Advertisement

ಮುಂಬಯಿ ಆಕಾಶವಾಣಿಯಲ್ಲಿ ಕನ್ನಡಕ್ಕಿಲ್ಲ ಜಾಗ: ಕನ್ನಡಿಗರ ಆಕ್ರೋಶ

06:56 PM Nov 04, 2020 | Suhan S |

 

Advertisement

ಮುಂಬಯಿ, ನ. 3: ಸುಮಾರು ಏಳು ದಶಕ ಗಳಿಗಿಂತಲೂ ಹೆಚ್ಚು ಕಾಲದಿಂದ ಕನ್ನಡ ಕಾರ್ಯ ಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಮುಂಬಯಿ ಆಕಾಶವಾಣಿ ಸಂವಾದಿತ ವಾಹಿನಿಯಲ್ಲಿ ಏಕಾಏಕಿ ಕನ್ನಡ ಕಾರ್ಯಕ್ರಮಗಳನ್ನು  ಸ್ಥಗಿತಗೊಳಿಸಿದ್ದು, ಮುಂಬಯಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಮಹಾಮಾರಿಯಿಂದ ಮಾರ್ಚ್‌ ನಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ನಿಮಿತ್ತ ಸಂವಾದಿತ ಸ್ಟೇಷನ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರದಿಂದ ಎಲ್ಲ ಸಂವಾದಿತ ಸ್ಟೇಷನ್‌ಗಳು ಮತ್ತೆ ಪುನರಾರಂಭಗೊಂಡಿವೆ. ಆದರೆ ಕನ್ನಡ ಮತ್ತು ಸಿಂಧಿ ಭಾಷಾ ಕಾರ್ಯಕ್ರಮಗಳನ್ನು ಕೈಬಿಟ್ಟು ಉಳಿದ ಭಾಷೆಗಳನ್ನು ಪ್ರಾರಂಭಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಾರದ ಅರ್ಧ ಗಂಟೆಗೂ ಕತ್ತರಿ :  ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡ ಮುಂಬಯಿ ಆಕಾಶವಾಣಿಗೆ ತನ್ನದೇ ಆದ ಇತಿಹಾಸವಿದೆ. ಅದರಲ್ಲೂ ಏಳು ದಶಕಗಳಿಗಿಂತಲೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಕನ್ನಡ ರೇಡಿಯೋ ಸ್ಟೇಷನ್‌ನಲ್ಲಿ  ಒಂದು ಕಾಲದಲ್ಲಿ ದಿನಂಪ್ರತಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಅನಂತರದ ದಿನಗಳಲ್ಲಿ ವಾರಕ್ಕೆ ಮೂರು ಸಲ, ಬಳಿಕ ವಾರಕ್ಕೆ ಎರಡು ಬಾರಿ, ಕ್ರಮೇಣ ಒಂದು ಗಂಟೆಗೆ ಇಳಿದರೆ, ಕೆಲವು ವರ್ಷಗಳಿಂದ ವಾರಕ್ಕೆ ಅರ್ಧ ಗಂಟೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಪ್ರಸ್ತುತ ಅದನ್ನೂ ಸ್ಥಗಿತಗೊಳಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಿಗ ಅಧಿಕಾರಿಗಳು ಇಲ್ಲವಂತೆ…! :  ಕಾರ್ಯಕ್ರಮ ವಿಭಾಗದಲ್ಲಿ ಕನ್ನಡ ಭಾಷೆಯ ಅರಿವಿರುವ ಅಧಿಕಾರಿಗಳು ಇಲ್ಲದ ಕಾರಣ ಕನ್ನಡ ರೇಡಿಯೋ ಸ್ಟೇಷನ್‌ ಮುಚ್ಚಲಾಗಿದೆ ಎಂದು ಮುಂಬಯಿ ಆಕಾಶವಾಣಿ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಈ ಹೇಳಿಕೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಯಾಕೆಂದರೆ ಈ ಹಿಂದೆ ಕನ್ನಡ ಬಾರದ ಅಧಿಕಾರಿಗಳು ಈ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ನಿದರ್ಶನಗಳು ಹಲವಾರಿವೆ. ಮಾಲತಿ ಮಾನೆ, ಪ್ರಜ್ಞಾ ದೇವಸ್ಥಳ, ವೀಣಾ ರಾಯ್‌, ಅಶ್ವಥಿ, ಆ್ಯನ್‌ ಫೆರ್ನಾಂಡಿಸ್‌, ಮಹೇಶ್‌ ಕೇಳುಸ್ಕರ್‌, ರೆಜಿನಾ ಜೇಕಬ್‌, ವೀಣಾ ರಾಯ್‌ ಸಿಂಘಾನಿ, ಕಿಶೋರ್‌ ಕುಲಕರ್ಣಿ, ಲಿಯಾಕತ್‌ ಅಲಿ ಸೈಯದ್‌, ಕಲ್ಪನಾ ಶೆಟ್ಟಿ, ಸಂಜಯ್‌ ಪುನಾಳೇಕರ್‌ ಮೊದಲಾದವರು ಯಾರೂ ಕನ್ನಡಿಗರಲ್ಲ ಎಂಬುವುದು ಉಲ್ಲೇಖನೀಯ.

ದಾಖಲೆಗಳ ಸಂಗ್ರಹ: ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಮುಂಬಯಿ ತುಳು, ಕನ್ನಡಿಗರ ಅಸ್ಮಿತೆಯ ಕುರುಹಾಗಿದ್ದ ಮುಂಬಯಿ ಆಕಾಶವಾಣಿ ಯಲ್ಲಿ ತುಳು, ಕನ್ನಡಿಗರ ಇತಿಹಾಸವನ್ನು ಸಾರುವ ಅರ್ಕೈವಲ್‌ ದಾಖಲೆಗಳ ಸಂಗ್ರಹವೂ ಇದೆ ಎನ್ನಲಾಗಿದೆ. ರಂಗಕರ್ಮಿ ಸದಾನಂದ ಸುವರ್ಣ, ಡಾ| ರಂಗನಾಥ ಭಾರದ್ವಾಜ್‌, ಸಾಹಿತಿ ವ್ಯಾಸರಾವ್‌ ನಿಂಜೂರು, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಮೊದಲಾದವರ ಜೀವನ ಸಾಧನೆಗಳನ್ನು ಒಳಗೊಂಡಿರುವ ದಾಖಲೆಗಳ ಸಂಗ್ರಹವನ್ನು ದಶಕದ ಹಿಂದೆ ಮಾಡಲಾಗಿದೆ.

Advertisement

ಕನ್ನಡ ಕಟ್ಟಿದ ಸಾಹಿತಿ ಬಿ. ಎ. ಸನದಿ :  ಸುಮಾರು 80-90ರ ದಶಕದಲ್ಲಿ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ರೇಡಿಯೋ ಸ್ಟೇಷನ್‌ ಇದೇ ಎಂಬುವುದನ್ನು ತೋರಿಸಿಕೊಟ್ಟವರು ಕವಿ, ಸಾಹಿತಿ ಬಿ. ಎ. ಸನದಿ. ಮುಂಬಯಿ ಆಕಾಶವಾಣಿ ವಿಭಾಗದಲ್ಲಿ ಉನ್ನತ ಹುದ್ಧೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕನ್ನಡಿಗ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದರು. ಆ ದಿನಗಳಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ನಾಟಕ, ಸಂಗೀತ, ಸಂದರ್ಶನ, ಚರ್ಚೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಭಿತ್ತರ ಗೊಂಡ ಪರಿಣಾಮ ಇಂದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಡಬ್ಬಿಂಗ್‌ ಸಹಿತ ಇನ್ನಿತರ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಇದಕ್ಕೂ ಮೊದಲು ಕನ್ನಡಿಗರಾದ ಕುಂದರೇಗೆ, ಆಶಾನಾಥ್‌ ಮೊದಲಾದವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು :  ವಾರದಲ್ಲಿ ಅರ್ಧ ಗಂಟೆಗಳ ಕಾಲ ಕನ್ನಡದ ಕಲರವವನ್ನು ಕಿವಿತುಂಬಿಸಿಕೊಳ್ಳುತ್ತಿದ್ದ ತುಳು, ಕನ್ನಡಿಗ ಶ್ರೋತೃಗಳಿಗೆ ಪ್ರಸ್ತುತ ಮುಂಬಯಿ ಆಕಾಶವಾಣಿಯ ಮಲತಾಯಿ ಧೋರಣೆಯಿಂದ ಅನ್ಯಾಯವಾದಂತಾಗಿದೆ. ಶ್ರೋತೃಗಳ ಕೊರತೆ ಯಿಂದ ಕನ್ನಡ ವಿಭಾಗವು ಮುಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾರಣ ಏನೇ ಇರಲಿ, ಮುಂಬಯಿ ತುಳು, ಕನ್ನಡಿಗರ ಇತಿಹಾಸವನ್ನು ಸಾರುತ್ತಿದ್ದ ಆಕಾಶವಾಣಿ ಸಂವಾದಿತ ವಾಹಿನಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇಲ್ಲಿನ  ಕನ್ನಡಪರ, ಜಾತೀಯ ಸಂಘ-ಸಂಸ್ಥೆಗಳು ಸಹಿತ ಕನ್ನಡಿಗರಿಗಿದೆ. ಆದ್ದರಿಂದ ಅರ್ಧ ಗಂಟೆ ಬಿತ್ತರಗೊಳ್ಳುತ್ತಿದ್ದ ಕನ್ನಡ ಕಾರ್ಯಕ್ರಮಗಳನ್ನು ಒಂದು ಗಂಟೆಗಳಿಗೆ ಏರಿಸಲು ಕನ್ನಡ ಸಂಘ, ಸಂಸ್ಥೆಗಳು, ಕನ್ನಡಿಗರು ಪತ್ರ ಬರೆದು,  ಫೋನ್‌ ಮುಖಾಂತರ ಮನವಿ ಮಾಡುವ ಅಭಿಯಾನ ಪ್ರಾರಂಭಿಸಬೇಕಾಗಿದೆ.

ಕನ್ನಡ ಕಾರ್ಯಕ್ರಮ ಪ್ರಸಾರಕ್ಕೆ ಆಗ್ರಹಿಸಿ  :  ಕನ್ನಡಿಗರು ಕನ್ನಡ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುವಂತೆ ಆಕಾಶವಾಣಿಯ ಡ್ನೂಟಿ ರೂಂನ  22021477  ನಂಬರ್‌ಗೆ ಕರೆ ಮಾಡಿ ಆಗ್ರಹಿಸಬಹುದು ಅಥವಾ  Sta on Director, Akashavani Mumbai Sta on, Kannada Department, Backbay Reclama on, Post Box Number 110034, Mumbai -400020 ಈ ವಿಳಾಸಕ್ಕೆ ಮನವಿ ಮಾಡಬಹುದು.

ಕನ್ನಡ ಕಾರ್ಯಕ್ರಮಗಳು ಮತ್ತೆ ಪ್ರಾರಂಭಿಸುವಂತಾಗಲಿ :  2003ರಲ್ಲಿ ನಾನು ಕರ್ನಾಟಕ ಸಂಘದಿಂದ ಕಾರ್ಯಕ್ರಮ ನೀಡಲು ಹೋಗಿದ್ದೆ. ಆಗ ಕಾರ್ಯಕ್ರಮ ವಿಭಾಗದ ಅಧಿಕಾರಿಯೊಬ್ಬರು ರೆಕಾರ್ಡ್‌ ಮಾಡುತ್ತಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ.  ಕನ್ನಡದ ಮೇಲಿನ ಅಭಿಮಾನದಿಂದ ಅಲ್ಲಿ ಉದ್ಘೋಷಕಿ ಹುದ್ದೆ ಪಡೆದು ಒಂದೂವರೆ ದಶಕಕ್ಕಿಂತಲೂ ಹೆಚ್ಚು  ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಅವಧಿಯಲ್ಲೇ ಸುಮಾರು  300ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ನೀಡಿದ್ದಾರೆ. ಅರ್ಧಗಂಟೆಯಲ್ಲಿ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವೇ ಇಲ್ಲ. ಈಗ ಅದನ್ನೂ ನಿಲ್ಲಿಸಿದ್ದಾರೆ. ಇದರ ಬಗ್ಗೆ ಕನ್ನಡಪರ ಸಂಘಟನೆಗಳು ಎಚ್ಚೆತ್ತು ಆಕಾಶವಾಣಿ ಸಂವಾದಿತ ವಾಹಿನಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಮತ್ತೆ ಪ್ರಾರಂಭಿಸುವಂತೆ ಮನವಿ ಮಾಡಬೇಕು.ಸುಶೀಲಾ ಎಸ್‌. ದೇವಾಡಿಗ, ಉದ್ಘೋಷಕಿ, ಆಕಾಶವಾಣಿ ಕನ್ನಡ ವಿಭಾಗ

ಮರು ಆರಂಭಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸೋಣ : ಮುಂಬಯಿಯಲ್ಲಿ ಕನ್ನಡದ ಜೀವಂತಿಕೆಗೆ ಆಕಾಶವಾಣಿಯ ಕೊಡುಗೆಯೂ ಬಹಳ ಮುಖ್ಯವಾಗಿದೆ. ಅನೇಕ ದಶಕಗಳಿಂದ ಮುಂಬಯಿಯ ಬಹುತೇಕ  ಲೇಖಕರಿಗೆ ವೇದಿಕೆಯನ್ನು ಕಲ್ಪಿಸಿದ ತಾಣ ಇದಾಗಿದೆ. ಕನ್ನಡ ಸಾರಸ್ವತ ಲೋಕದ  ಘಟಾನುಘಟಿ ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು  ಮುಂಬಯಿ ಆಕಾಶವಾಣಿಯ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ ದಾಖಲೆಯಿದೆ. ಪ್ರಸ್ತುತ ಆಕಾಶವಾಣಿ ಏಕಾಏಕಿ ಕನ್ನಡ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮರು ಆರಂಭಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸೋಣ ಡಾ| ಭರತ್‌ ಕುಮಾರ್‌ ಪೊಲಿಪು, ರಂಗಕರ್ಮಿ

ಮುಂಬಯಿ ಕನ್ನಡಿಗರಿಗೆ ಆಘಾತ :  ದೇಶದ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಭಾರತ ಸರಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಿ ಗೌರವಿಸಿದೆ. ಮುಂಬಯಿ ಮಹಾನಗರದಲ್ಲಿ 20 ಲಕ್ಷ ಕನ್ನಡಿಗರು ನೆಲೆಸಿದ್ದು, ಕನ್ನಡದ ಪ್ರಸಾರ, ಪ್ರಚಾರದಲ್ಲಿ ಆಕಾಶವಾಣಿ ಮಹತ್ತರ ಪಾತ್ರ ವಹಿಸುತ್ತಾ ಬಂದಿದೆ. ಇದೀಗ ಮುಂಬಯಿ ಆಕಾಶವಾಣಿ ಸಂವಾದಿತ ವಾಹಿನಿಯಲ್ಲಿ ಕನ್ನಡ ಕಾರ್ಯಕ್ರಮವನ್ನು ಹಠಾತ್‌ ಆಗಿ ನಿಲ್ಲಿಸಿರುವುದು ಮುಂಬಯಿ ಕನ್ನಡಿಗರಿಗೆ ಆಘಾತ ಉಂಟು ಮಾಡಿದೆ.  ತತ್‌ಕ್ಷಣ ಸಂವಾದಿತ ವಾಹಿನಿಯಲ್ಲಿ ಕನ್ನಡ ಕಾರ್ಯಕ್ರಮವನ್ನು ಆರಂಭಿಸಬೇಕು. ಅದನ್ನು ಒಂದು ಗಂಟೆ ಅವಧಿಗೆ ವಿಸ್ತರಿಸಬೇಕು.ಡಾ| ಜಿ. ಎನ್‌. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯ

 

-ಡಾ| ದಿನೇಶ್‌ ಶೆಟ್ಟಿ ರೆಂಜಾಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next