Advertisement

Belman: ಬೆಳೆಯುತ್ತಿರುವ ಬೆಳ್ಮಣ್‌ಗೆ ಸರಿಯಾದ ಬಸ್‌ ನಿಲ್ದಾಣವೇ ಇಲ್ಲ

12:19 PM Aug 01, 2024 | Team Udayavani |

ಬೆಳ್ಮಣ್‌: ವಿವಿಧ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಬೆಳ್ಮಣ್‌ ಪೇಟೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇಷ್ಟು ದೊಡ್ಡ ಪೇಟೆಯಲ್ಲಿ ಬಸ್‌ ಪ್ರಯಾಣಿಕರಿಗೆ ಸೂಕ್ತವಾದ ಬಸ್ಸು ನಿಲ್ದಾಣವೇ ಇಲ್ಲ. ಪ್ರಯಾಣಿಕರು ಮಳೆಗಾಲದಲ್ಲಿ ನೆನೆಯುತ್ತಾ, ಬೇಸಿಗೆಯಲ್ಲಿ ಒಣಗುತ್ತಾ ಅಂಗಡಿಗಳ ಮುಂದೆ ನಿಲ್ಲಬೇಕಾಗಿದೆ.

Advertisement

ಬೆಳ್ಮಣ್‌ ಬಸ್ಸು ನಿಲ್ದಾಣದಲ್ಲಿ ಹಿಂದಿನಿಂದಲೂ ಮಂಗಳೂರು ಕಡೆಗೆ ಸಾಗುವ ಬಸ್‌ಗಳಿಗೆ ತಂಗುದಾಣವಿದೆ. ಆದರೆ, ಅದು ಕಿರಿದಾಗಿದ್ದು ಕೆಲವೇ ಮಂದಿ ನಿಂತರೂ ತುಂಬಿ ಹೋಗುತ್ತದೆ. ಉಳಿದ ಪ್ರಯಾಣಿಕರು ಮಳೆ ಬಿಸಿಲಿಗೆ ಹೊರಗೆ ನಿಂತುಕೊಂಡೇ ಬಸ್ಸು ಕಾಯುವುದು ಅನಿವಾರ್ಯವಾಗಿದೆ. ಇನ್ನು ಕಾರ್ಕಳ ಹಾಗೂ ಉಡುಪಿ ಕಡೆಯತ್ತ ಬಸ್ಸು ಕಾಯುವ ಮಂದಿಗೆ ಯಾವ ವ್ಯವಸ್ಥೆಯೂ ಇಲ್ಲ. ಅವರು ಗಂಟೆಗಟ್ಟಲೆ ಮಳೆಯಲ್ಲಿ ನೆನೆದು ಬಿಸಿಲಲ್ಲಿ ಬೇಯಲೇಬೇಕು.

ಪ್ರತೀ ದಿನ ನಿಟ್ಟೆ, ಉಡುಪಿ, ಶಿರ್ವ, ಕಾರ್ಕಳ ಹಾಗೂ ಮಂಗಳೂರು ಭಾಗದ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವಿವಿಧ ಧಾರ್ಮಿಕ ಕೇಂದ್ರ, ಸರಕಾರಿಕಛೇರಿಗಳಿಗೆ ತೆರಳುವ ಜನ ರಸ್ತೆಯ ಬದಿಯಲ್ಲೇ ಬಸ್ಸಿಗಾಗಿ ಕಾಯುವಂತಾಗಿದೆ. ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿ ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಸಮೀಪದಲ್ಲಿರುವ ಅಂಗಡಿಗಳ ಆಶ್ರಯವನ್ನು ಪಡೆಯುವಂತಾಗಿದೆ.

ಹೀಗಾಗಿ ಬೆಳ್ಮಣ್‌ನಿಂದ ಮಂಗಳೂರು ಸಾಗುವ ಕಡೆಯಲ್ಲಿ ಸುಂದರವಾದ ಹೆಚ್ಚು ಸಾಮರ್ಥಯವನ್ನು ಹೊಂದುವಂತಹ ತಂಗುದಾಣದ ಜೊತೆಯಲ್ಲಿ ಕಾರ್ಕಳ ಕಡೆಯತ್ತ ಸಾಗುವ ಭಾಗದಲ್ಲಿಯೂ ಪ್ರಯಾಣಿಕರಿಗೆ ಬಸ್ಸು ಕಾಯಲು ಅನುಕೂಲವಾಗುವ ನಿಟ್ಟಿನಲ್ಲೊಂದು ಪ್ರಯಾಣಿಕರ ತಂಗುದಾಣದ ಅಗತ್ಯವಿದೆ ಎನ್ನುವುದು ಪ್ರಯಾಣಿಕರ ಮನವಿ.

ಪ್ರಯಾಣಿಕರಿಗೆ ಸಂಕಷ್ಟ
ಪ್ರಮುಖ ಪೇಟೆಯಾಗಿರುವ ಬೆಳ್ಮಣ್‌ಗೆ ಸೂಕ್ತ ಬಸ್ಸು ತಂಗುದಾಣದ ಅಗತ್ಯ ಇದೆ. ಕಾಲೇಜಿಗೆ ತೆರಳುವವರು ಅಂಗಡಿ ಮುಂಭಾಗದಲ್ಲಿ ಒದ್ದೆಯಾಗಿ ನಿಂತು ಬಸ್‌ ಕಾಯಬೇಕು. ಪ್ರಯಾಣಿಕರ ಕಷ್ಟ ಅರಿತು ಸೂಕ್ತ ನಿಲ್ದಾಣ ನಿರ್ಮಿಸಬೇಕು.
-ರಘುನಾಥ್‌, ಬೆಳ್ಮಣ್‌ ನಿವಾಸಿ, ಪ್ರಸ್ತುತ್‌ ಶೆಟ್ಟಿ, ಕಾಲೇಜು ವಿದ್ಯಾರ್ಥಿ

Advertisement

ಬಸ್‌ ನಿಲ್ದಾಣಕ್ಕೆ ಪ್ರಯತ್ನ
ಪಂಚಾಯತ್‌ನ ಸಭೆಯಲ್ಲಿ ಸಮಾಲೋಚನೆ ನಡೆಸಿ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್‌ ತಂಗುದಾಣ ನಿರ್ಮಿಸುವ ಪ್ರಯತ್ನ ನಡೆಸಲಾಗುವುದು.
-ರಾಮೇಶ್ವರೀ ಶೆಟ್ಟಿ, ಬೆಳ್ಮಣ್‌ ಗ್ರಾ.ಪಂ. ಅಧ್ಯಕ್ಷೆ

ಬೆಳ್ಮಣ್‌ ಎಂಬ ಜಂಕ್ಷನ್‌ ಪ್ಲೇಸ್‌
ಕಾರ್ಕಳ ನಿಟ್ಟೆ ಭಾಗದಿಂದ, ಮೂಡಬಿದ್ರೆ, ಮುಂಡ್ಕೂರು ಕಿನ್ನಿಗೋಳಿ ಭಾಗದಿಂದ, ಉಡುಪಿ ಶಿರ್ವ ಕಡೆಯಿಂದ ಮತ್ತು ಪಡುಬಿದ್ರೆ, ಅಡ್ವೆ, ನಂದಿಕೂರು ಭಾಗದಿಂದ ಬರುವ ನೂರಾರು ಪ್ರಯಾಣಿಕರಿಗೆ ಬೆಳ್ಮಣ್‌ ಪ್ರಮುಖ ಜಂಕ್ಷನ್‌. ಹೀಗಾಗಿ ಇಲ್ಲಿ ನಿತ್ಯ ನೂರಾರು ಪ್ರಯಾಣಿಕರು ನೆರೆದಿರುತ್ತಾರೆ. ಉಡುಪಿ ಬಸ್‌ಗಳಿಗೆ ಜನ ಹತ್ತುವ, ಇಳಿಯುವ ತಿರುವು ತುಂಬ ಅಪಾಯಕಾರಿಯಾಗಿದ್ದು, ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಪಕ್ಕದಲ್ಲೇ ಜಾಗವಿದೆ, ಮನಸ್ಸಿಲ್ಲ!
ಬೆಳ್ಮಣ್‌ ಬಸ್ಸು ನಿಲ್ದಾಣ ಕಟ್ಟಡಕ್ಕೆ ತಾಗಿಕೊಂಡೇ ಹೆದ್ದಾರಿ ಬದಿಯಲ್ಲಿ ಖಾಲಿ ಜಾಗವಿದ್ದರೂ ಇದಕ್ಕೂ ಉಪಯೋಗಿಸುವಲ್ಲಿ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ. ಈ ಹಿಂದೆ ರಾಜ್ಯ ಹೆದ್ದಾರಿ1ರ ವಿಸ್ತರಣೆ ಸಂದರ್ಭದಲ್ಲಿ ಹಿಂದಿನ ಪಂಚಾಯತ್‌ ಆಡಳಿತ ಮೀನು ಮಾರುಕಟ್ಟೆಯ ಕಟ್ಟಡವನ್ನು ಸಂಪೂರ್ಣ ಕೆಡವಿತ್ತು. ಅಲ್ಲಿ ಸಂಕೀರ್ಣ ನಿರ್ಮಾಣಕ್ಕೆ ಕಾನೂನು ತೊಡಕುಗಳುಉಂಟಾಗಿದ್ದರಿಂದ ಜಾಗ ಖಾಲಿ ಬಿದ್ದಿದೆ. ಈ ಜಾಗವನ್ನು ಒಂದೋ ಪ್ರಯಾಣಿಕರ ತಂಗುದಾಣಕ್ಕೆ ಇಲ್ಲವೇ ಕಾರು ಹಾಗೂ ಆಟೋರಿಕ್ಷಾ ನಿಲ್ದಾಣವಾಗಿ ಬಳಸಲು ಅವಕಾಶಗಳಿವೆ.

– ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next