Advertisement

ಮೀಸಲಿನಲ್ಲಿ ಬದಲು ಇಲ್ಲ; ಸಚಿವರ ವಿರೋಧ ಹಿನ್ನೆಲೆ

06:00 AM Nov 20, 2018 | Team Udayavani |

ಬೆಂಗಳೂರು: ತೀವ್ರ ವಿವಾದಕ್ಕೊಳಗಾಗಿದ್ದ ಕೆಪಿಎಸ್‌ಸಿ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ, ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ನಿರಾಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ಸೋಮವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾಪವಾಗಿ ಕೆಪಿಎಸ್‌ಸಿ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ ವಿಚಾರ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಿ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು. ಹೀಗಾಗಿ, ಈ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಅಗತ್ಯಬಿದ್ದರೆ ಕಾಯ್ದೆಗೆ ತಿದ್ದುಪಡಿ ಹಾಗೂ ಹೊಸದಾಗಿ ನಿಯಮಾವಳಿ ರೂಪಿಸಲು ಸಹ ಸಂಪುಟ ಸಭೆ ಒಪ್ಪಿಗೆ ನೀಡಿತು ಎಂದು ಹೇಳಲಾಗಿದೆ.

ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಕೆಪಿಎಸ್‌ಸಿ ನೇಮಕಾತಿಯಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ನಿರಾಕರಿಸುವ ವಿಚಾರ ಸರ್ಕಾರದ ತೀರ್ಮಾನವಲ್ಲ. ಒಂದೊಮ್ಮೆ ಆ ರೀತಿ ಇದ್ದರೆ ಅಗತ್ಯ ತಿದ್ದುಪಡಿ ಅಥವಾ ಕಾನೂನು ರೂಪಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ,  ಈ ವಿಚಾರದಲ್ಲಿ ಯಾವುದೇ ಗೊಂದಲ ಅಗತ್ಯವಿಲ್ಲ. ಕೆಪಿಎಸ್‌ಸಿ ನೇಮಕಾತಿಯಲ್ಲಿ ಹಾಲಿ ಯಾವ ವ್ಯವಸ್ಥೆ ಇದೆಯೋ ಅದೇ ವ್ಯವಸ್ಥೆ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

ಸಲಹೆ ನಂತರ ತೀರ್ಮಾನ: ಎಸ್‌ಸಿ-ಎಸ್‌ಟಿ ಮುಂಬಡ್ತಿ ವಿಧೇಯಕ ಸಂಬಂಧ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ ಅವರಿಂದ ಕಾನೂನು ಸಲಹೆ ಕೇಳಲಾಗಿತ್ತು. ಅವರ ಸಲಹೆ ಬಂದ ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತೀರ್ಮಾನ ಕೈಗೊಳ್ಳಲು ಒತ್ತಾಯ
ಎಸ್‌ಸಿ-ಎಸ್‌ಟಿ ಮುಂಬಡ್ತಿ ವಿಧೇಯಕ ಕುರಿತು ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿ ಆದಷ್ಟು ಶೀಘ್ರ  ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಡಾ.ಜಿ.ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಒತ್ತಡ ಹೇರಿದರು. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಮುಂದೂಡುವುದು ಸರಿಯಲ್ಲ. ನ್ಯಾಯಾಲಯ ವಿಚಾರಣೆಗೂ ಎಸ್ಸಿ -ಎಸ್ಟಿ ನೌಕರರಿಗೆ ತತ್ಸಮಾನ ಹುದ್ದೆ ಕಲ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗೂ ಸಂಬಂಧವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next