Advertisement

ಗಡಿಯಾಚೆ ಕಲಿಕೆ ಮೂಲದಲ್ಲೇ ಕನ್ನಡ ಕಣ್ಮರೆ; ಗಡಿ ಭಾಗದ ಕನ್ನಡ ಶಾಲೆಗಳಲ್ಲಿನ ದುಃಸ್ಥಿತಿ

12:44 AM Dec 08, 2022 | Team Udayavani |

ಬೆಂಗಳೂರು: ಒಂದೆಡೆ ಗಡಿ ವಿಚಾರದಲ್ಲಿ ಕನ್ನಡಿಗರ ಮೇಲೆ ದಬ್ಟಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೂಂದೆಡೆ ಅದೇ ಗಡಿಯಲ್ಲಿ ಸದ್ದಿಲ್ಲದೆ ಕನ್ನಡ ಭಾಷೆ ಮೇಲೆ ನಿರಂತರ ದಾಳಿ ಆಗುತ್ತಿದೆ. ಈ ಮೂಲಕ ಕಲಿಕೆಯ ಮೂಲದಲ್ಲೇ ಕನ್ನಡವನ್ನು ಚಿವುಟಿ ಹಾಕುವ ಹುನ್ನಾರ ನಡೆಯುತ್ತಿದೆ.

Advertisement

ಮಹಾರಾಷ್ಟ್ರ ಸಹಿತ ಶೇ.90ರಷ್ಟು ಕನ್ನಡಿಗರು ವಾಸವಿರುವ ಆರು ರಾಜ್ಯಗಳ ಗಡಿಗಳಲ್ಲಿ ಮಾತೃ ಭಾಷೆ ಕನ್ನಡವಾಗಿದೆ. ಆದರೆ ಅಲ್ಲಿ ಒಂದೇ ಒಂದು ಕನ್ನಡ ಅಂಗನವಾಡಿ ಕೇಂದ್ರಗಳಿಲ್ಲ. ಪರಿಣಾಮ ಮಾತೃಭಾಷೆ ಕಲಿಕೆಗೆ ಅಲ್ಲಿ ಅವಕಾಶವೇ ಇಲ್ಲವಾಗಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ ಮತ್ತು ತಮಿಳುನಾಡಿನಲ್ಲಿ ಅಂದಾಜು 12 ಗಡಿ ತಾಲೂಕುಗಳು ಬರುತ್ತವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಜತ್ತ, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಸಹಿತ ಮೂರು ಗಡಿ ತಾಲೂಕುಗಳು ಇವೆ. ಅಲ್ಲಿ 250ಕ್ಕೂ ಅಧಿಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿದ್ದು, ಸುಮಾರು 40 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಒಂದೇ ಒಂದು ಕನ್ನಡ ಪ್ರೌಢಶಾಲೆಗಳಿಲ್ಲ. ಇದಕ್ಕಿಂತ ಮುಖ್ಯವಾಗಿ ಒಂದೇ ಒಂದು ಕನ್ನಡ ಅಂಗನವಾಡಿ ಕೇಂದ್ರಗಳಿಲ್ಲ. ಇದರಿಂದ ಮಕ್ಕಳು ಅನಿವಾರ್ಯವಾಗಿ ಮರಾಠಿ ಯನ್ನೇ ಕಲಿಯುವಂತಾಗಿದೆ. ಇದು ಹಲವು ದಶಕಗಳಿಂದ ಮುಂದುವರಿದಿದ್ದರೂ ರಾಜ್ಯ ಸರಕಾರ ಈ ಬಗ್ಗೆ ಚಕಾರ ಎತ್ತಿಲ್ಲ.

“ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ’
“ಮಹಾರಾಷ್ಟ್ರ ಮಾತ್ರವಲ್ಲ, ಆಂಧ್ರಪ್ರದೇಶದ ಮೆಹಬೂಬನಗರ, ರಾಯದುರ್ಗ, ಗೋವಾ ಪಟ್ಟಣ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ತಳವಾಡಿ, ನೀಲಗಿರಿ ಸಹಿತ ಹಲವು ತಾಲೂಕುಗಳಲ್ಲೂ ಒಂದೇ ಒಂದು ಕನ್ನಡ ಅಂಗನವಾಡಿ ಕೇಂದ್ರಗಳಿಲ್ಲ. ಮನೆಯಲ್ಲಿ ಕನ್ನಡ ಕಲಿತು 3ನೇ ವರ್ಷಕ್ಕೆ ಅಂಗನವಾಡಿಗೆ ಬರುವ ಮಗುವಿಗೆ ತನಗೆ ತಿಳಿಯದ ಭಾಷೆ ಕಲಿಯಬೇಕಿದೆ. ಹೇಗೋ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬಂದರೆ, ಪ್ರೌಢಶಾಲೆಯಲ್ಲಿ ಮತ್ತದೇ ಸಮಸ್ಯೆ ಎದುರಿಸಬೇಕಿದೆ. ಈ ಬಗ್ಗೆ ಆಯಾ ರಾಜ್ಯಗಳ ಸರಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕರ್ನಾಟಕ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ತಿಳಿಸುತ್ತಾರೆ.

“ಈಗಾಗಲೇ ಸಾವಿರಾರು ಮಕ್ಕಳು ಅನಿವಾರ್ಯವಾಗಿ ಆಯಾ ರಾಜ್ಯಗಳ ಮಾಧ್ಯಮಗಳಿಗೆ ಅನಿವಾರ್ಯವಾಗಿ ವರ್ಗಾವಣೆ ಆಗಿದ್ದಾರೆ. ಆದರೆ ಪ್ರತಿವರ್ಷ ಎಷ್ಟು ಮಕ್ಕಳು ಪೂರ್ವಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ? ಭಾಷೆಯ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿದೆ ಎಂಬ ಅಂಶಗಳ ಕುರಿತು ಯಾವುದೇ ಸಮೀಕ್ಷೆ ನಡೆದಿಲ್ಲ. ಈ ನಿಟ್ಟಿನಲ್ಲಿ ಅಧ್ಯಯನ ಆಗಬೇಕಿದೆ’ ಎಂದೂ ಹೇಳುತ್ತಾರೆ.

Advertisement

ಸಂವಿಧಾನದಲ್ಲೇ ನಿರ್ದೇಶನ
ಭಾಷಾ ಅಲ್ಪಸಂಖ್ಯಾಕರಿಗೆ ಅವರ ಮಾತೃ ಭಾಷೆಯಲ್ಲಿ ಕಲಿಕೆಗೆ ಅವಕಾಶ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಂವಿ ಧಾನದ ಕಲಂ 29ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಬಗ್ಗೆ ಕೇಂದ್ರದ ಗೃಹ ಸಚಿವಾಲಯದ ಭಾಷಾ ಅಲ್ಪಸಂಖ್ಯಾಕರ ವಿಭಾಗವೂ ನಿರ್ದೇಶನ ಕೂಡ ನೀಡಿದೆ. ಅದ್ಯಾವುದೂ ಪ್ರಯೋಜನವಾಗಿಲ್ಲ. ಮಹಾರಾಷ್ಟ್ರ – ಕರ್ನಾಟಕ ಗಡಿ ಭಾಗದಲ್ಲಿ ಕನ್ನಡ ಕಲಿಯಲು ಅವಕಾಶ ಇಲ್ಲದಿರುವುದರಿಂದ ಕನ್ನಡ ಕಳೆದುಹೋಗುತ್ತಿದೆ ಎಂದು ಸೊಲ್ಲಾಪುರದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕ್‌ಜಾನ್‌ ಶೇಖ್‌ ಕಳವಳ ವ್ಯಕ್ತಪಡಿಸುತ್ತಾರೆ.

-  ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next