Advertisement

ಸಾಂತ್ವನ ಹೇಳಲೂ ಸಿಎಂಗೆ ಸಮಯವಿಲ್ಲ

01:13 PM Feb 03, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಿಲ್ಲೆಗೆ ಹೋಗುತ್ತಾರೋ ಆ ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಸರಣಿ ಹತ್ಯೆ ನಡೆಯುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Advertisement

ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿ ನಗರದ ಆನಂದರಾವ್‌ ವೃತ್ತದ ಬಳಿಯ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಶೋಭಾ ಮಾತನಾಡಿದರು.

ದಲಿತ ಬಾಲಕಿ ದಾನಮ್ಮ ಮೇಲೆ ಅತ್ಯಾಚಾರ ಮತ್ತು ಕೊಲೆಯೂ ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲೇ ಆಗಿದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ರಾಮಸ್ವಾಮಿ ಪಾಳ್ಯದಲ್ಲಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾದರ್‌ ಮನೆಗೆ ಔತಣಕೂಟಕ್ಕೆ ಹೋಗಿದ್ದರು.

ಇದಾದ ಬಳಿಕ ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ನಡೆದಿದ್ದು, ಖಾದರ್‌ ಪುತ್ರನೇ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಆದರೂ ಮುಖ್ಯಮಂತ್ರಿಗಳಿಗೆ ಸಂತೋಷ್‌ ಮನೆಗೆ ಹೋಗಲು ಸಮಯವಿಲ್ಲ. ಅದರ ಬದಲು ಔತಣಕೂಟದಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಾರೆ ಎಂದು ಟೀಕಿಸಿದರು.

ಕ್ರಿಮಿನಲ್‌ಗ‌ಳ ನಾಡು: ಶಾಂತಿಯ ನಾಡು ಎಂಬ ಖ್ಯಾತಿ ಪಡೆದಿದ್ದ ಕರ್ನಾಟಕ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ ಚಟುವಟಿಕೆಗಳ ನಾಡಾಗಿ ಪರಿವರ್ತನೆಯಾಗುತ್ತಿದೆ. ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊಣೆ ಎಂದು ಆರೋಪಿಸಿದರು.

Advertisement

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಈ ಮೊದಲು ರಾಜ್ಯ ಪೊಲೀಸರಿಗೆ ದೇಶಾದ್ಯಂತ ದೊಡ್ಡ ಗೌರವ ಇತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಇಲಾಖೆಯನ್ನು ಬಳಸಿಕೊಂಡು ಪೊಲೀಸ್‌ ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದು ಆರೋಪಿಸಿದರಲ್ಲದೆ, ಪೊಲೀಸರ ವಿರೋಧದ ನಡುವೆಯೂ ದೇಶ ವಿರೋಧಿ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗುವ ಮೂಲಕ ಸರ್ಕಾರ ಪೊಲೀಸರ ಸ್ಥೈರ್ಯ ಮತ್ತಷ್ಟು ಕುಸಿಯುವಂತೆ ಮಾಡಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಯಿಂದ ಎದ್ದೇಳಲು ಇನ್ನೆಷ್ಟು ಹಿಂದೂಗಳ ಹತ್ಯೆಯಾಗಬೇಕು ಎಂದು ಪ್ರಶ್ನಿಸಿದ ಆರ್‌.ಅಶೋಕ್‌, ಹತ್ಯೆಯಾದ ಸಂತೋಷ್‌ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸಂತೋಷ್‌ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಜೆಪಿಯ ನಾಯಕರಾದ ಪಿ.ಎನ್‌.ಸದಾಶಿವ, ಶಾರದಾ ನಾಯಕ್‌ ಮತ್ತಿತರರು ಇದ್ದರು. ಸಂತೋಷ್‌ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಾರ್ಯಕರ್ತರು ಈ ವೇಳೆ ಆರೋಪಿಸಿದರು.

ನೋವು ಭರಿಸಲು ಯಾರಿಗೂ ಆಗದು
ಬೆಂಗಳೂರು:
ಸಂತೋಷ್‌ ಸಾವಿನ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಠನೆ ನೀಡಿದ್ದಾರೆ. ಸೂ ಡ್ರೈವರ್‌ನಿಂದ ಕೊಲೆ ಮಾಡಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಸ್ಪಷ್ಟೀಕರಣ ನೀಡಿರುವ ಅವರು, ಅಧಿಕಾರಿಗಳು ಹಾಗೂ ಪೊಲೀಸ್‌ ಆಯುಕ್ತರು ತಿಳಿಸಿದ ಮಾಹಿತಿ ಆಧಾರದಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ಬಳಸಿಲ್ಲ ಸೂ ಡ್ರೈವರ್‌ಬಳಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದೇನೆ.

ಸಂತೋಷ್‌ ಹಾಗೂ ವಾಸಿಂ ಸ್ನೇಹಿತರು. ಮೂರು ತಿಂಗಳಿಂದ ಅವರ ನಡುವೆ ಜಗಳವಿತ್ತು. ನಾನು ಯಾವತ್ತೂ ದೇಶ ದ್ರೋಹದ ವಿಷ ಬೀಜ ಬಿತ್ತುವವರನ್ನು ಬೆಂಬಲಿಸುವುದಿಲ್ಲ. ಯಾರದೇ ಪ್ರಾಣ ಹೋದರೂ ಆ ಮನೆಯವರ ನೋವು ಭರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಂಸದೆ ಮಾಡಿದ ಆರೋಪಿಗಳು: ದಾನಮ್ಮ ಅತ್ಯಾಚಾರ, ಕೊಲೆ ನಡೆದಿರುವದೂ ಸಿಎಂ ಭೇಟಿ ವೇಳೆಯೇ ಕೆಲ ದಿನಗಳ ಹಿಂದೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾದರ್‌ ಮನೆಗೆ ಔತಣಕೂಟಕ್ಕೆ ಹೋಗಿದ್ದ ಸಿಎಂ ರಾಮಸ್ವಾಮಿ ಪಾಳ್ಯದ ಖಾದರ್‌ ಅವರ ಪುತ್ರನಿಂದಲೇ ಈಗ ಸಂತೋಷ್‌ ಹತ್ಯೆ ಮುಖ್ಯಮಂತ್ರಿಗಳಿಗೆ ಸಂತೋಷ್‌ ಮನೆಗೆ ಭೇಟಿ ನೀಡಲು ಸಮಯವೇ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next