ಚಿಕ್ಕಮಗಳೂರು: ಕೇಂದ್ರ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ. ಸರ್ಕಾರದ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರ ಧ್ವನಿ ಅಡಗಿಸುವ ಯತ್ನ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದರೆ ರಕ್ಷಣೆ ಇಲ್ಲದಂತಾಗಿದೆ.
ಶಾಂತಿಯುತ ಪ್ರತಿಭಟನೆ ನಡೆಸುತ್ತಾ ರಾಜ್‌ಘಾಟ್‌ಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಂಘ ಪರಿವಾರದ ಸದಸ್ಯ ಗುಂಡಿನ ದಾಳಿ ನಡೆಸಲು ಮುಂದಾದಾಗ ಪೊಲೀಸರು ಕೈಕಟ್ಟಿಕೊಂಡು ಮೂಕಪ್ರೇಕ್ಷಕರಂತೆ ವರ್ತಿಸಿದ್ದಾರೆ. ದಿಲ್ಲಿ ಪೊಲೀಸರು ಅಮಿತ್ ಶಾ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೇಂದ್ರದ ವಿರುದ್ಧ ಮಾತನಾಡಿದರೆ ರಕ್ಷಣೆ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಹೇಳಿದರು.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಚುನಾವಣಾ ಪ್ರಚಾರದಲ್ಲಿ ತಮ್ಮ ವಿರೋಧಿ ಗಳಿಗೆ ಗುಂಡು ಹೊಡೆಯಲು ಕರೆ ಕೊಟ್ಟಿದ್ದಾನೆ. ಮೋದಿ, ಅಮಿತ್ ಶಾ, ಅನುರಾಗ್ ಠಾಕೂರ್ ಅಂತಹವರ ಪ್ರಚೋ ದನೆಯಿಂದಲೇ ಗುಂಡಿನ ದಾಳಿ ನಡೆದಿದೆ ಎಂದರು. ಕಳೆದ ಸಾಲಿನ ಕೇಂದ್ರ ಬಜೆಟ್‌ನಲ್ಲಿ 27 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಲಾಗಿತ್ತು. ಆದಾಯ-ಖರ್ಚು ಎಷ್ಟು ಎಂಬುದು ಬಜೆಟ್‌ನಲ್ಲಿ ತಿಳಿಯಲಿದೆ.
ಕೇಂದ್ರ ಸರ್ಕಾರ ಹೇಳಿದ್ದೆಲ್ಲ ಮಾಡಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತಿತ್ತು. ನರೇಂದ್ರ ಮೋದಿ ಆರು ವರ್ಷದಲ್ಲಿ ದೇಶವನ್ನು ಸ್ವರ್ಗ ಮಾಡುತ್ತೇನೆ ಎಂದಿದ್ದರು. ಆದರೆ ಜನ ನರಕ ಅನುಭವಿಸುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಜನರ ಗಮನ ಬೇರೆಡೆ ಸೆಳೆಯಲು ಸಿಎಎ, ಎನ್‌ಆರ್‌ಸಿ ತಂದು ನಾಟಕ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷರ ನೇಮಕ ಶೀಘ್ರ: ಹೈಕಮಾಂಡ್ ಶೀಘ್ರ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಲಿದೆ. ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅಲ್ಲಿಯ ತನಕ ವಿಪಕ್ಷ ನಾಯಕನಾಗಿ ಮುಂದುವರಿಯುವೆ. 134 ವರ್ಷದ ಇತಿಹಾಸ ಇರುವ ಪಕ್ಷದಲ್ಲಿ ಇಂತಹ ಬೆಳವಣಿಗೆಗಳೆಲ್ಲ ಸಹಜ ಎಂದರು.
ರಾಜ್ಯಪಾಲರ ಭಾಷಣದಲ್ಲಿ ಆಕ್ಷೇಪಾರ್ಹ ವಿಷಯಗಳಿ ದ್ದರೆ ಪ್ರತಿಭಟಿಸುವುದು ಬಿಡುವುದು ನಂತರದ ಮಾತು. ಪ್ರತಿ ಭಟಿಸುವ ಶಾಸಕರನ್ನು ಅಮಾನತಿ ನಲ್ಲಿ ಇಡುತ್ತೇವೆ ಎನ್ನುವುದು ಅಸಾಂವಿಧಾನಿಕ. ರಾಜ್ಯಪಾಲರ ಭಾಷಣದ ಪ್ರತಿ ನೋಡಿದ ಮೇಲೆ ನಾವು ನಮ್ಮ ಅಭಿಪ್ರಾಯ ತಿಳಿಸಲೇಬೇಕಾಗುತ್ತದೆ.
-ಸಿದ್ದರಾಮಯ್ಯ, ಮಾಜಿ ಸಿಎಂ