Advertisement

ಕನ್ನಡದ ಮೇಲೆ ಪರ ಭಾಷೆಗಳ ಅಕ್ರಮಣ ಸಲ್ಲ

01:31 PM Dec 01, 2017 | Team Udayavani |

ಯಲಹಂಕ: ಕನ್ನಡದ ಮೇಲೆ ಇತರ ಭಾಷೆಗಳ ಅಕ್ರಮಣವನ್ನು ಸಹಿಸಲಾಗದು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ  ಪ್ರೊ. ಸಿದ್ದರಾಮಯ್ಯ ಹೇಳಿದರು. ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಕೇಂದ್ರದಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಕನ್ನಡಿಗರು ಬೇರೆ ಭಾಷೆಯನ್ನು ಕಲಿಯಬೇಕು. ಆದರೆ, ಕನ್ನಡ ತನವನ್ನು ಎಂದೂ ಬಿಟ್ಟುಕೊಡಬಾರದು ಎಂದರು. ಭಾಷೆ ಎಂದರೆ ಕೇವಲ ಸಂವಹನ ಮಾಧ್ಯಮವಲ್ಲ. ಅದೊಂದು ಬದುಕು. ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಮತ್ತು ಬಹುತ್ವಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾನ ಮಹತ್ವ ಸಿಗಲಿ: ಭಾಷೆ ಆಧಾರದ ಮೇಲೆ ರಾಜ್ಯಗಳು ರಚನೆಯಾಗಿದ್ದು, ಸಂವಿಧಾನದಲ್ಲಿ ನಮೂದಿಸಲಾಗಿರುವ ಎಲ್ಲ ಭಾಷೆಗಳಿಗೂ ಸಮನಾದ ಮಹತ್ವ ಸಿಗಬೇಕು. ಇಂಗ್ಲಿಷ್‌ ಕಣ್ಣು ತೆರೆಯುವ ಮೊದಲು ಕನ್ನಡದಲ್ಲಿ ಆದಿಕವಿ ಪಂಪ ಮಹಾಕಾವ್ಯ ರಚಿಸಿದ್ದಾರೆ. ದ್ರಾವಿಡ ಬಾಷೆಗಳಿಗೆ ಒಂದು ವ್ಯಾಕರಣವಿದೆ. ಕನ್ನಡ ಸಂಸ್ಕೃತದ ನೆರಳಿನಲ್ಲಿ ಬೆಳೆದಿಲ್ಲ. ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. 16 ಜನಪದ ಮಹಾಕಾವ್ಯಗಳು ಕನ್ನಡದಲ್ಲಿ ರಚಿತವಾಗಿವೆ ಎಂದು ಮಾಹಿತಿ ನೀಡಿದರು.

ಕಂಪ್ಯೂಟರ್‌ನಲ್ಲಿ ಕನ್ನಡ ಕೀಲಿಮಣಿ ಬಂದಿರುವುದು ಆಶಾದಾಯಕ ಬೆಳವಣಿಗೆ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಿದ್ದರೂ. ಐಸಿಎಸ್‌ಸಿ, ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡದ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಕೇಂದ್ರೀಯ ಪಠ್ಯದ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯವಾಗಿಸಲು ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರೊ. ಸಿದ್ದರಾಮುಯ್ಯ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌. ಶಿವಣ್ಣ ಅವರು ಮಾತನಾಡಿ, ಬೆಂಗಳೂರು ಕೃಷಿ ವಿವಿಯ ಬಹುತೇಕ ಪ್ರಕಟಣೆಗಳು ಮತ್ತು ತರಬೇತಿ ಕಾರ್ಯಕ್ರಮಗಳು ಕನ್ನಡದಲ್ಲೇ ಇರುತ್ತವೆ. ಆಡಳಿತದಲ್ಲಿ ಸಹ ಕನ್ನಡ ಭಾಷೆ ಬಳಕೆಯಲ್ಲಿದೆ. ಮುಂದೆ ಆಡಳಿತದಲ್ಲಿ ಇನ್ನೂ ಹೆಚ್ಚು ಕನ್ನಡ ಬಳಕೆಗೆ ಒತ್ತು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಡಾ. ಕೆ.ಪಿ ವಿಶ್ವನಾಥ್‌, ಪ್ರೊ.ಟಿ.ಎಚ್‌.ಆಂಜಿನಪ್ಪ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next