ಮೈಸೂರು: ಮೈಯಲ್ಲಿನ ಮಲಿನವನ್ನು ತೊಳೆಯಲು ಗಂಗಾಸ್ನಾನ ಮಾಡುವುದು ಮುಖ್ಯವಲ್ಲ. ಅಂತರಂಗದ ಜ್ಞಾನಗಂಗೆಯ ಸ್ನಾನ ಮುಖ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಶ್ರೀಕ್ಷೇತ್ರ ತಿರುಮಕೂಡಲಿನಲ್ಲಿ ನಡೆದ 11ನೇ ಮಹಾ ಕುಂಭಮೇಳದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಎಲ್ಲಾ ನಾಗರಿಕತೆಗಳೂ ನದಿಗಳ ಅಕ್ಕಪಕ್ಕದಲ್ಲೇ ಬೆಳೆದು ಬಂದಿದೆ. ನದಿಗಳಿಲ್ಲದೇ ನೀರಿಲ್ಲ, ನೀರಿಲ್ಲದೆ ನಾವಿಲ್ಲ. ಜಗತ್ತಿನ ಸೃಷ್ಟಿ ಹಾಗೂ ಜಗತ್ತಿನ ವಿನಾಶಕ್ಕೂ ನೀರೆ ಕಾರಣ ಎಂದರು.
ನದಿ ಕೊಳೆಯಾದರೆ ಹೃದಯಾಘಾತ: ನೀರನ್ನು ಸರಿಯಾಗಿ ಬಳಸಿಕೊಂಡರೆ ಸೃಷ್ಟಿಯಾಗುತ್ತದೆ. ಅನಗತ್ಯವಾಗಿ ಬಳಸಿದರೆ ವಿನಾಶಕ್ಕೆ ಕಾರಣವಾಗುತ್ತದೆ. ಸ್ನಾನ ಮಾಡುವುದರಿಂದ ಮೈಯಲ್ಲಿನ ಮಲಿನ ತೊಳೆಯಬಹುದು. ಮನದ ಮಲಿನ ತೊಳೆಯಬೇಕಾದರೆ ಉಪಾಸನೆ ಅವಶ್ಯ. ನದಿಗಳು ದೇಹದ ಆರ್ಟರಿಸ್‌ಗಳಿದ್ದಂತೆ ಆರ್ಟರಿಸ್‌ಗಳನ್ನು ಚೆನ್ನಾಗಿಟ್ಟುಕೊಂಡರೆ ದೇಹ ಚೆನ್ನಾಗಿರುತ್ತೆ.
ಅದೇ ರೀತಿ ನದಿಗಳನ್ನು ಸ್ವತ್ಛವಾಗಿರಿಸಿಕೊಂಡರೆ ದೇಶ ಚೆನ್ನಾಗಿರುತ್ತೆ. ನದಿಗಳು ಕೊಳೆಯಾದರೆ ಹೃದಯಾಘಾತವಾಗುತ್ತದೆ ಎಂದರು. ಈ ಬಾರಿ ಅತ್ಯದ್ಭುತವಾಗಿ ಕುಂಭಮೇಳ ನಡೆದಿದೆ. ಲಕ್ಷಾಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಾರೆ. ಹೀಗೆ ನದಿಯಲ್ಲಿ ಮಿಂದವರು ನಾಸ್ತಿಕ ಭಾವ ಬಿಟ್ಟು, ಆಸ್ತಿಕ ಭಾವದಿಂದ ಹೋಗೋಣ ಎಂದು ಹೇಳಿದರು.
ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆಯೋಜಿಸುವ ತೀರ್ಮಾನ ಮಾಡಿದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿಯವರು ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ನಮಗೆ ಸಿದ್ಧತೆಯ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದ್ದರು. ಹಿಂದೆಲ್ಲಾ ಸರ್ಕಾರದಿಂದ ನೆರವು ಇಲ್ಲದಿದ್ದರಿಂದ ಬಹಳ ಕಷ್ಟಪಟ್ಟು ಸಿದ್ಧತೆ ಮಾಡಬೇಕಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ನೆರವು ಸಿಗುತ್ತಿರುವುರಿಂದ ಕುಂಭಮೇಳ ಯಶಸ್ವಿಯಾಗಿದೆ ಎಂದರು.
ಮೈಮನ ಶುದ್ಧವಿರಲಿ: ಕಾಗಿನೆಲೆ ಕನಕಗುರುಪೀಠ, ಮೈಸೂರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸ್ನಾನ ಮಾಡುವುದರಲ್ಲಿ ಎರಡು ವಿಧಗಳಿವೆ. ಒಂದು ಮೈ ತೊಳೆವ ಸ್ನಾನ. ಮತ್ತೂಂದು ಮನಸ್ಸು ತೊಳೆವ ಸ್ನಾನ. ನಾವು ಮನಸ್ಸು ತೊಳೆವ ಸ್ನಾನ ಮಾಡಬೇಕಿದೆ.
ಸ್ನಾನ ಮಾಡುವುದರಿಂದ ನಮ್ಮ ಮೈ-ಮನಸ್ಸು ಶುದ್ಧವಾದಂತೆ, ನಮ್ಮ ಸುತ್ತಲಿನ ಪರಿಸರವನ್ನೂ ಶುದ್ಧವಾಗಿರಿಸಿಕೊಳ್ಳಬೇಕು. ಅನ್ಯಾಯ, ಅನೀತಿಗಳನ್ನು ತ್ಯಾಗ ಮಾಡಿದರೆ ಭಗವಂತನ ಒಲುವೆಯಾಗುತ್ತದೆ. ಸಂಗಮ ಸ್ನಾನ ಎಲ್ಲರ ಮನಸ್ಸನ್ನೂ ಶುಚಿಗೊಳಿಸಲು ಎಂದು ಹಾರೈಸಿದರು.
ಸದಾಕಾಲ ದೈವದ, ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿರುವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ನಾಡಿನ ಸೌಭಾಗ್ಯ.
-ನಿರ್ಮಲಾನಂದನಾಥ ಸ್ವಾಮೀಜಿ