Advertisement

ಸಸ್ಯಾಭಿವೃದ್ಧಿ ಕ್ಷೇತ್ರಕ್ಕೂ ನೀರಿಲ್ಲ

02:13 PM May 18, 2019 | Team Udayavani |

ಕುಷ್ಟಗಿ: ಭೀಕರ ಬರಗಾಲದಿಂದಾಗಿ ಅಂತರ್ಜಲ ಕುಸಿತಗೊಂಡ ಪರಿಣಾಮ ತಾಲೂಕಿನ ನೀರಲೂಟಿಯ ಸಸ್ಯಾಭಿವೃದ್ಧಿ ಕ್ಷೇತ್ರ ಹಾಗೂ ವಿವಿಧ ಜಾತಿಯ ಮುನ್ನೂರಕ್ಕೂ ಹೆಚ್ಚು ಮಾವಿನ ಗಿಡಗಳಿರುವ ತೋಟಗಾರಿಕಾ ಫಾರ್ಮ್ನ್ನು ಉಳಿಸಿಕೊಳ್ಳುವುದು ತೋಟಗಾರಿಕೆ ಇಲಾಖೆಗೆ ಸವಾಲಾಗಿದೆ.

Advertisement

ನೀರಲೂಟಿ ವ್ಯಾಪ್ತಿಯ ತೋಟಗಾರಿಕೆಯ ಇಲಾಖೆಯ 40 ಎಕರೆ ಫಾರ್ಮ್ನಲ್ಲಿ ವಿವಿಧ ಜಾತಿಯ ಮಾವಿನ ಗಿಡಗಳಿವೆ. ಸದ್ಯದ ಬೇಸಿಗೆಯಲ್ಲಿ ಈ ಗಿಡಗಳಿಗೆ ನೀರುಣಿಸುವುದು ಕಷ್ಟಕರವಾಗಿದ್ದು, ತೋಟಗಾರಿಕೆ ಇಲಾಖೆ ಟ್ಯಾಂಕರ್‌ ಮೂಲಕ ನೀರುಣಿಸಿ ಗಿಡಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದೆ. ಮಧ್ಯಾಹ್ನ ನೀರು ಆವಿಯಾಗುತ್ತದೆ ಎಂದು ರಾತ್ರಿ ವೇಳೆ ತಂಪು ವಾತಾವರಣದಲ್ಲಿ ಟ್ಯಾಂಕರ್‌ ಮೂಲಕ ನೀರುಣಿಸಲಾಗುತ್ತಿದೆ. ತೋಟದ ಐದು ಕಡೆ ನಿರ್ಮಿಸಿರುವ ತೊಟ್ಟಿಗೆ ಟ್ಯಾಂಕರ್‌ ಮೂಲಕ ನೀರು ತಂದು ಹಾಕಲಾಗುತ್ತದೆ. ಸಣ್ಣ ಗಿಡಗಳಿಗೆ ಸಿಬ್ಬಂದಿ ನೀರು ಹೊತ್ತು ಹಾಕಿದರೆ, ದೊಡ್ಡ ಗಿಡಗಳಿಗೆ ಟ್ಯಾಂಕರ್‌ನಿಂದ ನೀರುಣಿಸುವ ಕೆಲಸ ಕಳೆದ ಅಕ್ಟೋಬರ್‌ನಿಂದಲೇ ನಡೆದಿದೆ. ತಾಪಮಾನ ಹೆಚ್ಚಾಗಿರುವ ಕಾರಣ 30ಕ್ಕೂ ಅಧಿಕ ಮಾವಿನ ಗಿಡಗಳು ಒಣಗಿವೆ. ವಾರದಲ್ಲಿ ಮಳೆಯಾಗದಿದ್ದರೆ ಇನ್ನೂ 10ಕ್ಕೂ ಅಧಿಕ ಗಿಡಗಳು ಒಣಗುವ ಸಾಧ್ಯತೆಯಿದೆ. ಬಹುತೇಕ ಮಾವಿನ ಗಿಡಗಳ ಎಲೆಗಳು ಬಾಡಿವೆ.

ಆದಾಯ ಶೂನ್ಯ: ಭೂಮಿಯ ತೇವಾಂಶ ಹಿಡಿದಿಡಲು ಬಯೋಮಿಕ್ಸ್‌ ಗಿಡಗಳಿಗೂ ಉಪಚರಿಸಲಾಗಿದೆ. ಹೂವು ಉದುರುದಂತೆ ಸಕಾಲಿಕವಾಗಿ ಅಗತ್ಯ ಔಷಧ ಸಿಂಪರಣೆ ಕ್ರಮ ಕೈಗೊಳ್ಳಲಾಗಿದ್ದರೂ ಹೂವು ಹೆಚ್ಚು ಪ್ರಮಾಣದಲ್ಲಿ ನಿಂತಿಲ್ಲ. ಮಿಡಿಗಾಯಿ, ಕಾಯಿ ಬಲಿಯುವ ಹಂತದಲ್ಲಿ ತೇವಾಂಶ ಸಾಕಾಗದೇ ಗಿಡದಲ್ಲಿ ಒಣಗಿದ್ದು, ಕಾಯಿ ಬಲಿಯುವ ಹೊತ್ತಿಗೆ ಉದುರಿ ಬಿದ್ದಿವೆ. ಲಕ್ಷಾಂತರ ಆದಾಯದ ನೀರಿಕ್ಷೆ ಈ ಹಂಗಾಮಿನಲ್ಲಿ ಹುಸಿಯಾಗಿದೆ. 2016-17ರಲ್ಲಿ ಮಾವು ಇಳುವರಿ 2.47 ಲಕ್ಷ ರೂ. ಟೆಂಡರ್‌ ಆಗಿತ್ತು. 2017-18ರಲ್ಲಿ 1.47 ಲಕ್ಷ ರೂ. ಪ್ರಸಕ್ತ ವರ್ಷದಲ್ಲಿ ಆದಾಯ ಶೂನ್ಯವಾಗಿದೆ.

ಈ ತೋಟಗಾರಿಕೆ ಫಾರ್ಮ್ ತಾಲೂಕಿನ ಹುಲಿಯಾಪೂರ ಕೆರೆಗೆ ಹೊಂದಿಕೊಂಡಿದ್ದು, ಆದರೆ ಕೆರೆಯಲ್ಲಿರುವ ಲವಣಾಂಶದ ನೀರು ತೋಟಗಾರಿಕಾ ಬೆಳೆಗೆ ಯೋಗ್ಯವಾಗಿಲ್ಲ. ಹೀಗಾಗಿ ಅಂತರ್ಜಲವನ್ನು ಅವಲಂಭಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಇಲ್ಲಿಯವರೆಗೂ ಹಂತ ಹಂತವಾಗಿ ಕೊರೆಯಿಸಿದ 12 ಕೊಳವೆಬಾವಿಗಳು ವಿಫಲವಾಗಿವೆ. ಅದರಲ್ಲಿ ಕೇವಲ ಒಂದು ಕೊಳವೆಬಾವಿಯಲ್ಲಿ ಒಂದಿಂಚು ನೀರು ಲಭ್ಯವಿದ್ದು, ಈ ನೀರು ಸಸ್ಯಾಭಿವೃದ್ಧಿಗೆ ಸಾಲುವುದಿಲ್ಲ.

•ಮಂಜುನಾಥ ಮಹಾಲಿಂಗಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next