ನವದೆಹಲಿ: ಜೂನ್ ಮೂವತ್ತೇ ಕೊನೆ. ಇದಾದ ಬಳಿಕ, ಆಧಾರ್ ಇಲ್ಲದೇ ನಿಮಗೆ ಸರ್ಕಾರಿ “ಫಲ’ ಸಿಗೋದು ಬಲು ಕಷ್ಟ. ಅಷ್ಟೇ ಅಲ್ಲ, ಜು.1 ರಿಂದ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಆಧಾರ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು. ಇಲ್ಲದಿದ್ದರೆ ಫೈಲ್ ಮಾಡಲು ಆಗುವುದೇ ಇಲ್ಲ.
ಶುಕ್ರವಾರವಷ್ಟೇ ಪ್ಯಾನ್ ಜತೆ ಆಧಾರ್ ಲಿಂಕ್ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, ಇದಕ್ಕೆ ಇದ್ದ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಿತ್ತು. ಈ ಸಂಬಂಧ ಇದೀಗ ಅಧಿಕೃತ ಪ್ರಕಟಣೆ ಹೊರಡಿಸಿರುವ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ), ಜು.1 ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಕಡ್ಡಾಯವಾಗಿ ಆಧಾರ್ ಜೋಡಿಸಲೇಬೇಕು ಎಂದು ಸೂಚಿಸಿದೆ. ಆದರೆ ಸುಪ್ರೀಂ ಆದೇಶದಂತೆ ಆಧಾರ್ ಮಾಡಿಸಿಕೊಳ್ಳದೇ ಇರುವವರಿಗೆ ವಿನಾಯಿತಿ ಕೊಟ್ಟಿದೆ.
ಈ ನಡುವೆ, ಮತ್ತೂಂದು ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಜೂ.30ರ ನಂತರ ಆಧಾರ್ ಇಲ್ಲದೇ ಇರುವವರಿಗೆ ಸರ್ಕಾರದಿಂದ ಯಾವುದೇ ಫಲಾನುಭವ ಸಿಗುವುದಿಲ್ಲ ಎಂದಿದೆ. ಈಗಾಗಲೇ ಸಾಮಾಜಿಕ ಕಲ್ಯಾಣ ಇಲಾಖೆ ಕಡೆಯಿಂದ ಫಲಾನುಭವ ಪಡೆಯುತ್ತಿರುವವರಿಗೆ ಆಧಾರ್ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರ, ಈ ಸಂಬಂಧ ಯಾವುದೇ ಅರ್ಜಿಗಳು ಬಂದರೂ, ಅದರನ್ವಯ ತಮ್ಮ ನಿರ್ಧಾರಕ್ಕೆ ತಡೆ ನೀಡಬೇಡಿ ಎಂದು ಮನವಿ ಮಾಡಿದೆ.
ಆದರೆ, ಇಲ್ಲೂ ಸುಪ್ರೀಂನ ಆದೇಶವನ್ನು ಪಾಲಿಸಿರುವ ಕೇಂದ್ರ ಸರ್ಕಾರ, ಇನ್ನೂ ಆಧಾರ್ ಮಾಡಿಸಿಕೊಳ್ಳದೇ ಇರುವವರಿಗೆ ಷರತ್ತುಬದ್ಧ ವಿನಾಯ್ತಿ ನೀಡಿದೆ. ಆಧಾರ್ ಮಾಡಿಸಿಕೊಳ್ಳದೇ ಇರಲು ಕಾರಣವೇನು ಎಂಬ ಬಗ್ಗೆ ವಿವರಣೆ ಕೊಡಬೇಕಾಗುತ್ತದೆ. ಒಂದು ವೇಳೆ, ಆಧಾರ್ ಕೇಂದ್ರಗಳು ಇದ್ದೂ, ನೋಂದಣಿಯಾಗದಿದ್ದರೆ ಅಂಥವರಿಗೆ ಯಾವುದೇ ವಿನಾಯ್ತಿ ಸಿಗಲ್ಲ. ಆದರೆ, ಮೂಲಸೌಕರ್ಯಗಳು ಇಲ್ಲದೇ ಆಧಾರ್ ಮಾಡಿಸಿಕೊಳ್ಳದೇ ಇರುವವರಿಗೆ ಮಾತ್ರ ಈ ವಿನಾಯ್ತಿ ಸಿಗಲಿದೆ ಎಂದು ಈ ಅಫಿಡವಿಟ್‌ನಲ್ಲಿ ಹೇಳಿದೆ.
ಈಗಾಗಲೇ ಆಧಾರ್ ಕಡ್ಡಾಯ ಮಾಡಿರುವುದರಿಂದ ಭಾರಿ ಮಟ್ಟದ ನಕಲು ತಡೆಗಟ್ಟಿದ್ದೇವೆ. ವಿಶ್ವ ಬ್ಯಾಂಕ್ ಕೂಡ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಕಡ್ಡಾಯ ಮಾಡಿರುವುದನ್ನು ಒಪ್ಪಿಕೊಂಡಿದೆ. ಅಲ್ಲದೆ ಈ ಸೋರಿಕೆ ತಡೆದಿದ್ದರಿಂದಾಗಿಯೇ ಪ್ರತಿ ವರ್ಷ 11 ಶತಕೋಟಿ ಡಾಲರ್ ಉಳಿಸಿದ್ದೇವೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
ಜು. 1 ರಿಂದ ಕಟ್ಟುನಿಟ್ಟಾಗಿ ಜಾರಿ
ಇದೇ ವೇಳೆ, ಶುಕ್ರವಾರದ ಸುಪ್ರೀಂಕೋರ್ಟ್ ಆದೇಶದ ಅನ್ವಯ ಸಿಬಿಡಿಟಿ ಹೇಳಿಕೆ ಬಿಡುಗಡೆ ಮಾಡಿದೆ. ಜು.1 ರಿಂದ ಪ್ಯಾನ್ ಮಾಡಿಸುವವರು ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲೇಬೇಕು ಮತ್ತು ಜೂ.30ರ ನಂತರ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವವರೂ ಆಧಾರ್ ಜೋಡಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ. ಅಲ್ಲದೆ ಇನ್ನೂ ಸಾಕಷ್ಟು ಸಮಯವಿದ್ದು, ಆಧಾರ್ ಇಲ್ಲದೇ ಇರುವವರು ಮಾಡಿಸಿಕೊಳ್ಳಬಹುದು ಎಂದಿದೆ.
ಸಿಬಿಡಿಟಿಯ ಮೂರಂಶ
1. ಜು. 1 ರಿಂದ ಎಲ್ಲರೂ ಐಟಿ ರಿಟರ್ನ್ಸ್ ವೇಳೆ ಆಧಾರ್ ಜೋಡಿಸಬೇಕು ಅಥವಾ ಆಧಾರ್ ಸಂಖ್ಯೆ ದಾಖಲಿಸಬೇಕು.
2. ಜು.1 ರ ನಂತರ ಪ್ಯಾನ್‌ಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ನೀಡಿ, ಎರಡನ್ನೂ ಜೋಡಿಸಬೇಕು.
3. ಇದುವರೆಗೆ ಆಧಾರ್ ಮಾಡಿಸಿಕೊಳ್ಳದೇ ಇರುವವರ ಪ್ಯಾನ್ ನಂಬರ್ ಅನ್ನು ರದ್ದು ಮಾಡಲ್ಲ. ಆದರೆ, ಜು. 1 ನಂತರ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಆಧಾರ್ ಬೇಕೇಬೇಕು.