ಕೂಡ್ಲಿಗಿ: ಜನಸಂಖ್ಯೆ ಆಧಾರಿತವಾಗಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚು ಮಾಡುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಖೀಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಸುರೇಶ್ ತಿಳಿಸಿದರು.
ಪಟ್ಟಣದ ಮದಕರಿ ವೃತ್ತದಲ್ಲಿ ಶುಕ್ರವಾರ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಬೇಕು ಎನ್ನುವ ರಾಜ್ಯವ್ಯಾಪಿ ಕರೆಗೆ ಪಟ್ಟಣ ಬಂದ್ ಮಾಡುವ ಮೂಲಕ ಮಾತನಾಡಿ, ಅವರು ಸಂವಿಧಾನಬದ್ಧ ಹಕ್ಕಿಗಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಎಸ್ಸಿ,ಎಸ್ಟಿ ಸಮುದಾಯದವರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದು, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗವು 3ರಿಂದ 7.5% ಗೆ ಹೆಚ್ಚಿಸಬೇಕು ಎಂದು ವರದಿ ನೀಡಿದರು.
ಸರ್ಕಾರ ಹಿಂದುಳಿದ ಜನಾಂಗಕ್ಕೆ ಮೋಸ ಮಾಡುತ್ತಿದೆ. ಸಮಾಜದ ಪ್ರಸನ್ನಾನಂದ ಸ್ವಾಮಿಗಳು ಮೀಸಲಾತಿ ನೀಡುವಂತೆ ಪಾದಯಾತ್ರೆ ಮಾಡಿ, ಈಗಾಗಲೇ ಫ್ರೀಡಂಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಸುಮಾರು ಐವತ್ತು ಲಕ್ಷ ಜನಸಂಖ್ಯೆ ಹೊಂದಿರುವ ತಳ ಸಮುದಾಯಕ್ಕೆ ಹಕ್ಕುಬದ್ಧ ಮೀಸಲಾತಿ ನೀಡಲೇಬೇಕು ಎನ್ನುವ ಹಕ್ಕೊತ್ತಾಯವನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.
ಇದಕ್ಕೂ ಮುನ್ನ ಪಟ್ಟಣದ ವಾಲ್ಮೀಕಿ ದೇವಸ್ಥಾನದಲ್ಲಿ ವಾಲ್ಮೀಕಿ ಪ್ರತಿಮೆಗೆ ಪೂಜೆ ಸಲ್ಲಿಸಿ ಹೊರಟ ಪ್ರತಿಭಟನಾ ಮೆರವಣಿಗೆ, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಅಲ್ಲಿಂದ ಮದಕರಿ ವೃತ್ತಕ್ಕೆ ಬಂದು ಸರ್ಕಾರದ ನೀತಿ ವಿರುದ್ಧ ಪ್ರತಿಭಟಿಸಿ ತಹಶೀಲ್ದಾರ್ ಟಿ.ಜಗದೀಶ್ ಅವರಿಗೆ ಬೇಡಿಕೆಗಳ ಹಕ್ಕೊತ್ತಾಯದ ಮನವಿ ಸಲ್ಲಿಸಿದರು.
ಮೀಸಲಾತಿ ಹೋರಾಟ ಬೆಂಬಲಿಸಿ ಪಟ್ಟಣ ಸಂಪೂರ್ಣ ಬಂದ್ ಮಾಡಲಾಗಿತ್ತು. ಅಖೀಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಮಣಿ ಜಿಂಕಾಲ್, ಸಮಾಜದ ಮುಖಂಡರಾದ ಕಾವಲಿ ಶಿವಪ್ಪನಾಯಕ, ಮಂಜುನಾಥ, ಪಿ. ಚಂದ್ರು, ಸಿ.ಬಿ. ಜಯರಾಮ್ ನಾಯಕ, ಗುನ್ನಳ್ಳಿ ರಾಘವೇಂದ್ರ, ಬಿ.ಕೆ. ರಾಘವೇಂದ್ರ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಚ್. ಕೃಷ್ಣಪ್ಪ, ಚಲವಾದಿ ಮಹಾಸಭಾದ ಹಿರೆಕುಂಬಳಗುಂಟೆ ಉಮೇಶ್, ಬಂಡೆ ರಾಘವೇಂದ್ರ, ಹೊನ್ನೇಶ್, ಬಿ. ಶ್ರೀಕಾಂತ್, ಎಂ.ಭರಮಣ್ಣ, ದೇವರಮನಿ ಮಹೇಶ್, ಪಾಪನಾಯಕ, ಮಯೂರಮಂಜು, ಡಿ.ಎಚ್. ದುರುಗೇಶ್, ಎಸ್. ದುರುಗೇಶ್, ವಿ.ಪ್ರಕಾಶ್,ಬಾಣದ ಮೂರ್ತಿ, ಶಂಕರ್, ಶಶಾಂಕ್ ಇದ್ದರು