ ನಾವು ನೆನಪಿಟ್ಟುಕೊಳ್ಳಬೇಕಾದ ಅತಿಮುಖ್ಯ ಸಂಗತಿಯೊಂದಿದೆ ಏನೆಂದರೆ: ಇಂತಹ ಎಲ್ಲ ಹೂಡಿಕೆಗೂ ಕೂಡ ಅಲ್ಪಮಟ್ಟಿಗಿನ ಪರಿಶ್ರಮ, ಆರ್ಥಿಕ ಶಿಸ್ತು ಬೇಕೇ ಬೇಕು.
ಹೇಳುವವರಿಗೇನಂತೆ? ಅವರು ಎಲ್ಲವನ್ನೂ ಬಲ್ಲವರಂತೆ ಹೇಳಿಬಿಡುತ್ತಾರೆ: ನೋಡಿ, ಈ ಯೋಜನೆಯಲ್ಲಿ ಹಣ ತೊಡಗಿಸಿದರೆ ಸಾಕು. ಆನಂತರ ನೀವು ಏನೂ ಮಾಡಬೇಕಾಗಿಲ್ಲ. ವರ್ಷ ಕಳೆಯುತ್ತಾ ಹೋದಂತೆ ಅದು ತಂತಾನೇ ಹೆಚ್ಚಾಗುತ್ತಾ ಹೋಗುತ್ತದೆ ! ಇಂಥ ಮಾತನ್ನು ಕಣ್ಮುಚ್ಚಿ ನಂಬುವವರಿಗೆ ಕೊರತೆ ಇಲ್ಲ. ಹೂಡಿದ ಹಣ ಇಷ್ಟು ವರ್ಷಕ್ಕೆ ಇಷ್ಟಾಗುತ್ತದೆ ಎನ್ನುವ ಅಂಕಿ ಅಂಶ ನೋಡಿ ಬೆರಗಾಗುವ ನಾವು ಯಾವುದೇ ತಾರ್ಕಿಕ ಆಲೋಚನೆಯೂ ಇಲ್ಲದೆ, ಏನೂ ಕೆಲಸ ಮಾಡುವ ಹಾಗಿಲ್ಲ ಬಿಡು ಎಂದು ಸಂತೋಷಿಸುತ್ತೇವೆ.
ನಾವು ಹಾಕಿದ ಹಣ ಹಾಗೇ ಸುಮ್ಮನೆ ಬೆಳೆಯುತ್ತಾ ಹೋಗುತ್ತದೆ ಎನ್ನುವ ಭರವಸೆಯೊ ಭ್ರಮೆಯೋ ನಮ್ಮದಾಗುತ್ತದೆ. ಕೇವಲ ಗಿಡ ನೆಟ್ಟರೆ ಸಾಕಾಗುವುದಿಲ್ಲ ಅದಕ್ಕೆ ಕಾಲ ಕಾಲಕ್ಕೆ ಕಳೆ ತೆಗೆದು ಗೊಬ್ಬರ ನೀರು ಹಾಕಬೇಕು. ಹಾಗೇ ನಮ್ಮ ಹಣವನ್ನು ಉಳಿಸಿದ ನಂತರ ಅದನ್ನು ಹೇಗೆ ಬೆಳೆಸಬೇಕು ಎಂದು ಯೋಚಿಸುವಿರಾದರೆ, ಅದನ್ನು ಹೇಗೆ ಎಂದು ಅರಿಯುವ ಪ್ರಯತ್ನ ಮಾಡಲೇ ಬೇಕು. ಅದು ಸ್ಪಷ್ಟ ಆಗದಿದ್ದರೆ ಸ್ಪಷ್ಟ ಆಗುವರೆಗೆ ಅದನ್ನು ಸುರಕ್ಷಿತವಾದ ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಹಣ ಮಾಡಬೇಕು ಎನ್ನುವ ಆಸೆ ಒಂದೇ ಸಾಲದು ಅದಕ್ಕೆ ಶ್ರಮಿಸುವುದೂ ಆಗಬೇಕು.