Advertisement

ಫೇಲಾದವರು ಒಂದು ವರ್ಷ ಕಾಯಲೇಬೇಕು; ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಲ್ಲ

09:11 PM Sep 27, 2021 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಫ‌ಲಿತಾಂಶ ತಿರಸ್ಕರಿಸಿ, ಪರೀಕ್ಷೆ ಬರೆದು ಅನುತ್ತೀರ್ಣರಾದ ವಿದ್ಯಾರ್ಥಿಗಳು ಸೇರಿದಂತೆ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆಗಿರುವವರು “ಪೂರಕ ಪರೀಕ್ಷೆ’ ಯಿಂದ ವಂಚಿತರಾಗಿದ್ದಾರೆ.

Advertisement

ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಇವರೆಲ್ಲರೂ ಇನ್ನೂ ಒಂದು ವರ್ಷ ಕಾಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಅವರ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಪಾಸ್‌ ಮಾಡಲಾಗಿತ್ತು. ಆದರೆ ಈ ಫ‌ಲಿತಾಂಶದಲ್ಲಿ ತೃಪ್ತಿಕಾಣದ 592 ಹೊಸ ಹಾಗೂ 351 ಪುನರಾವರ್ತಿತ ಅಭ್ಯರ್ಥಿಗಳು ಸೇರಿ 943 ವಿದ್ಯಾರ್ಥಿಗಳು ಫ‌ಲಿತಾಂಶ ತಿರಸ್ಕರಿಸಿ, ಖಾಸಗಿ ವಿದ್ಯಾರ್ಥಿಗಳ ಜತೆಯಾಗಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದಿರುವ 943 ವಿದ್ಯಾರ್ಥಿಗಳಲ್ಲಿ 36 ಹೊಸಬರು, 168 ಪುನರಾವರ್ತಿತರು ಹಾಗೂ 12,702 ಖಾಸಗಿ ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದರು. ಒಟ್ಟಾರೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 18,413 ಅಭ್ಯರ್ಥಿಗಳಲ್ಲಿ 5507 ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾಗಿ 12,906 ಮಂದಿ ಅನುತ್ತೀರ್ಣರಾಗಿದ್ದರು.

ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸುವುದು ವಾಡಿಕೆ. ಆದರೆ, ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಅದರಲ್ಲೂ ಖಾಸಗಿ ಅಭ್ಯರ್ಥಿಗಳು ಹಾಗೂ ಫ‌ಲಿತಾಂಶ ತಿರಸ್ಕರಿಸಿದವರೇ ಇರುವುದರಿಂದ ಪೂರಕ ಪರೀಕ್ಷೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿದೆ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

Advertisement

ಅಲ್ಲದೆ ಪರೀಕ್ಷೆ ನಡೆಸಲು ಕನಿಷ್ಠ 2 ತಿಂಗಳು ಬೇಕಾಗುತ್ತದೆ. ನಂತರ ಫ‌ಲಿತಾಂಶ ನೀಡಲು 15 ದಿನ ಬೇಕು. ಎಲ್ಲ ಪ್ರಕ್ರಿಯೆಗೆ ಎರಡೂವರೆ ತಿಂಗಳು ಬೇಕಾಗುವುದರಿಂದ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪದವಿ ಅಥವಾ ಬೇರೆ ಶಿಕ್ಷಣಕ್ಕೆ ಈ ವರ್ಷ ಸೇರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೂರಕ ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

ಒಂದು ವರ್ಷ ವ್ಯರ್ಥ
ಖಾಸಗಿ ಅಭ್ಯರ್ಥಿಗಳಲ್ಲಿ ಅನೇಕರು ಹುದ್ದೆಯಲ್ಲಿ ಪ್ರಮೋಷನ್‌ ಸೇರಿದಂತೆ ಔದ್ಯೋಗಿಕ ಕಾರಣಕ್ಕಾಗಿ ಪರೀಕ್ಷೆ ಬರೆದಿರುತ್ತಾರೆ. ಆದರೆ, ಪುನರಾವರ್ತಿತ ಹಾಗೂ ಹೊಸ ಅಭ್ಯರ್ಥಿಗಳಲ್ಲಿ ಶೈಕ್ಷಣಿಕ ವರ್ಷ ಮುಂದುವರಿಸುವವರೇ ಹೆಚ್ಚಿರುತ್ತಾರೆ. ಈಗ ಇವ ರಿಗೆ ಪೂರಕ ಪರೀ ಕ್ಷೆಯ ಅವ ಕಾಶ ಸಿಗದ ಕಾರಣ ಅನುತ್ತೀರ್ಣರಾದವರು ಒಂದು ವರ್ಷ ಕಾಯಲೇಬೇಕು. 2021-22ನೇ ಸಾಲಿನಲ್ಲಿ ಈ ವಿದ್ಯಾರ್ಥಿಗಳಿಗೆ ಪದವಿ ಅಥವಾ ಯಾವುದೇ ಕೋರ್ಸ್‌ ದ್ವಿತೀಯ ಪಿಯುಸಿ ಫ‌ಲಿತಾಂಶದ ಆಧಾರದಲ್ಲಿ ಸೇರಲು ಸಾಧ್ಯವಿಲ್ಲ. ಹೀಗಾಗಿ ಒಂದು ವರ್ಷ ವ್ಯರ್ಥ್ಯವಾಗಲಿದೆ ಎಂದು ಪಿಯು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮತ್ತು ಸರ್ಕಾರದಿಂದ ಈವರೆಗೆ ಯಾವುದೇ ಸೂಚನೆ ಬರದೇ ಇರುವುದರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮಾಡುವುದು ಅನುಮಾನ. ಪೂರಕ ಪರೀಕ್ಷೆ ಮಾಡಿದರೂ, ವಿದ್ಯಾರ್ಥಿಗಳಿಗೆ 2021-22ನೇ ಸಾಲಿಗೆ ದಾಖಲಾತಿ ಪಡೆಯುವುದು ಕಷ್ಟವಾಗಲಿದೆ.
-ಆರ್‌.ಸ್ನೇಹಲ್‌, ನಿರ್ದೇಶಕಿ, ಪಿಯು ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next