ಬೆಂಗಳೂರು: “ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಬಗ್ಗೆ ಅತೃಪ್ತಿಯ ಪ್ರಶ್ನೆಯೇ ಇಲ್ಲ. ಕೆಲವರು ಹೆಚ್ಚಿನ ಅನುದಾನ ಕೇಳಿರಬಹುದು. ಹಾಗೆಂದು ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಒಡಕಿಲ್ಲ’ ಎಂದು ಉಪ ಮುಖ್ಯಮಂತ್ರಿ
ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಶನಿವಾರ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡುವ ಬಜೆಟ್ ಮಂಡಿಸಿದ್ದಾರೆ. 2019-20ನೇ ಸಾಲಿನ ಬಜೆಟ್ ಗಾತ್ರಕ್ಕಿಂತ 3,500 ಕೋಟಿ ರೂ. ಹೆಚ್ಚುವರಿ ಮೊತ್ತದ ಬಜೆಟ್ ಮಂಡನೆ ಆಗಿದೆ. ನಾನಾ ಕ್ಷೇತ್ರದ ತಜ್ಞರೂ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಸಮರ್ಥಿಸಿಕೊಂಡರು.
ಶಿಸ್ತಿನ ಪಕ್ಷ: ಇಲಾಖಾವಾರು ಅನುದಾನದ ಜತೆಗೆ ನೀರಾವರಿ ಕ್ಷೇತ್ರಕ್ಕೂ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಈ ಬಗ್ಗೆ ಬೇಸರವಿದ್ದವರು ಮುಖ್ಯಮಂತ್ರಿಗಳೊಂದಿಗೆ ಹಾಗೂ ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳಲಿದ್ದಾರೆ.
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ನಮ್ಮಲ್ಲಿ ಒಗ್ಗಟ್ಟಿದೆ ಎಂದರು.
ಭಿನ್ನಾಭಿಪ್ರಾಯ ಸಹಜ: ಕೆಲವರು ಪಕ್ಷದಲ್ಲಿದ್ದುಕೊಂಡೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೆಲ್ಲಾ ಊಹಾಪೋಹ. ಪಕ್ಷದಲ್ಲಿ ಯಾರೂ ಇಂತಹ ಸಾಹಸಕ್ಕೆ ಕೈಹಾಕಿಲ್ಲ. ಒಂದು ಮನೆ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಅವೆಲ್ಲಾ ಸರಿಯಾಗುತ್ತವೆ ಎಂದು ತಿಳಿಸಿದರು.
ಖುಷಿ ಪಡುತ್ತಾರೆ: ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಅಂದರೆ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಿಲಾನ್ಯಾಸ ನೆರವೇರಿಸಿ ಯೋಜನೆಗೆ ಚಾಲನೆ ನೀಡ ಲಾಗಿತ್ತು. ಯಾವುದೇ ಹೊಸ ಯೋಜನೆ ಕೈಗೆತ್ತಿಕೊಂಡಾಗ ಆಕ್ಷೇಪ ಸಹಜ. ಅದೇ ರೀತಿ ಎತ್ತಿನ ಹೊಳೆ ಯೋಜನೆಗೂ ವಿರೋಧ ವ್ಯಕ್ತವಾಗಿದೆ. ಆದರೆ ಬಯಲುಸೀಮೆ ಜನರಿಗೆ ಎತ್ತಿನಹೊಳೆ ನೀರು ತಲುಪಿದಾಗ ಸಂತೋಷಪಡುತ್ತಾರೆಂದರು.