Advertisement

ಪುತ್ತೂರು ತಾ|ನಲ್ಲಿ  ಕೆರೆ ಒತ್ತುವರಿ ಇಲ್ಲವೇ ಇಲ್ಲ: ಕಂದಾಯ ಇಲಾಖೆ

03:45 AM Jun 30, 2017 | Team Udayavani |

ಪುತ್ತೂರು: ಪುತ್ತೂರು ಮತ್ತು ಕಡಬ ಕಂದಾಯ ಇಲಾಖೆ, ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆಡಳಿತ, ವಿಪಕ್ಷದ ಸದಸ್ಯರು ಕಂದಾಯ ಇಲಾಖೆಯ ವಿರುದ್ಧ ಗರಂ ಆದ ಘಟನೆ ತಾಲೂಕು ಸಾಮಾನ್ಯ ಸಭೆಯಲ್ಲಿ  ನಡೆಯಿತು.

Advertisement

ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಭವಾನಿ ಚಿದಾನಂದ್‌ ವಹಿಸಿದ್ದರು. ತಾಲೂಕಿನಲ್ಲಿ ಕೆರೆ ಒತ್ತುವರಿ ಬಗ್ಗೆ ಕಂದಾಯ ಇಲಾಖೆಯ ಪರವಾಗಿ ಪಾಲನ ವರದಿ ಮಂಡಿಸಿದ ಉಪ ತಹಶೀಲ್ದಾರ್‌ ಶ್ರೀಧರ್‌, ತಾಲೂಕಿನಲ್ಲಿ ಕೆರೆ ಒತ್ತುವರಿ ಯಾದ ಪ್ರಕರಣ ಇಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕುರಿಯ ಗ್ರಾಮದ ಕೆರೆಯಲ್ಲಿ ಒಂದೂವರೆ ಎಕ್ರೆ ಒತ್ತುವರಿ ಯಾಗಿದೆ. ಇದು ಒತ್ತುವರಿ ಪ್ರಕರಣ ಅಲ್ಲವೇ ಎಂದರು. ಸದಸ್ಯೆ ಉಷಾ ಅಂಚನ್‌ ನೆಲ್ಯಾಡಿಯಲ್ಲಿ ಕೆರೆ ಜಾಗದಲ್ಲಿ ಅಂಗನವಾಡಿ ಕಟ್ಟಲಾಗಿದೆ. ಇಂತಹ ಹಲವು ಪ್ರಕರಣವಿದ್ದರೂ ಒತ್ತುವರಿ ಇಲ್ಲ, ಅಂದರೆ ಏನರ್ಥ ಎಂದರು.

ಸರ್ವೆ ಮಾಡದೇ ವರದಿ?
ಕೆರೆ ಒತ್ತುವರಿ ವಿಷಯದ ಚರ್ಚೆ ಸಂದರ್ಭ ಸಭೆಗೆ ಆಗಮಿಸಿದ ಭೂ ಮಾಪನ ಇಲಾಖಾಧಿಕಾರಿ ಬಳಿ ಈ ವಿಷಯ ಪ್ರಸ್ತಾವಿಸಲಾಯಿತು. ಅಧಿಕಾರಿ ಒತ್ತುವರಿ ಬಗ್ಗೆ ಸರ್ವೆ ಮಾಡಿಲ್ಲ ಎಂಬ ಮಾಹಿತಿ ನೀಡಿದರು. ಒತ್ತುವರಿ ಆಗಿದ್ದರೆ ನಕ್ಷೆ ನೀಡಿ ಎಂದು ಸದಸ್ಯರನ್ನೇ ಅಧಿಕಾರಿ ಪ್ರಶ್ನಿಸಿದ ಘಟನೆಯು ನಡೆಯಿತು.

ಸದಸ್ಯರಾದ ಉಷಾ ಅಂಚನ್‌, ಶಿವರಂಜನ್‌, ಫೌಝಿಯಾ, ಸಾಜ ರಾಧಾಕೃಷ್ಣ ಆಳ್ವ, ಪರಮೇಶ್ವರ ಮೊದಲಾ ದವರು, ಸರ್ವೆಯೇ ಆಗದೇ ಇರುವಾಗ ಸದಸ್ಯರು ನಕ್ಷೆ ಕೊಡುವುದು ಹೇಗೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. ಸರ್ವೆ ನಡೆಸದೆ, ಒತ್ತುವರಿ ಪ್ರಕರಣ ಇರುವುದಿಲ್ಲ ಎಂದು ಕಂದಾಯ ಇಲಾಖೆ ವರದಿ ನೀಡಿರುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಇಬ್ಬರೂ ಅಧಿಕಾರಿಗಳು ನಿರುತ್ತರಾದರು.

Advertisement

ಈ ಸಂದರ್ಭ ಆಡಳಿತ ಮತ್ತು ವಿಪಕ್ಷದ ಸದಸ್ಯರು ಕಂದಾಯ ಇಲಾಖೆ ವಿರುದ್ಧ ಹರಿಹಾಯ್ದರು. ಸುಳ್ಳು ಮಾಹಿತಿ ನೀಡಿ ಸಭೆಯ ದಾರಿ ತಪ್ಪಿಸುತ್ತಿದ್ದೀರಿ. ಸಭೆಗೊಂದು ಗೌರವ ಇದೆ. ಅಧ್ಯಕ್ಷರು ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಭವಾನಿ ಚಿದಾನಂದ, ಕಾರ್ಯನಿರ್ವಹಣಾಧಿಕಾರಿ ಜಗದೀಶ್‌, ಕಂದಾಯ ಇಲಾಖೆ, ಸರ್ವೆ ಇಲಾಖೆ ಕೆರೆ ಒತ್ತುವರಿ ಬಗ್ಗೆ ತನಿಖೆ ನಡೆಸಿ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ತಾ.ಪಂ. ಸದಸ್ಯರ ಆಗ್ರಹದಂತೆ, ಮುಂದೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ಒಪ್ಪಿಕೊಂಡ ಘಟನೆ ನಡೆಯಿತು.

ಪಾಲನ ವರದಿ ವಿಳಂಬ
ತಾ.ಪಂ. ಅಧ್ಯಕ್ಷೆಯ ಸೂಚನೆಯಿದ್ದರೂ ತಾ.ಪಂ ಸಾಮಾನ್ಯ ಸಭೆಯ ಪಾಲನ ವರದಿಯನ್ನು ಇಲಾಖೆಗಳು ಸಕಾಲಕ್ಕೆ ನೀಡದಿರುವ ಬಗ್ಗೆ ಚರ್ಚೆ ನಡೆಯಿತು. ಸಾಮಾನ್ಯ ಸಭೆಯ ವರದಿಯನ್ನು 20 ದಿವಸಕ್ಕೆ ಮೊದಲು, ಕೆಡಿಪಿ ಸಭೆಯ ವರದಿ 10 ದಿವಸಕ್ಕೆ ಮೊದಲು ನೀಡುವಂತೆ ನಿರ್ಣಯಿಸಲಾಯಿತು. ತಪ್ಪಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಮಾನ್ಯ ಸಭೆ ನಿರ್ಧರಿಸಿತ್ತು.

ಜನಪ್ರತಿನಿಧಿಗಳಿಗೆ ಗೌರವ ಇಲ್ಲ!
ಪಡುಬೆಟ್ಟು ಶಾಲಾ ಜಾಗ ಮಂಜೂರಾತಿ ಬಗೆಗಿನ ಕಡತ ಸಹಾಯಕ ಕಮಿಷನರ್‌ ಕಚೇರಿಯಲ್ಲಿ ಇದೆ ಎಂಬ ಕಂದಾಯ ಇಲಾಖಾಧಿಕಾರಿ ಉತ್ತರಕ್ಕೆ ಕೆಂಡಮಂಡಲಾದ ಉಷಾ ಅಂಚನ್‌, ಪ್ರಸ್ತಾವಕ್ಕೆ ಐದು ವರ್ಷಗಳು ಕಳೆದಿವೆ. ಪ್ರತಿ ಸಭೆಯಲ್ಲೂ ಇದೆ ಉತ್ತರ. ಅಂದರೆ ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲವೇ? ಆಗುವುದಿಲ್ಲ ಎಂದಾದರೆ ಕಡತ ಮುಚ್ಚಿಬಿಡಿ. ನಾನು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಂದಾಯ ಇಲಾಖೆ ರೆಕಾರ್ಡ್‌ ತಯಾರಿಸಿ, ಎ.ಸಿ. ಕಚೇರಿಗೆ ಕಳುಹಿಸಿದೆ. ನಮ್ಮ ವ್ಯಾಪ್ತಿಯೊಳಗಿನ ಕೆಲಸ ಮಾಡಿದ್ದೇವೆ ಎಂದು ಉಪ ತಹಶೀಲ್ದಾರ್‌ ಉತ್ತರಿಸಿದರು. ಉಷಾ ಅಂಚನ್‌ ಮಾತನಾಡಿ, ಈ ಉತ್ತರದ ಅಗತ್ಯ ಇಲ್ಲ. ಈ ಸಾಮಾನ್ಯ ಸಭೆಯಲ್ಲಿ ಯಾವ ವಿಷಯ ಪ್ರಸ್ತಾಪಿಸಿದರೂ ಅದಕ್ಕೆ ಸ್ಪಂದಿಸುವುದಿಲ್ಲ. ಇಂತಹ ಸಭೆ ಆಯೋಜಿಸಿ ಏನು ಪ್ರಯೋಜನ? ಅಧ್ಯಕ್ಷರೇ ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಹೇಳಿದರು.

ಕಂದಾಯ ಇಲಾಖೆಯಲ್ಲಿ ಕೆಲಸ ವಿಳಂಬದ ಬಗ್ಗೆ ವಿಷಯ ಪ್ರಸ್ತಾಪಿಸಿದ ಸಾಜ ರಾಧಾಕೃಷ್ಣ ಆಳ್ವ ಆರ್ಯಾಪು ಗ್ರಾಮದಲ್ಲಿ 94ಸಿ ಮತ್ತು 94ಸಿಸಿ ಸಮಸ್ಯೆಯ ಕುರಿತು ನೂರಾರು ಬಾರಿ ತಿಳಿಸಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಅನಂತರ ಗಡಿ ಗುರುತು ನಡೆಯುತ್ತಿದೆ. ಕಂದಾಯ ಇಲಾಖೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಶಿವರಂಜನ್‌ ಮಾತನಾಡಿ, ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ವಿಷಯ ನಿರ್ವಾಹಕರೊಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇಂತಹ ಹಲವು ಉದಾಹರಣೆಗಳು ಇವೆ. ಮಧ್ಯವರ್ತಿಗಳು ಹೋದರೆ ತತ್‌ಕ್ಷಣ ಗೌರವ ಸಿಗುತ್ತದೆ. ಜನಪ್ರತಿನಿಧಿಗಳಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಆಪಾದಿಸಿದರು. ಅನಂತರ ಕೆಲವು ಕಾಲ ಇದೇ ವಿಚಾರವಾಗಿ ಸದಸ್ಯರ ಮತ್ತು ಇಲಾಖಾಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.

ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಜನಪ್ರತಿನಿಧಿಗಳ ಪ್ರಸ್ತಾವಕ್ಕೆ ಹದಿನೈದು ದಿವಸದೊಳಗೆ ಉತ್ತರ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ಸಂಯೋಜಕ ಗಣಪತಿ ಬಿ., ಜಿ.ಪಂ. ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next