Advertisement

ಕುಡಿಯಲು ನೀರಿಲ್ಲ-ಚರಂಡಿಯಲ್ಲಿ ಹರಿಯುವುದು ನಿಂತಿಲ್ಲ

02:56 PM Apr 28, 2017 | |

ಅಫಜಲಪುರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಆರಂಭವಾಗಿದೆ. ಲ್ಲಿ ನೋಡಿದರೂ ಕುಡಿಯುವ ನೀರಿಗಾಗಿ ಪರದಾಡುವ ದೃಶ್ಯ ಕಾಣುತ್ತಿವೆ. ಪಟ್ಟಣದಲ್ಲಿಯೂ ಕುಡಿಯುವ ನೀರಿಗೆ ಬರವಿದ್ದರೂ ಚರಂಡಿಗಳಲ್ಲಿ ತುಂಬಿ ಹರಿಯುತ್ತಿದೆ.

Advertisement

ಇದು ಪುರಸಭೆ ನಿರ್ಲಕ್ಷವೋ, ನಾಗರಿಕರ ಬೇಜವಾಬ್ದಾರಿಯೋ ಗೊತ್ತಾಗುತ್ತಿಲ್ಲ. ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಇರುವುದು ಭೀಮಾ ನದಿ ಒಂದೇ. ಭೀಮಾ ನದಿಯಲ್ಲೇ ನೀರಿನ ಅಭಾವವಿದೆ. ಇರುವ ನೀರಿನ ಲಭ್ಯತೆಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ಪಟ್ಟಣ ಎಡುವುತ್ತಿದೆ. 

ಕೆಲವು ಕಡೆ ಬೇಕಾಬಿಟ್ಟಿಯಾಗಿ ನೀರು ಹರಿದು ಪೋಲಾಗುತ್ತಿದ್ದರೆ ಕೆಲವು ಕಡೆಗಳಲ್ಲಿ ಕುಡಿಯುವ ನೀರೇ ಸಿಗದಂತಾಗಿದೆ. ಪುರಸಭೆಯವರು ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಚರಂಡಿಗಳಲ್ಲೆ ಕುಡಿಯುವ ನೀರಿನ  ಪೈಪಲೈನ್‌ ಅಳವಡಿಸಿದ್ದಾರೆ.

ಪೈಪ್‌ಗ್ಳು ಎಲ್ಲೆಂದರಲ್ಲಿ ಒಡೆದು ನೀರು ಚರಂಡಿಗೆ ಸೇರುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಜನ ನೀರು ತುಂಬಿಕೊಂಡು ಚರಂಡಿಗೆ ಬಿಡುತ್ತಾರೆ,  ಕೆಲವರು ರಸ್ತೆಗೆ ಹರಿಬಿಡುತ್ತಾರೆ, ರಸ್ತೆಗೆ ನೀರು ಹೊಡೆಯುತ್ತಾರೆ. ಇಂತಹ ದೃಶ್ಯಗಳು ಪಟ್ಟಣದಲ್ಲಿ ಸಾಮಾನ್ಯವಾಗಿವೆ. 

ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವಾಲ್‌ ಬಳಿ ಅನಧಿಕೃತ ಪಂಪಸೆಟ್‌ಗಳಿವೆ. ಅನಧಿಧಿಕೃತ ಪಂಪಸೆಟ್‌ಗಳಿಂದ ನೀರು ರೈತರ ಹೊಲಗಳಿಗೆ ಹರಿದು ಹೋಗುತ್ತಿದೆ. ಪಟ್ಟಣದ ಅನೇಕ ವಾರ್ಡ್‌ಗಳಲ್ಲೂ ಅನಧಿಕೃತ ನೀರಿನ  ನಲ್ಲಿಗಳಿವೆ. 

Advertisement

ಅವುಗಳಿಂದ ನೀರು ಪೋಲಾಗಿ ಚರಂಡಿಗೆ ಸೇರುತ್ತಿದೆ. ಪುರಸಭೆಯವರು ಈ ಕುರಿತು ಎಚ್ಚೆತ್ತುಕೊಂಡು ಪಟ್ಟಣಕ್ಕೆ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳು ಇನ್ನಷ್ಟು ಭೀಕರವಾದರೆ ಅದಕ್ಕೆ ಪುರಸಭೆ ನಿರ್ಲಕ್ಷವೇ ಕಾರಣವಾಗಲಿದೆ.

ಪೈಪಲೈನ್‌ಗಳನ್ನು ಸರಿಯಾಗಿ ಅಳವಡಿಸಿ ಎಲ್ಲ ವಾರ್ಡ್‌ಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡಬೇಕು. ಅಂದಾಗ ನೀರಿನ ಸಮಸ್ಯೆ ಪರಿಹಾರವಾಗಲಿದೆ.

* ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next