Advertisement

ದೇಶದಲ್ಲಿ ಕಾನೂನೇ ಸರಿ ಇಲ್ಲ

05:15 AM Dec 26, 2018 | Team Udayavani |

ಮಂಡ್ಯ: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿಲ್ಲ. ಒಬ್ಬ ಪ್ರಜೆಯಾಗಿ ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ. ಕೊಲೆ ಮಾಡುವ ಹಂತಕರು ಜಾಮೀನು ಪಡೆದು ಸಲೀಸಾಗಿ ಜೈಲಿನಿಂದ ಆಚೆಗೆ ಬರುತ್ತಾರೆ. ಈ ರೀತಿಯ ಕಾನೂನು ವ್ಯವಸ್ಥೆ  ನಮ್ಮಲ್ಲಿದೆ…

Advertisement

ಇದು ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರ ಮಾತು. ತೊಪ್ಪನ ಹಳ್ಳಿಗೆ ಆಗಮಿಸಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರಕಾಶ್‌ ಮೃತದೇಹದ ಅಂತಿಮ ದರ್ಶನ ಪಡೆದ ಅನಂತರ ಮಾತನಾಡಿದ ಅವರು, ಹತ್ಯೆ ಸುದ್ದಿ ತಿಳಿದು ಉದ್ವೇಗದಿಂದ ಹಂತಕರನ್ನು ಶೂಟೌಟ್‌ ಮಾಡಿ ಎಂದಿದ್ದೇನೆಯೇ ಹೊರತು, ಮುಖ್ಯಮಂತ್ರಿಯಾಗಿ ಅಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರಕಾಶ್‌ ಹತ್ಯೆಯ ಸೂಚನೆಯನ್ನು ಗ್ರಾಮಸ್ಥರು ಪೊಲೀಸ್‌ ಅಧಿಕಾರಿಗಳಿಗೆ ನೀಡಿದ್ದರು. ಅಧಿಕಾರಿಗಳು ಆ ಬಗ್ಗೆ ಕ್ರಮ ವಹಿಸಲಿಲ್ಲ ಎಂಬ ಮಾಹಿತಿ ಇದೆ. ಕರ್ತವ್ಯಲೋಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದರು.

ವಿಶೇಷವೆಂದರೆ ಸಿಎಂ ಕುಮಾರಸ್ವಾಮಿ ಮೂರು ದಿನಗಳ ಹಿಂದೆ ಬೆಂಗಳೂರಿನ ಕಾರ್ಯಕ್ರಮದಲ್ಲೂ ಕೊಳ್ಳೆ ಹೊಡೆಯುವವರಿಗೆ ಜಾಮೀನು ಸಿಗುತ್ತದೆ. ಇಂಥವರ ವಿರುದ್ಧ ಕ್ರಮಕ್ಕೆ ಮುಂದಾಗುವಷ್ಟರಲ್ಲಿ ಕೋರ್ಟ್‌ಗಳಲ್ಲಿ ಜಾಮೀನು ಪಡೆದು ಹೊರಗೆ ಬರುತ್ತಾರೆ. ಕಾನೂನುಗಳೂ ಲೂಟಿಕೋರರ ಪರವಾಗಿಯೇ ಇರುವಂತೆ ಭಾಸವಾಗುತ್ತಿವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಶೂಟೌಟ್‌ ಹೇಳಿಕೆಯನ್ನು ಮಾಧ್ಯಮದವರು ವೈಭವೀಕರಿಸುತ್ತಾರೆ. ಬಿಜೆಪಿಯವರು ತಮ್ಮ ಕಾರ್ಯಕರ್ತರು ಸತ್ತರೆ ಈ ಕಾಳಜಿ ಇರುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಆದರೆ, ಯಾರ ಹತ್ಯೆಯಾದಾಗಲೂ ನನ್ನ ಮನಸ್ಸು ತಡೆಯುವುದಿಲ್ಲ. ನನ್ನ ಆಡಳಿತಾವಧಿಯಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಎಂದರು.

ಶೂಟೌಟ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ
ಮುಖ್ಯಮಂತ್ರಿಯಾಗಿ ಶೂಟೌಟ್‌ ಮಾಡಿ ಎಂದು ಆದೇಶಿಸಬಾರದು. ಇದರಿಂದ ಅಧಿಕಾರಿಗಳಿಗೆ ಮುಕ್ತ ಅವಕಾಶ ಸಿಕ್ಕಂತಾಗುತ್ತದೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಘಟನೆ ಖಂಡನೀಯ ಎಂದಿರುವ ಕೇಂದ್ರ ಸಚಿವ ಸದಾನಂದ ಗೌಡ, ನಮ್ಮ ಪಕ್ಷದ ಕಾರ್ಯಕರ್ತರ ಜೀವ ಮತ್ತು ಕುಟುಂಬಸ್ಥರ ಕಣ್ಣೀರು ಕೂಡ ಅಷ್ಟೇ ಅಮೂಲ್ಯವಾದದ್ದು ಎಂದು ಸಿಎಂ ಅವರನ್ನು ಛೇಡಿಸಿದ್ದಾರೆ.

ಹತ್ಯೆಗೆ ರಾಜಕೀಯ ದ್ವೇಷ ಶಂಕೆ
ಪ್ರಕಾಶ್‌ ಹತ್ಯೆ ಹಿಂದೆ ರಾಜಕೀಯ ವೈಷಮ್ಯ ಇರಬಹುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಶಂಕಿಸಿದ್ದಾರೆ.

Advertisement

ಏಳು ಮಂದಿ ವಿರುದ್ಧ ಪ್ರಕರಣ
ಮೃತ ಪ್ರಕಾಶ್‌ ಸಹೋದರನ ಪುತ್ರ ಅಭಿಲಾಷ್‌ ನೀಡಿದ ದೂರಿನ ಮೇರೆಗೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಒಂದಿಷ್ಟು ಸುಳಿವು ದೊರೆತಿದ್ದು ತನಿಖೆ ಮತ್ತಷ್ಟು ಚುರುಕುಗೊಳಿಸಿ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ವರು ಪೊಲೀಸರ ತಲೆದಂಡ ಸಾಧ್ಯತೆ
ಪ್ರಕರಣದಲ್ಲಿ ಮದ್ದೂರಿನ ನಾಲ್ವರು ಪೊಲೀಸರ ತಲೆದಂಡ ಸಾಧ್ಯತೆ ಹೆಚ್ಚಾಗಿವೆ. ತೊಪ್ಪನಹಳ್ಳಿ ಜೋಡಿ ಕೊಲೆ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದು, ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಪ್ರಕಾಶ್‌ ಮನವಿ ಮಾಡಿದ್ದರು. ಆದರೆ, ಪೊಲೀಸರು ಲೋಪ ಎಸಗಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಶೂಟೌಟ್‌ ಮಾಡುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿರುವುದು ಸರಿಯಲ್ಲ. ಇದರಿಂದ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದಂತಾಗುತ್ತದೆ. ಬಳಿಕ ತಾವು ಆವೇಶದಲ್ಲಿ ಆ ರೀತಿ ಹೇಳಿದ್ದು, ಮುಖ್ಯಮಂತ್ರಿಯಾಗಿ ಹೇಳಿಲ್ಲ ಎಂದಿದ್ದಾರೆ. ಹಾಗಾದರೆ ಅವರು ಈಗ ಮುಖ್ಯಮಂತ್ರಿಗಳಲ್ಲವೇ?
– ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ  ನಾಯಕ

ರಾಜಕೀಯ ಪಕ್ಷದ ಕಾರ್ಯಕರ್ತರ ಕೊಲೆಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಇಂದು ಅಂತಹ ಒಂದು ಘಟನೆ ಮದ್ದೂರಿನಲ್ಲಿ ನಡೆದಿದೆ. ಇದು ಖಂಡನೀಯ. ನಾವು ಕಳೆದುಕೊಂಡ ನಮ್ಮ ಪಕ್ಷದ ಕಾರ್ಯಕರ್ತರ ಜೀವ, ಕುಟುಂಬಸ್ಥರ ಕಣ್ಣೀರು ಕೂಡ ಅಮೂಲ್ಯವಾದದ್ದು, ಮುಖ್ಯಮಂತ್ರಿಗಳು ಗಮನಿಸಲಿ.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next