Advertisement

ಕೃಷ್ಣಾ ನದಿ ಪ್ರವಾಹ ಭೀತಿ ಇಲ್ಲ

11:00 AM Aug 11, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಹರಿವಿನ ಪ್ರಮಾಣ ತಗ್ಗಿದೆ. ಕೃಷ್ಣಾ ನದಿಗೆ ಮಹಾರಾಷ್ಟ್ರ ರಾಜ್ಯದ ಜಲಾಶಯಗಳಿಂದ ಹರಿಬಿಡುವ ನೀರಿನ ಪ್ರಮಾಣದ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲಿನ ಜಲಾಶಯಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನದಿಯಲ್ಲಿ ನೀರಿನ ಹರಿವು ನಿರ್ವಹಣೆ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಕೃಷ್ಣಾ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಹೇಳಿದರು.

Advertisement

ಮಾಧ್ಯಮದವರಿಗೆ ಜಿಲ್ಲೆಯ ನದಿ ಪ್ರವಾಹ ಪರಿಸ್ಥಿತಿ ಕುರಿತು ವಿವರ ನೀಡಿದ ಅವರು, ಕೃಷ್ಣಾ ನದಿಗೆ ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯದ ಒಳ ಹರಿವು ಇರುವಷ್ಟೇ ನೀರನ್ನು ನದಿ ಮೂಲಕ ಸಮಪ್ರಮಾಣದಲ್ಲಿ ನೀರು ಹೊರಬಿಡುವ ಮೂಲಕ ಒಳ-ಹೊರ ಹರಿವು ಸರಿದೂಗಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಇಲ್ಲ ಎಂದರು.

ಕೃಷ್ಣಾ ನದಿ ಮೂಲಕ ನಮ್ಮ ಜಿಲ್ಲೆಯ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಷ್ಟೇ ನೀರನ್ನು ಜಲಾಶಯಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಹರಿವು ಸಮಾನ ರೀತಿಯಲ್ಲಿದ್ದು ಯಾವುದೇ ರೀತಿಯಿಂದ ಭಯಪಡುವ ಅವಶ್ಯಕತೆ ಇಲ್ಲ. ಪ್ರವಾಹದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಒಳ ಹರಿವು ಹಾಗೂ ಸಂಗ್ರಹ ಕಡಿಮೆ ಇದೆ ಎಂದು ತಿಳಿಸಿದರು.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಹರಿಯುತ್ತಿರುವ ನೀರು ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕುರಿತು ನದಿ ತೀರದಲ್ಲಿರುವ ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಮುದ್ದೇಬಿಹಾಳ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ. ಪ್ರವಾಹ ಭೀತಿ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವ ಕೆಲಸ ನಡೆಸಿದ್ದೇವೆ. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ಎತ್ತರದ ಪ್ರದೇಶಗಳಲ್ಲಿ ಕೇಂದ್ರಗಳನ್ನು ತೆರೆಯಲು ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ಮೂಲಸೌಲಭ್ಯಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದೇವೆ ಎಂದರು. ಒಂದೊಮ್ಮೆ ನದಿ ಪ್ರವಾಹದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಎಲ್ಲೆಡೆ ಬೋಟ್‌ಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುತ್ತದೆ. ವಿಸರ್ಜನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಹೊಂಡಗಳ ನಿರ್ಮಾಣದ ವ್ಯವಸ್ಥೆ ಮಾಡಿಕೊಡುತ್ತೇವೆ. ಪಿ.ಸುನಿಲಕುಮಾರ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next