Advertisement

POCSO Case; ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ: ಸಚಿವ ಎಂ.ಬಿ. ಪಾಟೀಲ

03:19 PM Jun 14, 2024 | Team Udayavani |

ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ದೌರ್ಜನ್ಯವಾದರೆ ಅದಕ್ಕೆ ಫೋಕ್ಸೋ ಕಾಯ್ದೆ ಅನ್ವಯ ಮಾಡಲಾಗುತ್ತದೆ. ಈ ಆ್ಯಕ್ಟ್ ಅತ್ಯಂತ ಗಂಭೀರವಾದದ್ದು. ಹೀಗಾಗಿ ಯಾವುದೇ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಲು ಬರಲ್ಲ ಎಂದರು.

ರಾಜ್ಯದಲ್ಲಿ ಚಿತ್ರದುರ್ಗ ಮುರುಘಾಮಠದ ಸ್ವಾಮಿಗಳ ಪ್ರಕರಣ ಗಮನಿಸಿದ್ದೀರಿ. ಫೋಕ್ಸೋ ಕಾಯ್ದೆಯಡಿ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೈಕೋರ್ಟ್ ವಾರಂಟ್ ಜಾರಿ ಮಾಡಿದೆ. ಅದರ ನಿರ್ದೇಶನ ಇರಬೇಕಾದರೆ ಕಾಂಗ್ರೆಸ್, ಬಿಜೆಪಿಯ ಪ್ರಶ್ನೆ ಬರಲ್ಲ. ಇದರಲ್ಲಿ ಯಡಿಯೂರಪ್ಪ ತಪ್ಪಿತಸ್ಥರು ಹೌದೋ ಅಲ್ಲವೋ ಅನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಸಂತ್ರಸ್ತೆಯೇ ನ್ಯಾಯಾಧೀಶರ ಎದುರು ಹೇಳಿಕೆ ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಬಹಿರಂಗ ಚರ್ಚೆಯಿಲ್ಲ

ಮೂವರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವನ್ನು ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿಸುತ್ತೇವೆ. ಬಹಿರಂಗವಾಗಿ ಈ ಕುರಿತು ಚರ್ಚಿಸಲು ಆಗಲ್ಲ. ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ನಮ್ಮ ವಿಚಾರ ತಿಳಿಸಿದ್ದೇವೆ. ಮುಂದೆಯೂ ಅಗತ್ಯವಿದ್ದಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದರು.

Advertisement

ರಾಜ ಮರ್ಯಾದೆಯ ಪ್ರಶ್ನೆಯಿಲ್ಲ

ಬಂಧಿತ ನಟ ದರ್ಶನ್‌ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರೆಯುವ ಪ್ರಶ್ನೆಯೇ ಇಲ್ಲ. ಇಂತಹ ಘಟನೆಯಾದ ನಂತರ ರಾಯಭಾರಿಯಾಗಿ ಮುಂದುವರಿಸಲು ಆಗಲ್ಲ ಎಂದರು.

ಲೋಕಸಭೆಯಲ್ಲಿ ಲೀಡ್ ತಂದುಕೊಡದ ಸಚಿವರ ತಲೆದಂಡ ಎನ್ನುವುದು ಮಾಧ್ಯಮಗಳ ಸೃಷ್ಟಿ. ಎಲ್ಲರೂ ಗಂಭೀರವಾಗಿ ಚುನಾವಣೆ ಮಾಡಿ ಎಂದು ಸೂಚಿಸಲಾಗಿತ್ತು. ಚುನಾವಣೆಯಲ್ಲಿ ಸೋಲಿನ ಕುರಿತು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.

ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವೆಂಬ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ಮೊದಲು ಅವರಿಗೆ ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ಹೇಳಿ. ನಮ್ಮ ಸರ್ಕಾರ ಪತನಗೊಳಿಸಬೇಕಾದರೆ 60 ಶಾಸಕರ ಅಗತ್ಯವಿದೆ. ಬಿಜೆಪಿಯ ಒಬ್ಬರು ಶಾಸಕರು ನಮ್ಮ ಜೊತೆಗಿದ್ದಾರೆ. ಜೆಡಿಎಸ್‌ನ ಬಹಳಷ್ಟು ಶಾಸಕರು ನಮ್ಮ ಪಕ್ಷ ಸೇರ್ಪಡೆಗೆ ಸಿದ್ಧರಾಗಿದ್ದಾರೆ. ನಮ್ಮಲ್ಲಿ 60 ಶಾಸಕರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕಾಗುತ್ತದೆ ಇದೇನು ಹುಡುಗಾಟನಾ? ಒಬ್ಬ ಶಾಸಕರೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಗ್ಯಾರಂಟಿಗಳ ಕುರಿತು ಚರ್ಚೆ ಮಾಡುತ್ತೇವೆ. ಅವುಗಳನ್ನು ರದ್ದು ಮಾಡುವ ಪ್ರಸ್ತಾವನೆ ನಮ್ಮ ಬಳಿ ಸದ್ಯಕ್ಕಿಲ್ಲ. ಸಿಎಂ ಯಾರು ಆಗಬೇಕು ಅನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಸಿಎಂ ಆಗಲು ಶಾಸಕರ ಬೆಂಬಲ ಬೇಕು. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸದ್ಯಕ್ಕೆ ಆ ಪ್ರಶ್ನೆ ಉದ್ಭವಿಸಲ್ಲ. ಆ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದು, ಸಿಎಂ ಖರ್ಚಿ ಖಾಲಿ ಇಲ್ಲ ಎಂದರು.

ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ. ರಾಜ್ಯದ ಕೆಲ ಬೇಡಿಕೆಗಳನ್ನು ಶೀಘ್ರವಾಗಿ ಅವರಿಗೆ ಸಲ್ಲಿಸಲಾಗುತ್ತದೆ. ರಾಜ್ಯಕ್ಕೆ ಮಹತ್ವದ ಖಾತೆಗಳು ಸಿಕ್ಕಿರುವುದರಿಂದ ನಮ್ಮ ರಾಜ್ಯಕ್ಕೂ ಒಂದಷ್ಟು ನೆರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next