ಸುರತ್ಕಲ್ : ಇಂದಿನ ಧಾವಂತದ ಯುಗದಲ್ಲಿ ಯಾವುದೇ ರೋಗಗಳಿದ್ದರೂ ತುರ್ತಾಗಿ ಗುಣವಾಗಬೇಕು ಎಂಬ ಉದ್ದೇಶದಿಂದ ಪಡೆಯುವ ಚಿಕಿತ್ಸೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ಆದರೆ ಭಾರತೀಯ ಪದ್ಧತಿಯ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಹೇಳಿದರು.
ಪಾಲಿಕೆಯ ಸುರತ್ಕಲ್ ಉಪ ಕಚೇರಿಯಲ್ಲಿ ಆಯುಷ್ ಇಲಾಖೆಯ ಸಹಯೋಗದಲ್ಲಿ 2017-18ನೇ ಸಾಲಿನ ಐ.ಇ.ಸಿ. ಕಾರ್ಯಕ್ರಮಗಳ ಎಸ್.ಸಿ.ಪಿ. ಯೋಜನೆಯಡಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪದ್ಧತಿಯ ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸೆಗಳು ನಿಧಾನವಾಗಿ ರೋಗಗಳನ್ನು ಸಂಪೂರ್ಣವಾಗಿ ದೇಹದಿಂದ ತೊಡೆದು ಹಾಕುತ್ತವೆ. ಉಚಿತ ಚಿಕಿತ್ಸೆಗಳು, ಮನೆ ಮದ್ದುಗಳ ಬಗ್ಗೆ ಇರುವ ತಾತ್ಸಾರ ಮನೋಭಾವ ತೊಡೆದು ಹಾಕಿದಾಗ ಮಾತ್ರ ಇಂತಹ ಶಿಬಿರಗಳ ಪ್ರಯೋಜನ ಸಾಧ್ಯ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆಯ ಈ ಶಿಬಿರ ಯಶಸ್ವಿಯಾಗಿ ಜರಗಲಿ ಎಂದು ಹಾರೈಸಿದರು.
ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ, ರವಿಶಂಕರ್, ವೈದ್ಯಾಧಿಕಾರಿ ಡಾ| ಸಹನಾ ಪಾಂಡುರಂಗ, ಡಾ| ನೂರುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಪಾಲಿಕೆ ಆರೋಗ್ಯ ವಿಭಾಗದ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ಆಯುರ್ವೇದ ಚಿಕಿತ್ಸೆ ಉತ್ತಮ
ಋಷಿ ಪರಂಪರೆಯ ಮೂಲಕ ಬಂದ ಆಯುರ್ವೇದ ಚಿಕಿತ್ಸೆ ಉತ್ತಮ ಪರಿಣಾಮ ಬೀರಬಲ್ಲುದು. ನಮ್ಮ ಶುಚಿತ್ವ, ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ಆರೋಗ್ಯವನ್ನೂ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.
–
ಗಣೇಶ್ ಹೊಸಬೆಟ್ಟು,
ಪಾಲಿಕೆ ವಿಪಕ್ಷ ನಾಯಕ