Advertisement

ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ!

12:33 PM Jul 13, 2019 | Suhan S |

ಮಂಡ್ಯ: ಕಬ್ಬು, ಭತ್ತದಂತಹ ಸಾಂಪ್ರದಾಯಿಕ ಬೆಳೆಗಳಿಗೆ ಮಾರುಹೋಗಿರುವ ಜಿಲ್ಲೆಯ ರೈತರನ್ನು ರೇಷ್ಮೆ ಕೃಷಿಯತ್ತ ಸೆಳೆಯುವುದು, ರೇಷ್ಮೆ ಬೆಳೆ ಬೆಳೆಯಲು ಉತ್ತೇಜನ ನೀಡುವುದು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗುಣಾತ್ಮಕ ರೇಷ್ಮೆ ಉತ್ಪಾದನೆಗೆ ಮಾರ್ಗದರ್ಶನ ನೀಡಬೇಕಾದ ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆ ತಾಂಡವವಾಡುತ್ತಿದೆ.

Advertisement

ಇಲಾಖೆಗೆ ಮಂಜೂರಾಗಿರುವ 226 ಹುದ್ದೆಗಳಲ್ಲಿ 128 ಹುದ್ದೆಗಳು ಮೂರು ವರ್ಷದಿಂದ ಖಾಲಿ ಬಿದ್ದಿವೆ. 98 ಹುದ್ದೆಗಳಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು, ಸಿಬ್ಬಂದಿ ಇಲ್ಲದಿದ್ದರೂ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಶೇ.90ರಷ್ಟು ಸಾಧನೆಯನ್ನು ಅಂಕಿ-ಅಂಶಗಳಲ್ಲಿ ತೋರಿಸಿರುವುದು ಅಚ್ಚರಿಯ ಸಂಗತಿ.

ಮಂಡ್ಯದ ರೇಷ್ಮೆ ಉಪ ನಿರ್ದೇಶಕರ ಕಚೇರಿಯಲ್ಲಿ ರೇಷ್ಮೆ ಸಹಾಯಕ ನಿರ್ದೇಶಕರು, ಅಧೀಕ್ಷಕರು ಹುದ್ದೆಗಳು ಖಾಲಿ ಇವೆ. ಸಹಾಯಕ ನಿರ್ದೇಶಕರ ಕಚೇರಿಯಲ್ಲಿರುವ ರೇಷ್ಮೆ ನಿರೀಕ್ಷಕರ 2 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಇದೆ. ರೇಷ್ಮೆ ವಿಸ್ತರಣಾಧಿಕಾರಿ 1 ಹುದ್ದೆ ಖಾಲಿ ಉಳಿದಿದ್ದು, 3 ರೇಷ್ಮೆ ಪ್ರದರ್ಶಕರಲ್ಲಿ ಒಂದು ಹುದ್ದೆ ಖಾಲಿ ಉಳಿದಿದೆ.

ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ ತಾಂತ್ರಿಕ ಸೇವಾ ಕೇಂದ್ರ (ರೀಲಿಂಗ್‌) ದಲ್ಲಿ ವಿಸ್ತರಣಾಧಿಕಾರಿಯೇ ಇಲ್ಲ. ಕೆರಗೋಡಿನಲ್ಲಿರುವ ತಾಂತ್ರಿಕ ಸೇವಾ ಕೇಂದ್ರದಲ್ಲಿರುವ 2 ರೇಷ್ಮೆ ಪ್ರದರ್ಶಕರ ಹುದ್ದೆಯಲ್ಲಿ 1 ಹುದ್ದೆ ಭರ್ತಿಯಾಗಿಲ್ಲ. ದುದ್ದ ತಾಂತ್ರಿಕ ಸೇವಾ ಕೇಂದ್ರ, ಡಿ.ಜಿ.ಹಳ್ಳಿ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿಗಳೇ ಇಲ್ಲ. ಡಿ.ಜಿ.ಹಳ್ಳಿ ಕೇಂದ್ರದಲ್ಲಿ 5 ರೇಷ್ಮೆ ಪ್ರದರ್ಶಕ ಹುದ್ದೆ, 1 ರೇಷ್ಮೆ ನಿರೀಕ್ಷಕ ಹುದ್ದೆ ಖಾಲಿ ಬಿದ್ದಿವೆ.

ಮಳವಳ್ಳಿ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ನಿರೀಕ್ಷಕರು, ರೇಷ್ಮೆ ಪ್ರದರ್ಶಕರು, ರೇಷ್ಮೆ ಪ್ರವರ್ತಕರ ಕೊರತೆ ಇದ್ದರೆ, ಹಲಗೂರು ತಾಂತ್ರಿಕ ಸೇವಾ ಕೇಂದ್ರದಲ್ಲಿ 9 ರೇಷ್ಮೆ ಪ್ರದರ್ಶಕರ ಹುದ್ದೆಗಳಿಗೆ 2 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು 7 ಹುದ್ದೆಗಳು ಖಾಲಿ ಬಿದ್ದಿವೆ. ಹಲಸಹಳ್ಳಿ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರೇ ಇಲ್ಲ. 5 ರೇಷ್ಮೆ ಪ್ರದರ್ಶಕರ ಹುದ್ದೆಯಲ್ಲಿ 1 ಭರ್ತಿಯಾಗಿದ್ದು, 4 ಖಾಲಿ ಉಳಿದಿದೆ. ವಾಹನ ಚಾಲಕ ಹುದ್ದೆಯೂ ಭರ್ತಿ ಮಾಡಿಲ್ಲ. ಪೂರಿಗಾಲಿ ಕೇಂದ್ರದಲ್ಲೂ ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆ ಖಾಲಿ ಬಿದ್ದಿದೆ. 3 ರೇಷ್ಮೆ ಪ್ರದರ್ಶಕ ಹುದ್ದೆಗಳಲ್ಲಿ ಒಬ್ಬರೂ ಇಲ್ಲ. ವಾಹನ ಚಾಲಕರೂ ಇಲ್ಲ. ಬೆಳಕವಾಡಿ ಕೇಂದ್ರದಲ್ಲಿ ರೇಷ್ಮೆ ನಿರೀಕ್ಷಕರ ಹುದ್ದೆ ಖಾಲಿ ಇದ್ದರೆ, 3 ರೇಷ್ಮೆ ಪ್ರದರ್ಶಕರಲ್ಲಿ 1 ಹುದ್ದೆ ಖಾಲಿ ಉಳಿದಿದೆ. ಬೆಳಕವಾಡಿ ರೇಷ್ಮೆ ಬಿತ್ತನೆಕೋಠಿಯಲ್ಲಿ ರೇಷ್ಮೆ ನಿರೀಕ್ಷಕರಿಲ್ಲ. ಹೆಚ್.ಹೆಚ್.ಕೊಪ್ಪಲು ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರೂ ಇಲ್ಲ.

Advertisement

ಮದ್ದೂರು ತಾಲೂಕು ಕೊಪ್ಪ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ ತಾಂತ್ರಿಕ ಸೇವಾ ಕೇಂದ್ರದಲ್ಲಿ 3 ರೇಷ್ಮೆ ನಿರೀಕ್ಷಕರಿಗೆ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 7 ಮಂದಿ ರೇಷ್ಮೆ ಪ್ರದರ್ಶಕರಿರಬೇಕಾದ ಜಾಗದಲ್ಲಿ ಒಬ್ಬರು ಇದ್ದು 6 ಹುದ್ದೆಗಳು ಖಾಲಿ ಇವೆ. ರೇಷ್ಮೆ ಪ್ರವರ್ತಕರಿಲ್ಲ. ತೊರೆಶೆಟ್ಟಹಳ್ಳಿ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಇಲ್ಲ. ಮೂವರು ರೇಷ್ಮೆ ನಿರೀಕ್ಷಕರಿಗೆ ಇಬ್ಬರು ಮಾತ್ರ ಇದ್ದಾರೆ. 8 ರೇಷ್ಮೆ ಪ್ರದರ್ಶಕ ಹುದ್ದೆಗಳಲ್ಲಿ 4 ಹುದ್ದೆ ಭರ್ತಿಯಾಗಿ ಉಳಿದ 4 ಖಾಲಿ ಇವೆ. ಕೆ.ಎಂ.ದೊಡ್ಡಿ ಕೇಂದ್ರದಲ್ಲೂ ರೇಷ್ಮೆ ವಿಸ್ತರಣಾಧಿಕಾರಿಗಳು ಇಲ್ಲ. 3 ರೇಷ್ಮೆ ನಿರೀಕ್ಷಕರಲ್ಲಿ 2 ಹುದ್ದೆಗಳು ಖಾಲಿ ಇವೆ. 9 ರೇಷ್ಮೆ ಪ್ರದರ್ಶಕ ಹುದ್ದೆಗಳಲ್ಲಿ 2 ಹುದ್ದೆಗಳು ಭರ್ತಿಯಾಗಿದ್ದು 7 ಹುದ್ದೆಗಳು ಖಾಲಿ ಇವೆ.

ಪಾಂಡವಪುರ ತಾಲೂಕು ಬೆಳ್ಳಾಳೆ ತಾಂತ್ರಿಕ ಸೇವಾ ಕೇಂದ್ರದಲ್ಲಿ 2 ರೇಷ್ಮೆ ಪ್ರದರ್ಶಕರ ಹುದ್ದೆಗಳು, 1 ವಾಹನ ಚಾಲಕ ಹುದ್ದೆ ಭರ್ತಿಯಾಗಿಲ್ಲ

ಕೆ.ಆರ್‌.ಪೇಟೆ ತಾಲೂಕು ಬೂಕಿನಕೆರೆ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಇಲ್ಲ. 3 ರೇಷ್ಮೆ ನಿರೀಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ. ಕೆ.ಆರ್‌.ಪೇಟೆ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ನಿರೀಕ್ಷಕರು, ರೇಷ್ಮೆ ಪ್ರವರ್ತಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆ ಖಾಲಿ ಇದೆ. ಸರ್ಕಾರಿ ರೇಷ್ಮೆ ಬಿತ್ತನೆಕೋಠಿಯಲ್ಲಿ 2 ರೇಷ್ಮೆ ನಿರೀಕ್ಷರು ಖಾಲಿ ಇದ್ದರೆ, 2 ರೇಷ್ಮೆ ಪ್ರರ್ವಕ ಹುದ್ದೆಗಳಿಗೆ 1 ಮಾತ್ರ ಭರ್ತಿಯಾಗಿದೆ. ಕಿಕ್ಕೇರಿ ತಾಂತ್ರಿಕ ಸೇವಾ ಕೇಂದ್ರದಲ್ಲಿ 2 ರೇಷ್ಮೆ ಪ್ರದರ್ಶಕರ ಹುದ್ದೆಗಳು ಖಾಲಿ ಉಳಿದಿವೆ. ಚಿಕ್ಕೋನಹಳ್ಳಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ, ಪ್ರದರ್ಶಕರು, ರೇಷ್ಮೆ ಪ್ರವರ್ತಕರು, ಡಿದರ್ಜೆ ನೌಕರ ಹು ಉಳಿದಿವೆ. ಚಿಕ್ಕೋನಹಳ್ಳಿ ಹಾಗೂ ಅಗಸರಹಳ್ಳಿ ಮಾದರಿ ಚಾಕಿ ಸಾಕಾಣಿಕೆ ಕೇಂದ್ರದಲ್ಲಿ ರೇಷ್ಮೆ ನಿರೀಕ್ಷಕ ಹುದ್ದೆಗಳು ಭರ್ತಿಯಾಗಿಲ್ಲ.

ಶ್ರೀರಂಗಪಟ್ಟಣ ತಾಲೂಕು ಬಾಬುರಾಯ ನಕೊಪ್ಪಲಿನ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾ ಧಿಕಾರಿ ಇಲ್ಲ, ಇಬ್ಬರು ರೇಷ್ಮೆ ನಿರೀಕ್ಷಕರಿಗೆ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ರೇಷ್ಮೆ ಪ್ರದರ್ಶಕರ ಕೊರತೆ ಇದೆ.

ನಾಗಮಂಗಲ ತಾಲೂಕು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ, ನಿರೀಕ್ಷಕ ಹುದ್ದೆಗಳು ಖಾಲಿ ಇದ್ದರೆ, 4 ರೇಷ್ಮೆ ಕೃಷಿ ಪ್ರದರ್ಶಕರಲ್ಲಿ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಚೀಣ್ಯ ಕೇಂದ್ರದಲ್ಲಿ ರೇಷ್ಮೆ ಕೃಷಿ ನಿರೀಕ್ಷಕರು, ಕೃಷಿ ಪ್ರದರ್ಶಕರು, ಡಿ-ದರ್ಜೆ ನೌಕರರೇ ಇಲ್ಲ.

ಮದ್ದೂರು ಹಾಗೂ ಮಳವಳ್ಳಿಯಲ್ಲಿ ಅಧಿಕ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದರೂ ಅಲ್ಲಿಯೇ ಪ್ರಮುಖ ಅಧಿಕಾರಿ, ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಹುದ್ದೆಗಳು ಭರ್ತಿಯಾಗದಿದ್ದರೆ ರೇಷ್ಮೆ ಕೃಷಿ ಬೆಳವಣಿಗೆ ಕಾಣುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕಚೇರಿ ಬಿಟ್ಟು ಹೊರಬರದ ಅಧಿಕಾರಿಗಳು:

ರೇಷ್ಮೆಗೆ ಸೂಕ್ತ ಬೆಲೆ ಇಲ್ಲ. ರೇಷ್ಮೆ ಬೆಳೆ ಬೆಳೆಯುವಲ್ಲಿ ವೈಜ್ಞಾನಿಕ ವಿಧಾನದ ಅರಿವಿನ ಕೊರತೆ ಇದೆ. 9953 ಅನಕ್ಷರಸ್ಥರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ, ಎಸ್‌ಎಸ್‌ಎಲ್ಸಿ ಓದಿದ 12,479 ರೈತರು ರೇಷ್ಮೆ ಬೆಳೆಯನ್ನು ಜೀವನಾಧಾರ ಮಾಡಿಕೊಂಡಿದ್ದಾರೆ. ಇವರಿಗೆ ಸೂಕ್ತ ಮಾರ್ಗದರ್ಶನ, ಗುಣಮಟ್ಟದ ರೇಷ್ಮೆ ಉತ್ಪಾದನೆಯ ಬಗ್ಗೆ ಅರಿವು ಮೂಡಿಸಬೇಕಾದ ಪ್ರಮುಖ ಅಧಿಕಾರಿಗಳ ಹುದ್ದೆಗಳೇ ಖಾಲಿ ಬಿದ್ದಿವೆ. ಹುದ್ದೆಗಳಲ್ಲಿರುವ ಕೆಲವೇ ಕೆಲವು ಅಧಿಕಾರಿಗಳು ಕಚೇರಿ ಬಿಟ್ಟು ಹೊರಬರುತ್ತಿಲ್ಲ. ರೇಷ್ಮೆ ಬೆಳೆಗಾರರನ್ನು ಸಂಪರ್ಕಿಸುವ ಪ್ರಯತ್ನವನ್ನೇ ನಡೆಸದ ಕಾರಣ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಹಿನ್ನಡೆ ಅನುಭವಿಸುವಂತಾಗಿದೆ.
ಹುಳು ಕಾಟದ ಸಮೀಕ್ಷೆ ನಡೆಸಿಲ್ಲ:

ಹಾಲಿ ಹಿಪ್ಪುನೇರಳೆ ಬೆಳೆಗಳಿಗೆ ಹುಳುಗಳ ಕಾಟ ಶುರುವಾಗಿದೆ. ಅದು ವ್ಯಾಪಕವಾಗಿ ಹರಡಲಾರಂಭಿಸಿದೆ. ಜಿಲ್ಲೆಯ ಎಷ್ಟು ಎಕರೆ ಹಿಪ್ಪುನೇರಳೆ ಬೆಳೆ ಹುಳುಗಳ ಬಾಧೆಗೆ ಒಳಗಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸಮೀಕ್ಷೆಯನ್ನೇ ನಡೆಸಿಲ್ಲ. ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ಬೆಳೆಗಳಿಗೆ ಎದುರಾಗಬಹುದಾದ ರೋಗ, ವಹಿಸಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫ‌ಲರಾಗಿದ್ದಾರೆ. ಪ್ರಾತ್ಯಕ್ಷಿಕೆ ನಡೆಸುವ ಮೂಲಕ ರೋಗ ಹರಡದಂತೆ ತಡೆಯುವ ವಿಧಾನವನ್ನು ತಿಳಿಸುವುದಕ್ಕೂ ಅಧಿಕಾರಿಗಳು ಆಸಕ್ತಿಯನ್ನೇ ತೋರುತ್ತಿಲ್ಲ. ಅಧಿಕಾರಿ-ಸಿಬ್ಬಂದಿ ಕೊರತೆಯೂ ಈ ಎಲ್ಲಾ ಕೆಲಸಗಳಿಗೆ ಪ್ರಮುಖ ಅಡ್ಡಿಯಾಗಿದೆ.
ರೇಷ್ಮೆ ಕೃಷಿಗೆ ಉತ್ತೇಜನ ಸಿಗುತ್ತಿಲ್ಲ:

ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ರೇಷ್ಮೆ ಕೃಷಿಗೆ ರೈತರನ್ನು ಉತ್ತೇಜಿಸುವ ಕೆಲಸ ನಡೆಯುತ್ತಿಲ್ಲ. ರೇಷ್ಮೆ ಬೆಳೆಯನ್ನು ಅವಲಂಬಿಸುವುದಕ್ಕೆ ರೈತರು ಉತ್ಸುಕರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ರೇಷ್ಮೆ ಕೃಷಿ ವಿಸ್ತೀರ್ಣವೂ ಹೆಚ್ಚಿದೆ. ಆದರೆ, ರೇಷ್ಮೆ ಬೆಳೆ ಬೆಳೆಯಲು ಮುಂದಾಗುವ ರೈತರು, ಯುವಕರಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಅಧಿಕಾರಿಗಳಿಂದ ಸಿಗುತ್ತಿಲ್ಲ. ಜಿಲ್ಲೆಯಲ್ಲಿರುವ ಒಟ್ಟು 30869 ರೇಷ್ಮೆ ಬೆಳೆಗಾರರಲ್ಲಿ 4452 ಬೆಳೆಗಾರರಷ್ಟೇ ರೇಷ್ಮೆ ಹುಳು ಸಾಕಣೆಗೆ ಪ್ರತ್ಯೇಕ ಮನೆಯನ್ನು ಹೊಂದಿದ್ದಾರೆ. ಉಳಿದವರೆಲ್ಲರೂ ತಮ್ಮ ಮನೆಯೊಳಗೆ ರೇಷ್ಮೆ ಹುಳು ಸಾಕಣೆ ಮಾಡುತ್ತಾ, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ರೇಷ್ಮೆ ಕೃಷಿ ನಡೆಸುತ್ತಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಪ್ರತ್ಯೇಕ ಹುಳು ಸಾಕಣೆ ಮನೆ ಹೊಂದಲು ಸರ್ಕಾರ ಅಗತ್ಯ ಸಹಾಯಧನ, ಸಲಕರಣೆಗಳನ್ನು ನೀಡುತ್ತಿದೆ. ದ್ವಿತಳಿಗೂಡಿಗೆ ಪ್ರೋತ್ಸಾಹಧನ ನೀಡುತ್ತಿದ್ದರೂ ಅದಾವುದರ ಬಗ್ಗೆಯೂ ಬೆಳೆಗಾರರಿಗೆ ಹೆಚ್ಚಿನ ಅರಿವಿಲ್ಲ.
ಇಲಾಖೆ ಸಾಧನೆ ಕಾಗದಕ್ಕಷ್ಟೇ ಸೀಮಿತ:

ರೇಷ್ಮೆ ಇಲಾಖೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಇಲಾಖಾ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನೆ ಮಾತ್ರ ನೂರಕ್ಕೆ ನೂರರಷ್ಟಿದೆ. ಇದು ಅಂಕಿ-ಅಂಶಗಳ ಸಾಧನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಾಸ್ತವದಲ್ಲಿನ ಚಿತ್ರಣವೇ ಬೇರೆ ರೀತಿಯದ್ದಾಗಿದೆ. ಹಲವು ಅವ್ಯವಸ್ಥೆಗಳ ನಡುವೆ ರೇಷ್ಮೆ ಬೆಳೆಗಾರರು ಬೆಳೆ ಬೆಳೆಯುತ್ತಿದ್ದಾರೆ. ಬಹುತೇಕ ಬೆಳೆಗಾರರು ಹುಳುಗಳ ಸಾಕಣೆಗೆ ಪ್ರತ್ಯೇಕ ಮನೆ ಹೊಂದಲು ಇಂದಿಗೂ ಸಾಧ್ಯವಾಗಿಲ್ಲ, ರೇಷ್ಮೆ ಗೂಡಿಗೆ ಬೆಲೆ ಇಲ್ಲ, ಸರ್ಕಾರದ ಪ್ರೋತ್ಸಾಹಧನವೂ ಸಿಗುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿ ರೇಷ್ಮೆ ಬೆಳೆಗಾರರು ಸಿಲುಕಿದ್ದರೂ ಇಲಾಖಾ ಸಾಧನೆ ಕಾಗದಕ್ಕಷ್ಟೇ ಸೀಮಿತವಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next