ಕೋಲಾರ: ಜಿಲ್ಲೆಯಲ್ಲಿ ಪೋಷಣಾ ಅಭಿಯಾನ, ತರಬೇತಿ, ಸಮುದಾಯ ಆಧಾರಿತ ಚಟುವಟಿಕೆ ಕಾರ್ಯಕ್ರಮದಡಿ ನಡೆಸಿರುವ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ನೀಡದಿರುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಭಾಂಗಣದಲ್ಲಿ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಪೋಷಣಾ ಅಭಿಯಾನದಡಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಇನ್ನಿತರೆ ಕಾರ್ಯಕ್ರಮ ನಡೆಸಲಾಗಿದೆ.
ತರಬೇತಿ, ಸಮುದಾಯ ಆಧಾರಿತ ಚಟುವಟಿಕೆಯಡಿ 12366 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಉಪ ನಿರ್ದೇಶಕಿ ಎಂ.ಜಿ. ಪಾಲಿ ಸಭೆಗೆ ಮಾಹಿತಿ ನೀಡಿದರು. ಕಾರ್ಯಕ್ರಮ ನಡೆಸಿರುವ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಎಂದು ಸಂಸದ ಎಸ್. ಮುನಿಸ್ವಾಮಿ ಆಕ್ಷೇಪಿದಾಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಧ್ವನಿಗೂಡಿಸಿದರು. ಜಿಪಂ ಅಧ್ಯಕ್ಷ ಸಿ.ಎಸ್ ವೆಂಕಟೇಶ್ ಕೂಡ ಮಾಹಿತಿ ಇಲ್ಲ ಎಂದು ಹೇಳಿದ್ದು, ಕಾರ್ಯ ಕ್ರಮಗಳಿಗೆ ಪ್ರಚಾರ ನೀಡದಿರುವ ಬಗ್ಗೆ ಸಚಿವೆ ಅಸಮಾಧಾನ ವ್ಯಕ್ತಪಡಿಸಿ, ಇಲ್ಲಿದ್ದವರೆ ಯಾರಿ ಗೂ ಮಾಹಿತಿ ಇಲ್ಲ, ಏನೇನು ಮಾಡಿದ್ದೀರಿ ಎಂದು ಸಿಡಿಪಿಒ ಅವರನ್ನು ಪ್ರಶ್ನಿಸಿದರು.
ಮುಳಬಾಗಿಲಿನ ಕುರುಡುಮಲೆಯಲ್ಲಿ ಜನಸ್ಪಂದನದ ವೇಳೆ ಸೀಮಂತ ಕಾರ್ಯಕ್ರಮ ನಡೆಸಿದ್ದಾಗಿ ಹೇಳಿದರೆ, ರಂಗಮಂದಿರದಲ್ಲಿ ಕಾರ್ಯಕ್ರ ಮವೊಂದರಲ್ಲಿ ಸಂಸದರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ನಡೆಸಿದ್ದಾಗಿ ಉಪ ನಿರ್ದೇಶಕಿ ತಿಳಿಸಿದರಾದರೂ ಇತರೆ ಯಾವುದೇ ಸಿಡಿಪಿಒಗಳು ಮಾಹಿತಿ ನೀಡಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಸಚಿವೆ ಜೊಲ್ಲೆ, ಕಾರ್ಯಕ್ರಮ ನಡೆಸಿದ್ದರೆ ಅದಕ್ಕೆ ಸೂಕ್ತ ಪ್ರಚಾರ ನೀಡಿದಂತಿಲ್ಲ. ಹೀಗಾಗಿ ಯಾರಿಗೂ ಮಾಹಿತಿ ಇಲ್ಲ.
ಸರಕಾರದ ಕಾರ್ಯಕ್ರಮಗಳಲ್ಲಿ ಫಲಾನು ಭವಿಗಳಿಗೆ ಪ್ರಯೋಜನ ಸಿಕ್ಕಿದೆ ಎಂದು ಜನರಿಗೆ ತಿಳಿಯಬೇಕು, ಕಾರ್ಯಕ್ರಮ ಸಣ್ಣದಿರಲಿ, ದೊಡ್ಡದಿರಲಿ ಜನಪ್ರತಿನಿಧಿಗಳನ್ನು ಕರೆಯ ಬೇಕೆಂದು ಸಚಿವೆಯಾದ ನಂತರ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದೆ. ಸುಮ್ಮನೆ ನನಗೆ ಸಿಟ್ಟು ಭರಿಸಬೇಡಿ, ಬೆನ್ನು ಹತ್ತಿದರೆ ಬಿಡುವುದಿಲ್ಲ, ರಾಜ್ಯದ 18 ಜಿಲ್ಲೆಗಳ ಪ್ರವಾಸ ಮಾಡಿದ್ದೇವೆ, ಎಲ್ಲಾ ಕಡೆ ನಾವು ಇಂತಹ ಕಾರ್ಯಕ್ರಮ ಮಾಡಿದ್ದೀವಿ ಎಂದು ಅಧಿಕಾರಿಗಳು ಹೇಳಿದ್ದಾರೆ,
ಕೋಲಾರದಲ್ಲಿ ಮಾತ್ರ ಏನೂ ಹೇಳ್ತಿಲ್ಲ, ಸುಳ್ಳು ವರದಿ ಯಾಕೆ ನೀಡುತ್ತೀರಿ ಎಂದು ಪ್ರಶ್ನಿಸಿದರು. ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾರ್ಯಕ್ರಮ ಏನೇ ಇರಲಿ, ನಮಗೂ ತಿಳಿಸಿ ಬರುತ್ತೇವೆ ಎಂದು ಹೇಳಿದರು. ಡಿ.ಸಿ. ಸಿ.ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾನುಪಾತ 928 ಇದೆ, ರಾಜ್ಯದ ಸರಾಸರಿಗಿಂತಲೂ ಕಡಿಮೆ ಇದೆ, ಮಾಲೂರಿನಲ್ಲಿ ತೀರಾ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಸೂಚಿಸಿದ್ದೇವೆ. ಸ್ಕ್ಯಾನಿಂಗ್ ಸೆಂಟರ್ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದಾಗಿ ತಿಳಿಸಿದರು.