Advertisement

ಒಂದೂ ಅಧಿಕೃತ ರಿಕ್ಷಾ ನಿಲ್ದಾಣ ಇಲ್ಲಿಲ್ಲ

10:56 AM May 16, 2022 | Team Udayavani |

ಕುಂದಾಪುರ: ಯಾವುದೇ ನಗರಕ್ಕೆ ಹೋದರೂ ಅಲ್ಲಿ ರಿಕ್ಷಾ ನಿಲ್ದಾಣ ಇರುತ್ತದೆ. ಬಸ್‌ ತಂಗು ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಸರ್ಕಲ್‌ ಹೀಗೆ ಅಲ್ಲಲ್ಲಿ ರಿಕ್ಷಾಗಳು ಪ್ರಯಾಣಿಕರ ಸೇವೆಗೆ ಸಜ್ಜಾಗಿ ನಿಂತಿವೆ. ಅವುಗಳಿಗೆ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರ ಕೊಡುಗೆಯಿಂದ ಉತ್ತಮ ಮಾಡು ನಿರ್ಮಾಣವಾಗಿದೆ. ರಿಕ್ಷಾಗಳು ನೆರಳಿನಲ್ಲಿ ನಿಂತಿರುವ ಕಾರಣ ಎಂತಹ ಬೇಸಗೆಯಲ್ಲೇ ರಿಕ್ಷಾ ಹತ್ತಿ ಕುಳಿತರೂ ಸೀಟು ಬಿಸಿಯಾಗದು. ಆದರೆ ಕುಂದಾಪುರ ದಲ್ಲಿ ರಿಕ್ಷಾ ನಿಲ್ದಾಣಗಳೇ ಅಧಿಕೃತ ಆಗಿಲ್ಲ!

Advertisement

ಎಲ್ಲೆಲ್ಲಿ ತಂಗುದಾಣ?

ಪುರಸಭೆ ವ್ಯಾಪ್ತಿಯಲ್ಲಿ 15ರಷ್ಟು ರಿಕ್ಷಾ ತಂಗುದಾಣಗಳಿವೆ. ಶಾಸ್ತ್ರೀ ಸರ್ಕಲ್‌, ಶಿವಪ್ರಸಾದ್‌ ಹೊಟೇಲ್‌, ವಿನಯ ಆಸ್ಪತ್ರೆ, ಚಿನ್ಮಯ ಆಸ್ಪತ್ರೆ, ಹಳೆ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಸಂಗಮ್‌, ಚಿಕ್ಕನ್‌ ಸಾಲ್‌ ರಸ್ತೆ ಬದಿ, ಎಪಿಎಂಸಿ ಬಳಿ, ಕೆಎಸ್‌ಆರ್‌ಟಿಸಿ ಬಳಿ, ಬಸ್ರೂರು, ಮೂರು ಕೈ, ವಿನಾಯಕ ಥಿಯೇಟರ್‌, ಕೋಡಿ ಯಲ್ಲಿ ಮೂರು ಕಡೆ ರಿಕ್ಷಾಗಳ ನಿಲುಗಡೆ ಯಿದೆ. ಇದಿಷ್ಟಲ್ಲದೇ ಇನ್ನೊಂದತ್ತು ಕಡೆ ಮೂರು, ನಾಲ್ಕು ರಿಕ್ಷಾಗಳು ನಿಂತು ತಾತ್ಕಾಲಿಕ ತಂಗುದಾಣ ಇವೆ.

ಏನು ಸಮಸ್ಯೆ

ಅಧಿಕೃತ ನಿಲ್ದಾಣಗಳಿಲ್ಲದೇ ಇರು ವುದರಿಂದಾಗಿ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಅಥವಾ ದಾನಿಗಳಿಗೆ ರಿಕ್ಷಾ ತಂಗುದಾಣ ನಿರ್ಮಿಸಿ ಕೊಡಲು ಸಾಧ್ಯವಾಗುವುದಿಲ್ಲ. ತಂಗು ದಾಣಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸರಕಾರಿ ಇಲಾಖೆಗಳಲ್ಲಿ ಈಡೇರಿಸಿ ಕೊಳ್ಳಲು, ಪರಿಹರಿಸಿಕೊಳ್ಳಲು ಸಾಧ್ಯ ವಾಗುವುದಿಲ್ಲ. ಕಟ್ಟಡ ನಿರ್ಮಾಣ ಅಥವಾ ಯೋಜನೆ ಬಂದಾಗ ರಿಕ್ಷಾ ನಿಲ್ದಾಣ ಸ್ಥಳಾಂತರಿಸಬೇಕಾದರೆ ಬದಲಿ ಜಾಗ ತೋರಿಸಬೇಕಿಲ್ಲ. ಮಾನವೀಯ ರೀತಿಯ ಪರಿಹಾರ ಸಾಧ್ಯ ವಿನಾ ದಾಖಲೆಗಳ ಮೂಲಕ ಅಸಾಧ್ಯವಾಗಿದೆ.

Advertisement

ದಂಡ

ವಿನಾಯಕ ಥಿಯೇಟರ್‌ ಬಳಿಯ ರಿಕ್ಷಾ ನಿಲ್ದಾಣ ವಿವಾದ ಕೆಲ ಸಮಯಗಳಿಂದ ಗರಿಗೆದರಿದ್ದು ನ್ಯಾಯಾಲಯದ ಮೆಟ್ಟಿಲೇರಿ ತೀರ್ಪು ಪಡೆದಿದೆ. ಆದೇಶದ ಪ್ರಕಾರ ಪುರಸಭೆ ಅನಧಿಕೃತ ನಿಲ್ದಾಣ ಎಂದು ಬೋರ್ಡು ತಗುಲಿಸಿದೆ. ಸಾರಿಗೆ ಇಲಾಖೆಯವರು ಆಗಾಗ ಬಂದು 1ರಿಂದ 10 ಸಾವಿರ ರೂ.ವರೆಗೆ ಬಡ ರಿಕ್ಷಾ ಚಾಲಕರ ಮೇಲೆ ದಂಡ ವಿಧಿಸುವ ನೋಟಿಸ್‌ ನೀಡಿದ್ದಾರೆ. ಮಾಸಿಕ ಕಂತು ಪಾವತಿ, ಡೀಸೆಲ್‌, ಪೆಟ್ರೋಲ್‌, ಅನಿಲ ದರ ದುಬಾರಿಯಾದ ಬೆನ್ನಲ್ಲೇ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ರಿಕ್ಷಾಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಚಾಲಕ ರಿಗೆ ಗಾಯದ ಮೇಲೆ ಬರೆ ಎಳೆದಂತೆ ದಂಡ ಪ್ರಹಾರ ಬೀಳುತ್ತಿದೆ. ಕಷ್ಟಪಟ್ಟು ಬದುಕುತ್ತಿರುವ ರಿಕ್ಷಾ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ ಎನ್ನುತ್ತಾರೆ ರಿಕ್ಷಾ ಚಾಲಕ ಮಹೇಶ್‌ ಶೆಣೈ.

ಯಾಕಾಗಿಲ್ಲ

ಮೂರು ನಾಲ್ಕು ದಶಕಗಳಿಂದಲೂ ರಿಕ್ಷಾಗಳು ನಿಲುಗಡೆಯಾಗುತ್ತಿವೆ. ಪುರಸಭೆ ಯಾಗಲೀ, ಸಾರಿಗೆ ನಿಯಂತ್ರಣ ಪ್ರಾಧಿಕಾರವಾಗಲೀ ಈವರೆಗೆ ಇಲ್ಲಿ ಅಧಿಕೃತ ರಿಕ್ಷಾ ನಿಲುಗಡೆಗೆ ವ್ಯವಸ್ಥೆಯಾಗ ಬೇಕೆಂದು ಮನಸ್ಸು ಮಾಡಿಲ್ಲ. ವರ್ಷಕ್ಕೆ ನೂರಾರು ರಿಕ್ಷಾಗಳಿಗೆ ಅನುಮತಿ ನೀಡುವ ಪ್ರಾಧಿಕಾರ ಅವುಗಳ ನಿಲುಗಡೆ ಕುರಿತು ಗಮನ ಹರಿಸುವುದಿಲ್ಲ. ಬಸ್‌ ಗಳಿಗೆ ಅನುಮತಿ ನೀಡುವಾಗ ಸುವ್ಯವಸ್ಥಿತ ಕ್ರಮದಲ್ಲಿ ಮಾರ್ಗಸೂಚಿ, ಸಮಯ, ನಿಲ್ದಾಣಗಳು ನಿಗದಿಯಾಗುತ್ತವೆ. ರಿಕ್ಷಾ ಗಳಿಗೂ ಬ್ಯಾಡ್ಜ್, ಮೀಟರ್‌, ಯೂನಿಫಾರಂ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಚಾಲಕ- ವಾಹನದ ಮಾಹಿತಿ ಫ‌ಲಕ, ಸಹಾಯವಾಣಿ ಮಾಹಿತಿ ಕಡ್ಡಾಯ ಮಾಡಿದಂತೆ ನಿಲುಗಡೆಗೆ ಸೂಕ್ತ ಅಧಿಕೃತ ವ್ಯವಸ್ಥೆಯಾಗಬೇಕಿದೆ.

ಈ ಹಿಂದೆ ಗುಣರತ್ನ ಹಾಗೂ ನರಸಿಂಹ ಅವರು ಅಧ್ಯಕ್ಷರಾಗಿದ್ದ ಸಮಯ ರಿಕ್ಷಾ ನಿಲ್ದಾಣ ಕುರಿತು ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಈವರೆಗೆ ಯಾವುದೇ ಪ್ರತಿಸ್ಪಂದನ ಬಂದಿಲ್ಲ. ಈ ಬಾರಿ ಆಡಳಿತ ಮಂಡಳಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎನ್ನುತ್ತಾರೆ ಪುರಸಭೆ ಸದಸ್ಯ ಸಂತೋಷ್‌ ಕುಮಾರ್‌ ಶೆಟ್ಟಿ.

 ನಿಯಮ ಮಾಡಲಿ

ಒಂದು ಪ್ರದೇಶದ ರಿಕ್ಷಾಗಳು ಇನ್ನೊಂದು ಪ್ರದೇಶದಲ್ಲಿ ನಿಲುಗಡೆ ಮಾಡುವಂತಿಲ್ಲ, ಗ್ರಾಮಾಂತರ ರಿಕ್ಷಾಗಳು ನಗರದಲ್ಲಿ ಬಾಡಿಗೆ ಮಾಡುವಂತಿಲ್ಲ ಎಂಬೆಲ್ಲ ನಿಯಮಗಳಿದ್ದಂತೆ ನಿಲ್ದಾಣಕ್ಕೂ ಆಗಬೇಕಿದೆ. ಕಾನೂನಿನಲ್ಲಿ ಇಲ್ಲ ಎಂದಾದರೆ ಸೇರಿಸುವ ಕೆಲಸ ಆಗಬೇಕು. ಏಕೆಂದರೆ ಇ-ರಿಕ್ಷಾಗಳನ್ನು ಹಳೆ ಕಾಯ್ದೆಗೆ ಸೇರ್ಪಡೆ ಮಾಡಲಾಗಿದೆ. ಅದೇ ರೀತಿ ನಿಲ್ದಾಣ ವ್ಯವಸ್ಥೆಯೂ ಸ್ಥಳೀಯಾಡಳಿತ ಹಾಗೂ ಪ್ರಾಧಿಕಾರದ ಮೂಲಕ ಆದರೆ ಸಂಭಾವ್ಯ ಸಂಘರ್ಷಗಳು ಹಾಗೂ ಸಮಸ್ಯೆಗಳಿಗೆ ತೆರೆ ಎಳೆಯಬಹುದು.

ಸೂಕ್ತ ನಿರ್ಣಯ ಪುರಸಭೆಯಲ್ಲಿ ಅಧಿಕೃತ ರಿಕ್ಷಾ ನಿಲ್ದಾಣಗಳಿಲ್ಲ. ಈ ಕುರಿತು ಪುರಸಭೆ ವಿಶೇಷ ಸಭೆಯಲ್ಲಿ ಆರ್‌ಟಿಒ ಜತೆಗೂಡಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next