Advertisement

ಜನಪ್ರತಿನಿಧಿಗಳಿಲ್ಲದೇ ಅನಾಥವಾದ ನಗರಸಭೆ

05:18 PM Nov 12, 2020 | Suhan S |

ಚಿಕ್ಕಮಗಳೂರು: ಮೀಸಲಾತಿ ನೆಪವೊಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿನಗರಸಭೆಗೆ ಚುನಾವಣೆ ನಡೆಯದೆ ಒಂದೂವರೆ ವರ್ಷ ಸಮೀಪಿಸುತ್ತಿದ್ದು, ಜನಪ್ರತಿನಿಧಿಗಳಿಲ್ಲದೇ ನಗರದ ಅಭಿವೃದ್ಧಿಗೆ ಸಮಸ್ಯೆ ಎದುರಾಗಿದೆ.

Advertisement

ನಗರದ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಯಪಾತ್ರ ಮಹತ್ವದಾಗಿದ್ದು, ರಸ್ತೆ, ಚರಂಡಿ,ಕುಡಿಯುವ ನೀರು, ಬೀದಿದೀಪ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ನಿರ್ಣಯ ಕೈಗೊಳ್ಳಲು ನಗರಸಭೆಯಲ್ಲಿ ಜನಪ್ರತಿನಿಧಿ ಗಳಿಲ್ಲದ ಕಾರಣ ನಗರದ ಅಭಿವೃದ್ಧಿ ಹಿನ್ನಡೆಯಾಗಿದೆ.

ಚಿಕ್ಕಮಗಳೂರು ನಗರಸಭೆ 35 ವಾರ್ಡ್ ಗಳನ್ನು ಹೊಂದಿದ್ದು, ಒಂದೊಂದು ವಾರ್ಡ್ ನಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ನಗರಸಭೆಯಲ್ಲಿ ಜನಪ್ರತಿನಿಧಿ ಗಳಿಲ್ಲದೇ ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳಿಗೆ ತಿಳಿಯದಂತಾಗಿದೆ.

ಜನಪ್ರತಿನಿಧಿಗಳಿಲ್ಲದೆ ನಗರಸಭೆ ಆಡಳಿತ ಯಂತ್ರ ಕುಸಿದಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ. ನಗರಸಭೆ ಆಯುಕ್ತರು ಚಟುವಟಿಕೆಯಿಂದ ನಗರಸಭೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದರು ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿಯದ್ದೇ ದರ್ಬಾರು ನಡೆಯುತ್ತಿದೆ. ಹಣವಿಲ್ಲದೇ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ತಮ್ಮ ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನುನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ಜನಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೇ ಅನೇಕ ಬಡಾವಣೆಗಳು ಸಮಸ್ಯೆಗಳ ಆಗರವಾಗಿ ಮಾರ್ಪಟಿವೆ.

ನಗರದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಳಪೆ ಕಾಮಗಾರಿಗಳನ್ನು ಪ್ರಶ್ನಿಸುವವರ ದಿಕ್ಕಿಲ್ಲದಂತಾಗಿದೆ. ನಗರದಲ್ಲಿ 24ಗಂಟೆ ಕುಡಿಯುವ ನೀರಿನ ಯೋಜನೆ(ಅಮೃತ್‌ ಯೋಜನೆ), ಯುಜಿಡಿ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಕಾಮಗಾರಿಗಳಿಗೆ ಚುರುಕು ಮುಟ್ಟಿಸಬೇಕಾದ ಜನಪ್ರತಿನಿಧಿ ಗಳ ಆಡಳಿತ ಮಂಡಳಿಯಿಲ್ಲದೆ ಕಳೆದ ಒಂದೂವರೆವರ್ಷದಿಂದ ನಗರಸಭೆ ಅನಾಥವಾಗಿದೆ.ಸದ್ಯ ವಾರ್ಡ್‌ ಮೀಸಲಾತಿ ಸಂಬಂಧ ಹಿಂದಿನ ಜನಪ್ರತಿನಿಧಿ ಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಶೀಘ್ರವೇ ಸಮಸ್ಯೆ ಪರಿಹರಿಸಿ ನಗರಸಭೆ ಚುನಾವಣೆ ನಡೆಸಿ ಜನಪ್ರತಿನಿಧಿ ಗಳ ಆಡಳಿತ ಮಂಡಳಿ ರಚನೆಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Advertisement

ನ‌ಗರಸಭೆ ಆಡಳಿತದಲ್ಲಿ ಹದ್ದಿನ ಕಣ್ಣಿಡಬೇಕಾದ ಜನಪ್ರತಿನಿಧಿಗಳಿಲ್ಲದೇ ನಗರದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅನೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಶೀಘ್ರದಲ್ಲಿ ನ್ಯಾಯಾಲಯ ಅರ್ಜಿ ಪರಿಶೀಲನೆ ಮಾಡಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕಾಗಿದೆ.  –ಮಂಜುನಾಥ್‌, ಕೋಟೆ ನಿವಾಸಿ

ನಗರಸಭೆಗೆ ಜನಪ್ರತಿನಿಧಿಗಳಿಲ್ಲದೇಬೃಹತ್‌ ಕಾಮಗಾರಿ ಬಗ್ಗೆ ನಿರ್ಣಾಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಗರದಲ್ಲಿ ಅನೇಕಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ನಗರಸಭೆಗೆಶೀಘ್ರ ಚುನಾವಣೆ ನಡೆಯಲಿ.  –ಹಿರೇಮಗಳೂರು ಪುಟ್ಟಸ್ವಾಮಿ,ನಗರಸಭೆ ಮಾಜಿ ಸದಸ್ಯ

ನಗರಸಭೆಗೆ ಜನಪ್ರತಿನಿಧಿಗಳಿಲ್ಲದೇಒಂದೂವರೆ ವರ್ಷ ಕಳೆದಿದೆ. ಸರ್ಕಾರದಿಂದ ದೊಡ್ಡ ಅನುದಾನ ಬರುತ್ತಿಲ್ಲ.ನಗರದಲ್ಲಿ ಅನೇಕ ಸಮಸ್ಯೆಗಳಿದ್ದು,ಸಾರ್ವಜನಿಕರು ಯಾರನ್ನು ಪ್ರಶ್ನಿಸಬೇಕು ಎಂದು ತಿಳಿಯದಂತಾಗಿದೆ.  –ರೂಬಿನ್‌ ಮೊಸೆಸ್‌ ನಗರಸಭೆ ಮಾಜಿ ಸದಸ್ಯ

 

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next