Advertisement

ಹಬ್ಬಕ್ಕೆ ಬಸ್‌ ಪ್ರಯಾಣ ದರ ಹೆಚ್ಚಳ ಇಲ್ಲ; ಸಚಿವ ಶ್ರೀರಾಮುಲು

07:55 PM Sep 23, 2022 | Team Udayavani |

ವಿಧಾನ ಪರಿಷತ್ತು: ಹಬ್ಬಕ್ಕೆ ಊರುಗಳಿಗೆ ಹೊರಟ ಪ್ರಯಾಣಿಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

Advertisement

ಸಾಮಾನ್ಯವಾಗಿ ಪ್ರತಿ ಹಬ್ಬದ ಸೀಜನ್‌ನಲ್ಲಿ ಏಕಾಏಕಿ ಬೇಡಿಕೆ ಹೆಚ್ಚಳದಿಂದ ಪ್ರಯಾಣ ದರ ಜೇಬು ಸುಡುತ್ತಿತ್ತು. ಆದರೆ, ಈ ಬಾರಿಯ ಹಬ್ಬದ ಸೀಜನ್‌ಗೆ ಸರ್ಕಾರಿ ಬಸ್‌ಗಳು ಸೇರಿ ಯಾವುದೇ ಬಸ್‌ಗಳ ಪ್ರಯಾಣ ದರ ಹೆಚ್ಚಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹಾಗಾಗಿ, ಬಸ್‌ಗಳ ಟಿಕೆಟ್‌ ದರ ಎಂದಿನಂತೆ ಇರಲಿದೆ.

“ಹಬ್ಬದ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳ ಮಾಡದಿರಲು ಸಾರಿಗೆ ನಿಗಮಗಳಿಗೆ ಸೂಚಿಸಿದ್ದು, ಖಾಸಗಿ ಟ್ರಾವೆಲ್ಸ್‌ಗಳಲ್ಲೂ ಈ ನಿರ್ದೇಶನ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಶುಕ್ರವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ವೈ.ಎಂ. ಸತೀಶ್‌ ಪರವಾಗಿ ಡಿ.ಎಸ್‌. ಅರುಣ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಬ್ಬದ ಸಂದರ್ಭದಲ್ಲಿ ಮುಂಗಡ ಬುಕಿಂಗ್‌ ಮಾಡಿ, ಕೃತಕ ಬೇಡಿಕೆ ಸೃಷ್ಟಿಸುವ ಮೂಲಕ ಪ್ರಯಾಣ ದರ ಹೆಚ್ಚಳಕ್ಕೆ ಕಾರಣವಾಗುವವರ ವಿರುದ್ಧ ಕ್ರಮ ಕೈಗೊಳ್ಳಲು ತಂಡ ರಚಿಸಲಾಗಿದೆ. ಇದಲ್ಲದೆ, ಈ ಮೊದಲೇ ಬೇಕಾಬಿಟ್ಟಿ ದರ ವಸೂಲು ಮಾಡುವ ಟ್ರಾವೆಲ್ಸ್‌ಗಳ ವಿರುದ್ಧ ಕಾರ್ಯಾಚರಣೆಗೆ ತಂಡಗಳಿವೆ. ಇದರ ಜತೆಗೆ ಕೃತಕ ಬೇಡಿಕೆ ಸೃಷ್ಟಿಸುವವರ ವಿರುದ್ಧವೂ ತಂಡ ರಚಿಸಲಾಗಿದೆ. ಇವೆರಡೂ ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಿದರು.

Advertisement

ಇದಕ್ಕೂ ಮುನ್ನ ಕಾಂಗ್ರೆಸ್‌ನ ಉಪನಾಯಕ ಡಾ.ಕೆ. ಗೋವಿಂದರಾಜು ಪರವಾಗಿ ಯು.ಬಿ. ವೆಂಕಟೇಶ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರಾಮುಲು, ಕಳೆದ ಐದು ವರ್ಷಗಳಲ್ಲಿ ಬಿಎಂಟಿಸಿಯು 1,324 ಕೋಟಿ ರೂ. ಸಾಲ ಮಾಡಿದೆ. ಸರ್ಕಾರದಿಂದ ರಿಯಾಯ್ತಿ ಪಾಸ್‌ಗಳಿಗೆ ಸಂಬಂಧಿಸಿದ ಅನುದಾನ ಬಾಕಿ ಇರುವುದು, ಬಸ್‌ ಖರೀದಿ, ಆಧುನೀಕರಣ, ಭವಿಷ್ಯನಿಧಿ ಪಾವತಿ ಮತ್ತಿತರ ಕಾರಣಗಳಿಗಾಗಿ ಈ ಸಾಲ ಪಡೆಯಲಾಗಿದ್ದು, ಈ ಪೈಕಿ ಈಗಾಗಲೇ 679 ಕೋಟಿ ರೂ. ಹಿಂಪಾವತಿಸಲಾಗಿದೆ. ಉಳಿದ 655 ಕೋಟಿ ರೂ.ಗಳನ್ನು ಹಂತ ಹಂತವಾಗಿ ಪಾವತಿಸಲಾಗುವುದು ಎಂದು ವಿವರಿಸಿದರು.

ಈ ವೇಳೆ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಮಾತನಾಡಿ, ಕೋವಿಡ್‌ ಹಾವಳಿ ಸಂದರ್ಭದಲ್ಲಿ ಹಳ್ಳಿಗಳಿಗೆ ಸ್ಥಗಿತಗೊಳಿಸಿದ್ದ ಬಸ್‌ಗಳ ಸೇವೆಯನ್ನು ಪುನಾರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ತೀವ್ರ ಸಮಸ್ಯೆ ಆಗುತ್ತಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮುಲು, ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ 70 ಕೋಟಿ ರೂ. ನಷ್ಟ ಆಗುತ್ತಿದೆ. ಮತ್ತೂಂದೆಡೆ ಡೀಸೆಲ್‌ ದರ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಆಗಿರುವುದು ನಿಜ. ಆದಾಗ್ಯೂ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸೇವೆ ಕಲ್ಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಪುನಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾವು 351; ಪರಿಹಾರ ಬರೀ 11!
ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟ ಸಾರಿಗೆ ನೌಕರರ ಸಂಖ್ಯೆ 351; ಆದರೆ, ಇದುವರೆಗೆ ಪರಿಹಾರ ದಕ್ಕಿದ್ದು ಕೇವಲ 11 ಜನರಿಗೆ ಎಂದು ಯು.ಬಿ. ವೆಂಕಟೇಶ್‌ ಆಕ್ರೋಶ ವ್ಯಕ್ತಪಡಿಸಿದರು. ನೌಕರರ ಪಿಂಚಣಿ, ಭವಿಷ್ಯನಿಧಿ, ಪರಿಹಾರಕ್ಕಾಗಿ ಸಾರಿಗೆ ನಿಗಮಗಳು ಸಾಲ ಮಾಡಿರುವುದಾಗಿ ಹೇಳುತ್ತಿವೆ. ಆದರೆ, ಕೋವಿಡ್‌ ಹಾವಳಿಯಲ್ಲಿ ಸಾವನ್ನಪ್ಪಿದ 351 ಜನರಲ್ಲಿ ಕೇವಲ 11 ಜನರಿಗೆ ಇದುವರೆಗೆ ಪರಿಹಾರ ಕಲ್ಪಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next