Advertisement

ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆ ಇಲ್ಲ

05:43 PM Nov 30, 2021 | Dinesh M |

ಕೋಲಾರ: ದೇಶದಲ್ಲಿ ಈಗ ಆಹಾರ ಪದಾರ್ಥಗಳ ಕೊರತೆಯಿಲ್ಲ. ಹಸಿವಿನಿಂದ ಯಾರೂ ಸಾಯುತ್ತಿಲ್ಲ. ಆದರೆ, ಅಪೌಷ್ಟಿಕತೆ ಕಾಡುತ್ತಿದ್ದು, ತೊಡೆದು ಹಾಕಲು ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಧಿಕಾರಿ ಸೆಲ್ವಮಣಿ ಸಲಹೆ ನೀಡಿದರು. ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಚಿಂತಾಮಣಿಯ ರೇಷ್ಮೆ ಕೃಷಿ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವದ ಅಂಗವಾಗಿ ಏರ್ಪಡಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಆಹಾರ ಪದಾರ್ಥಗಳ ಕೊರತೆಯಿತ್ತು.

Advertisement

ಹಸಿವಿನಿಂದ ಜನರು ಸಾವಿಗೀಡಾಗು ತ್ತಿದ್ದರು. ಅಂದು ಕೇವಲ 30 ಲಕ್ಷ ಮಿಲಿಯನ್‌ ಟನ್‌ ಆಹಾರ ಉತ್ಪಾದನೆ ಆಗುತ್ತಿತ್ತು. ಹಸಿರುಕ್ರಾಂತಿಯಿಂದ ಈಗ 300 ಮಿಲಿಯನ್‌ಟನ್‌ ಆಹಾರ ಪದಾರ್ಥ ಬೆಳೆಯಲಾಗುತ್ತಿದೆ ಎಂದು ಹೇಳಿದರು.

ನಾನು ಸಹ ಕೃಷಿ ವಿದ್ಯಾರ್ಥಿ: ಕಾಲೇಜಿನಲ್ಲಿ ಪದವಿ ಗಳಿಸಿದ ನಂತರ ನೀವು ಸಂಶೋಧನೆ, ವಿಸ್ತರಣೆ, ಆವಿಷ್ಕಾರ ಅಥವಾ ಬೋಧನೆ ಮತ್ತು ಸರ್ಕಾರಿ ಕೆಲಸಕ್ಕೆ ಹೋಗಬಹುದು. ಆದರೆ, ಇದೊಂದು ಅದ್ಬುತವಾದ ಅನುಭವವಾಗಿದೆ. ನಾನು ಸಹ ಕೃಷಿ ವಿದ್ಯಾರ್ಥಿ ಯಾಗಿದ್ದೆ. ಆಗ ನಮ್ಮನ್ನು ತಾಲೂಕಿಗೆ ಒಬ್ಬರಂತೆ ಕೃಷಿ ಕಾರ್ಯಾನುಭವಕ್ಕೆ ನಿಯೋಜನೆ ಮಾಡಲಾಗುತ್ತಿತ್ತು ಎಂದು ತಮ್ಮ ವಿದ್ಯಾರ್ಥಿ ಜೀವನ್ನು ಮೆಲಕು ಹಾಕಿದರು.

3 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ: ಇಂದು ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಯಾಗಲು ರೈತರು, ಕೃಷಿ ವಿಜ್ಞಾನಿಗಳು ಕೃಷಿ ವಿಸ್ತರಣೆ ಮತ್ತು ಸಂಶೋಧನೆ ಕಾರಣವಾಗಿದೆ. ಆಹಾರ ಉತ್ಪಾದನೆ ಹೆಚ್ಚಿದ್ದರೂ ಎಲ್ಲರಿಗೂ ಪೌಷ್ಟಿಕಾಂಶ ಭರಿತ ಆಹಾರ ದೊರೆಯುತ್ತಿಲ್ಲ. ಕೋಲಾರ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ನಿಯಂತ್ರಣ ಮಾಡುವುದು ದೊಡ್ಡ ಸವಾಲು ಆಗಿದೆ ಎಂದು ಹೇಳಿದರು.

ಕಾಳಪ್ಪನವರ ದೂರದೃಷ್ಟಿ ಕಾರಣ: ಬೆಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಕಾಳಪ್ಪ, ವಿಶ್ವವಿದ್ಯಾ ಲಯದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸ ಲಾಗುತ್ತಿದ್ದ ಹೊಸ ತಳಿಗಳನ್ನು ವಡಗೂರು, ಕಾಳಸ್ತಿಪುರ ಗ್ರಾಮಗಳಲ್ಲಿ ಪರಿಚಯಿಸುತ್ತಿದ್ದರು. ಇಂದು ವಡಗೂರು ಗ್ರಾಮ ಆರ್ಥಿಕವಾಗಿ ಸದೃಢವಾಗಿರಲು ಕಾಳಪ್ಪನವರ ದೂರದೃಷ್ಟಿ ಕಾರಣವಾಗಿದೆ ಎಂದು ಸ್ಮರಿಸಿದರು.

Advertisement

ಕಾಲೇಜಿನಲ್ಲಿ ಕಲಿತ ತಾಂತ್ರಿಕತೆ ಹಾಗೂ ವಿವಿಧ ವಿಷಯಗಳ ಬಗ್ಗೆ ರೈತರೊಂದಿಗೆ ಹಂಚಿಕೊಂಡರು. ಮೂರು ತಿಂಗಳ ಕೃಷಿ ಕಾರ್ಯಾನುಭವದ ನಂತರ ಕೊನೆ ಭಾಗವಾಗಿ ಕೋಲಾರ ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಕೃಷಿ ಮೇಳವನ್ನು ವಿದ್ಯಾರ್ಥಿಗಳು ಅನಾವರಣ ಮಾಡಿದರು. ವಿವಿಧ ತಳಿಗಳು ಅವುಗಳಿಗೆ ತಗಲುವ ರೋಗಗಳು ಹಾಗೂ ಕೃಷಿ ತಾಂತ್ರಿಕತೆ ಹಾಗೂ ಇತರ ವಿಷಯಗಳ ಬಗ್ಗೆ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಅನಾವರಣಗೊಳಿಸಿದರು.

ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಡೀನ್‌ ಡಾ.ವೆಂಕಟರಮಣ, ಉದ್ಯಮಿ ಉದಯರವಿ, ಸುಗಟೂರು ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯ ಭೂಪತಿಗೌಡ, ಮಾಜಿ ಸದಸ್ಯ ರಮೇಶ್‌ಗೌಡ, ಶ್ರೀರಾಮ್‌ಗೌಡ, ಪುರುಷೋತ್ತಮ್‌, ವಿವಿ ಪ್ರಾಧ್ಯಾಪಕರಾದ ಡಾ.ಶೀನಿವಾಸ್‌ರೆಡ್ಡಿ, ಧವಣಕುಮಾರ್‌, ದಾûಾಯಿಣಿ, ನಂದಕುಮಾರ್‌, ಸ್ಥಳೀಯ ಮುಖಂಡ ಭಾಸ್ಕರ್‌ ಭಾಗವಹಿಸಿದ್ದರು.

“ನಿಸರ್ಗದಲ್ಲಿ ರೈತರಿಗೆ ಉಪಯುಕ್ತ ವಾದ ಹಲವು ಜೀವಿಗಳಿವೆ. ಕೀಟ ನಾಶಕ ಅತಿಯಾಗಿ ಬಳಕೆ ಮಾಡುವುದ ರಿಂದ ಅದು ಭೂಮಿಯ ಫಲವತ್ತತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈಗ ಹಸಿರು ರಾಸಾಯನಿಕ ಲಭ್ಯವಿದೆ. ಅದನ್ನು ಬಳಕೆ ಮಾಡುವುದರಿಂದ ಬೆಳೆಗೆ ಹಾನಿ ಆಗುವ ಕೀಟಗಳನ್ನು ಕೊಲ್ಲುತ್ತದೆ. ರೈತರು ಉತ್ಪಾದನೆ ಹೆಚ್ಚಿಸುವ ಮೂಲಕ ಮಾರುಕಟ್ಟೆ ಮೂಲ ಹುಡುಕಿಕೊಳ್ಳಬೇಕು.” – ಡಾ.ಬಸವೇಗೌಡ, ಕುಲಸಚಿವ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ.

“ನಾವು ನಾಗನಾಳ ಗ್ರಾಮಕ್ಕೆ ಬಂದಾಗ ಮೊದಲು ಯಾರೂ ನಮ್ಮೊಂದಿಗೆ ಸ್ಪಂ ದಿಸಲಿಲ್ಲ. ನಂತರ ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಂಡರು. ನಾವು ಅದ್ಭತ ಅನುಭವ ಪಡೆದುಕೊಂಡೆವು.” – ಜ್ಯೋತಿ, ಕೃಷಿ ವಿದ್ಯಾರ್ಥಿನಿ.

“ವಿಶ್ವವಿದ್ಯಾಲಯದ ನಾಲ್ಕು ಗೋಡೆ ಗಳ ಮಧ್ಯೆ ಕೃಷಿ ಸಂಸ್ಕೃತಿಯನ್ನು ಕಲಿಸಲಾಗಿದೆ. ಆದರೆ, ನಾವು ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ನಡವಳಿಕೆಯನ್ನು ಕಲಿಸಿ ದ್ದೇವೆ. ಮೂರು ತಿಂಗಳ ಕಾಲ ವಿದ್ಯಾರ್ಥಿ ಗಳು ನಮ್ಮ ಮನೆ ಮಕ್ಕಳಂತೆ ಗ್ರಾಮದಲ್ಲಿ ಹೊಂದಿಕೊಂಡು ಕೃಷಿ ಕಾರ್ಯಾನುಭವ ಗಳಿಸಿದ್ದಾರೆ. ಅವರ ಒಡನಾಟ ನಮಗೆ ಸಂತಸ ತಂದಿದೆ.” – ನಾಗನಾಳ ಮಂಜುನಾಥ್‌, ಪ್ರಗತಿಪರ ರೈತ.

“ರೈತರು ಬಹುತೇಕ ಹಣವನ್ನು ಕೀಟ ನಾಶಕಕ್ಕೆ ವೆಚ್ಚ ಮಾಡುತ್ತಾರೆ. ಆದರೆ, ಮಾರುಕಟ್ಟೆಗೆ ಹೋಗಿ ರೈತರು ಬರಿಗೈಯಲ್ಲಿ ಹಿಂತಿರುಗುತ್ತಾರೆ. ಸರ್ಕಾರವೇ ರೈತರು ಬೆಳೆದ ಬೆಳೆ ಖರೀದಿ ಮಾಡಬೇಕು.” – ಡಿ.ಎಲ್‌.ನಾಗರಾಜ್‌, ನಿರ್ದೇಶಕ, ಕರ್ನಾಟಕ ರಾಜ್ಯ ಬೀಜ ನಿಗಮ.

Advertisement

Udayavani is now on Telegram. Click here to join our channel and stay updated with the latest news.

Next