Advertisement

ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ: ಎ‍ಚ್ಡಿಡಿ

01:50 AM Jun 21, 2019 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ನಗರ ಸ್ಥಳೀಯ ಸಂಸ್ಥೆ, ಮಹಾ ನಗರ ಪಾಲಿಕೆ, ಪಂಚಾ ಯತ್‌ ಚುನಾವಣೆ ಗಳಿಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ಗಮನಹರಿಸಲು ಹೇಳಿದ್ದೇನೆಯೇ ಹೊರತು ಮಧ್ಯಂತರ ಚುನಾ ವಣೆಗೆ ಸಿದ್ಧರಾಗಿ ಎಂದಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ನಾನು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನು ಭೇಟಿಯಾದಾಗ ರಾಜ್ಯದ ಯಾವ ಕಾಂಗ್ರೆಸ್‌ ನಾಯಕರ ವಿರುದ್ಧವೂ ದೂರು ಹೇಳಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಸಲು ಪಕ್ಷೇತರ ಶಾಸಕರಿಗೆ ಮಂತ್ರಿ ಮಾಡಲು ಜೆಡಿಎಸ್‌ನ ಒಂದು ಸ್ಥಾನ ಸಹ ಬಿಟ್ಟುಕೊಟ್ಟಿದ್ದೇವೆ.

ಇನ್ನಾದರೂ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರದಂತೆ ನೋಡಿಕೊಳ್ಳಿ ಎಂದಷ್ಟೇ ಹೇಳಿ ಬಂದೆ.

ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರಿಂದ ಕಾಂಗ್ರೆಸ್‌ಗೆ ಸಮಸ್ಯೆಯಾಗಿದೆ ಎಂಬ ಮಾತುಗಳ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಮೈತ್ರಿ ಸರ್ಕಾರ ರಚನೆಯಾಗಿದ್ದೇ ಕಾಂಗ್ರೆಸ್‌ ಒತ್ತಾಯದಿಂದ. ವಿಧಾನಸಭೆ ಚುನಾವಣೆ ಫ‌ಲಿತಾಂಶದ ನಂತರ ಸರ್ಕಾರ ರಚನೆ ಪ್ರಸ್ತಾಪ ಬಂದಾಗ ನಾನು ಹಿಂದಿನ ಕಹಿ ಅನುಭವ ಹೇಳಿ ಬೇಡ ಎಂದಿದ್ದೆ. ಆದರೆ, ಸೋನಿಯಾಗಾಂಧಿ, ರಾಹುಲ್ಗಾಂಧಿ, ಗುಲಾಂ ನಬಿ ಆಜಾದ್‌ ಅವರು ಚರ್ಚಿಸಿ ತೀರ್ಮಾನ ಕೈಗೊಂಡರು. ನಂತರ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಪರಮೇಶ್ವರ್‌ ಅವರು ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಂಡರು ಎಂದು ಹೇಳಿದರು.

Advertisement

ಗ್ರಾಮವಾಸ್ತವ್ಯ ಒಳ್ಳೆಯದು: ಮೈತ್ರಿ ಸರ್ಕಾರಕ್ಕೆ ತೊಂದರೆಯಾಗುವ ಯಾವುದೇ ಮಾತು ನಾನು ಆಡುವುದಿಲ್ಲ. ನಮ್ಮ ಪಕ್ಷದ ನಾಯಕರಿಗೂ ಹೇಳಿದ್ದೇನೆ. ಸರ್ಕಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ. ಗ್ರಾಮ ವಾಸ್ತವ್ಯ ಆರಂಭಿಸಲು ಮುಂದಾಗಿದ್ದಾರೆ. ಒಳ್ಳೆಯದು ಎಂದು ಹೇಳಿದ್ದೇನೆ. ಪಕ್ಷ ಸಂಘಟನೆ ನಾನು ಮಾಡುತ್ತೇನೆ ಎಂದು ತಿಳಿಸಿದರು.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೋಲು ಅನುಭವಿಸಿದವರ ಸಮಾವೇಶ ಆಯೋಜಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರನ್ನೂ ಆಹ್ವಾನಿಸಿದ್ದೇನೆ. ಇದು ದಿಢೀರ್‌ ನಿರ್ಧಾರವಲ್ಲ ಎಂದು ಹೇಳಿದರು. ಒಂದು ದೇಶ ಒಂದು ಚುನಾವಣೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಪರ-ವಿರೋಧ ಅಭಿಪ್ರಾಯವಿದೆ. ಅದು ತಕ್ಷಣಕ್ಕೆ ಆಗುವ ಕೆಲಸವೂ ಅಲ್ಲ. ಸಾಕಷ್ಟು ಚರ್ಚೆಗಳು ನಡೆಯಬೇಕು. ಮತದಾರರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು. ಹೀಗಾಗಿ, ಆ ಬಗ್ಗೆ ಆತುರದ ತೀರ್ಮಾನ ಸಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂಸತ್‌ ಭವನದಲ್ಲಿ ಜೈ ಶ್ರೀರಾಮ್‌ ಎಂಬ ಘೋಷಣೆ ಕುರಿತು ಪ್ರತಿಕ್ರಿಯಿಸಿ, ಅಯ್ಯೋ ನಾನು ಈಗ ಸಂಸದನೇ ಅಲ್ಲ. ಆ ಬಗ್ಗೆ ನನ್ನನ್ನು ಏಕೆ ಕೇಳ್ತೀರಿ? ನಾನು ಆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next