Advertisement

ಹಳ್ಳಿಯಲ್ಲಿ ಬಹಿಷ್ಕಾರ, ದಂಡಕ್ಕೆ ಅವಕಾಶವಿಲ್ಲ

09:11 PM Jan 04, 2020 | Lakshmi GovindaRaj |

ಹುಣಸೂರು: ಗ್ರಾಮದಲ್ಲಿ ತಪ್ಪು ಮಾಡಿದರೆಂಬ ಕಾರಣಕ್ಕೆ ಬಹಿಷ್ಕಾರ, ದಂಡದಂತಹ ಯಾವುದೇ ಅಮಾನುಷ, ಕಾನೂನು ಬಾಹಿರ ಕ್ರಮಗಳನ್ನು ಯಾರೂ ಕೈಗೊಳ್ಳಬಾರದು ಎಂದು ತಹಶೀಲ್ದಾರ್‌ ಐ.ಇ.ಬಸವರಾಜು ಗ್ರಾಮಸ್ಥರಿಗೆ ಸೂಚಿಸಿದರು.

Advertisement

ತಾಲೂಕಿನ ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಹಳ್ಳಿಯ ಯಜಮಾನರು ಗ್ರಾಮದ ರೈತಸಂಘ ಮತ್ತು ಮಾನವ ಹಕ್ಕುಗಳ ಸಮಿತಿ ಸದಸ್ಯರಾದ ಎಚ್‌.ಆರ್‌.ಚಂದ್ರಶೇಖರ್‌, ವಕೀಲರಾದ ಎಚ್‌.ಆರ್‌.ವಿಷಕಂಠ, ಎಚ್‌.ಡಿ.ರಾಜು, ಶಾಂತಕುಮಾರ್‌ ಅವರನ್ನು ಬಹಿಷ್ಕರಿಸಲಾಗಿತ್ತು ಈ ಕುರಿತು ಡಿ.28ರಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಪಂ ಇಒ ಗಿರೀಶ್‌, ವೃತ್ತನಿರೀಕ್ಷಕ ಪೂವಯ್ಯರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಬಸವರಾಜ್‌ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

ಕಾನೂನು ಮೀರಬೇಡಿ:
ಗ್ರಾಮಸ್ಥರು ಹಾಗೂ ದೂರುದಾರರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಸಂವಿಧಾನದಲ್ಲಿ ಬಹಿಷ್ಕಾರಕ್ಕೆ ಅವಕಾಶವೇ ಇಲ., ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಯಜಮಾನರು ಕೈಗೊಳ್ಳುವ ನಿರ್ಣಯಗಳು ಮತ್ತೂಬ್ಬರ ಬದುಕಿಗೆ ಎರವಾಗಬಾರದು. ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಹ ನಿರ್ಣಯ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.

ಸಾಮರಸ್ಯ: ಗ್ರಾಮದ ಯುವಕರು ಕೂಡ ಗ್ರಾಮದ ಸೌಹಾರ್ದ ಬದುಕಿಗೆ ಧಕ್ಕೆ ತರುವಂತೆ ನಡೆದುಕೊಳ್ಳುವುದು ಸೂಕ್ತವಲ್ಲ, ಎಲ್ಲರೂ ಸಾಮರಸ್ಯದಿಂದಿದ್ದಲ್ಲಿ ಮಾತ್ರ ಸುಖೀ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ಹೆಜ್ಜೆಯಿಡಬೇಕು. ಮುಂದೆ ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಇನ್ನಾವುದೇ ಪ್ರಕರಣ ನಡೆಯದಂತೆ ಎಲ್ಲರೂ ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಶಾಂತಿಗೆ ಅವಕಾಶ ನೀಡಬೇಡಿ: ತಾಪಂ ಇಒ ಗಿರೀಶ್‌ ಮಾತನಾಡಿ, ಗ್ರಾಮಗಳಲ್ಲಿ ಹಿರಿಯರ ಮಾರ್ಗದರ್ಶನ ಅತ್ಯವಶ್ಯ. ಆದರೆ, ತಪ್ಪು ಮಾಡಿದವರಿಗೆ ತಿದ್ದುಕೊಳ್ಳುವ ಅವಕಾಶ ನೀಡಬೇಕೆ ಹೊರತು, ದಂಡ, ಬಹಿಷ್ಕಾರದಂತಹ ಅನಿಷ್ಟ ಪದ್ಧತಿ ಜಾರಿಗೆ ತರಬಾರದು. ಇದರಿಂದ ಗ್ರಾಮಗಳಲ್ಲಿ ಅಶಾಂತಿ ಹೆಚ್ಚಲಿದೆ ಎಂದು ಎಚ್ಚರಿಸಿದರು. ಎಲ್ಲಾ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನಕ್ಕೆ ಇಡೀ ಗ್ರಾಮಸ್ಥರು ಸೌಹಾರ್ದಯುತ ಬದುಕು ಕಂಡುಕೊಳ್ಳುವುದಾಗಿ ವಾಗ್ಧಾನ ಮಾಡಿದರು. ಸಭೆಯಲ್ಲಿ ಎಸ್‌.ಐ.ಶಿವಪ್ರಕಾಶ್‌, ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪೊಲೀಸರಿಗೆ ಮಾಹಿತಿ ನೀಡಿ: ಬಹಿಷ್ಕಾರ, ದಂಡಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ವಿಚಾರಗಳ ಬಗ್ಗೆ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಮಾಹಿತಿ ನೀಡಿದರು. ಗ್ರಾಮದಲ್ಲಿ ಇಸ್ಪೀಟ್‌, ಅಕ್ರಮ ಮದ್ಯ ಮಾರಾಟ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

Advertisement

ಏನಿದು ಘಟನೆ?: ಹರಿವೆ ಗ್ರಾಮದಲ್ಲಿ ಕಳೆದ 15 ವರ್ಷಗಳ ಹಿಂದೆ ಬಹಿಷ್ಕಾರಕ್ಕೊಳಗಾಗಿದ್ದ ವ್ಯಕ್ತಿಯನ್ನು ಈ ನಾಲ್ವರು ಯವಕರು ಮಾತನಾಡಿಸಿದರೆಂಬ ಕಾರಣಕ್ಕೆ ಗ್ರಾಮದಲ್ಲಿ ಸಭೆ ನಡೆಸಿ ಯುವಕರನ್ನು ಸಹ ಬಹಿಷ್ಕರಿಸಿದ್ದಾರೆಂದು ಆರೋಪಿಸಿ ದೂರು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next