Advertisement

ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಸಚಿವ ಡಾ.ಅಶ್ವತ್ಥನಾರಾಯಣ

06:11 PM Oct 10, 2021 | Team Udayavani |

ಬೀದರ:  ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಇದಕ್ಕೆ ಕಾನೂನಿನಲ್ಲಿಯೂ ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸಿ.ಎಸ್ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಖಾಯಂ ಕುರಿತು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಅವರ ಸೇವೆಯನ್ನು ಪ್ರತಿ ವರ್ಷದಂತೆ ಮುಂದುವರೆಸಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅನುಪಾತದಲ್ಲಿ ಉಪನ್ಯಾಸಕರ ನೇಮಕಾತಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಇನ್ನೂ ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಿಸುವ ಕುರಿತಂತೆ ಸಿಎಂ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ, ಸಧ್ಯದಲ್ಲೇ ಈ ಸಂಬಂಧ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

 ಇದನ್ನೂ ಓದಿ: ಆನೆಗೊಂದಿ ಪ್ರವಾಸೋದ್ಯಮ ಹಿನ್ನಡೆಗೆ ಪ್ರಾಧಿಕಾರದ ಅವೈಜ್ಞಾನಿಕ ನಿಯಮಗಳೇ ಕಾರಣ:ಹಾಲಪ್ಪ ಆಚಾರ್ 

ರಾಜ್ಯದಲ್ಲಿ ಹೊಸ ಉಪನ್ಯಾಸಕ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಅರ್ಹತೆವುಳ್ಳ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ಇದೆ. ಮೆರಿಟ್ ಮತ್ತು ಮೀಸಲಾತಿ ಅನ್ವಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಕಾನೂನು ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ಉಳಿದ ಎಲ್ಲ ರೀತಿಯ ಶಿಕ್ಷಣವನ್ನು ಒಳಗೊಂಡು ರಾಷ್ಟ್ರಿಯ ಶಿಕ್ಷಣ ನೀತಿ-2020ನ್ನು ಜಾರಿಗೊಳಿಸಲಾಗುತ್ತಿದೆ. ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕ, ಹೊಸ ಹೊಸ ಕಾಲೇಜುಗಳ ಸ್ಥಾಪನೆಯಂತಹ ಹಲವಾರು ಪ್ರಕ್ರಿಯೆಗಳ ವೇಗಗೊಳಿಸುವ ಪ್ರಯತ್ನವನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ರಾಜ್ಯ ಸರ್ಕಾರವನ್ನು ಆರ್‌ಎಸ್‌ಎಸ್ ನಡೆಸುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಬಿಜೆಪಿಯಷ್ಟೇ ಅಲ್ಲ ಕಾಂಗ್ರೆಸ್, ಜೆಡಿಎಸ್‌ನ ಹಲವು ಶಾಸಕರು ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದಿದ್ದಾರೆ. ಸರ್ಕಾರದ ಆಡಳಿತ, ಪಾರದರ್ಶಕತೆ ವಿಷಯದ ಬಗ್ಗೆ ಅವರು ಮಾತನಾಡಲಿ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಪ್ರಚಾರಕ್ಕಾಗಿ ಹೊಸ ವಿಷಯ ಕೈಹಾಕುತ್ತಾರೆ. ಬರುವ ದಿನಗಳಲ್ಲಿ ಇದರಿಂದ ಪಕ್ಷಕ್ಕೆ ಇನ್ನಷ್ಟು ಮಾರಕ ಆಗಲಿದೆ. ಬಿಎಸ್‌ವೈ ನಮ್ಮ ಅಗ್ರಮಾನ್ಯ ನಾಯಕರು. ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೌರವ, ಅಭಿಮಾನ ಇದೆ. ಅವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಐಟಿ ದಾಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಶಾಸಕರಾದ ಶರಣು ಸಲಗಾರ, ರಹೀಮ್ ಖಾನ್, ಶಶೀಲ್ ನಮೋಶಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next