ಬೆಂಗಳೂರು: ನೀರಲ್ಲೇ ನಿಂತವನ ದಾಹ ನೀಗಿಸಲೂ ಬೊಗಸೆ ನೀರಿಲ್ಲ! -ಇದು ರಾಜಧಾನಿ ಬೆಂಗಳೂರಿನ ವಾಸ್ತವ ಸ್ಥಿತಿ. ನಗರದ ಎಲ್ಲ ದಿಕ್ಕುಗಳಲ್ಲಿ ಜೀವಂತ ಕೆರೆಗಳಿದ್ದು, ಸದಾ ಕಾಲ ತುಂಬಿರುತ್ತವೆ. ಆದರೆ, ಕೆರೆ ನೀರನ್ನು ಕುಡಿಯದ, ಬಳಸದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಳಿವಾಡ ಕೆರೆ ಸದನ ಸಮಿತಿ ಪ್ರಕಾರ ಬೆಂಗಳೂರು ನಗರದಲ್ಲೇ 835 ಕೆರೆಗಳಿವೆ. ಆದರೆ, ನಗರೀಕರಣ ಹಾಗೂ ಒತ್ತುವರಿಯ ಪರಿಣಾಮ ಜೀವಂತ ಕೆರೆಗಳ ಸಂಖ್ಯೆ 200ಕ್ಕೆ ಇಳಿದಿದೆ. ಪಾಲಿಕೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರೂ, ನಗರದ ಒಂದೇ ಒಂದು ಕೆರೆಯ ನೀರು ಸಹ ಬಳಸಲು ಯೋಗ್ಯವಾಗಿಲ್ಲ.
ರಾಜಕಾಲುವೆಯಲ್ಲ, ತ್ಯಾಜ್ಯ ಕಾಲುವೆ: ನಗರದ ಕೆರೆಗಳು ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಭೌಗೋಳಿಕವಾಗಿ ಒಂದಕ್ಕೊಂದು ಸಂಪರ್ಕ ಹೊಂದಿವೆ. ಒಂದು ಕೆರೆ ಕೋಡಿ ಒಡೆದು ಹರಿಯುವ ನೀರು ಮತ್ತೂಂದು ಕೆರೆ ಸೇರುವ ವ್ಯವಸ್ಥೆಯಿದೆ. ಆದರೆ, ರಾಜಕಾಲುವೆಗಳಲ್ಲಿ ಮಳೆ ನೀರು ಬದಲಿಗೆ ಒಳಚರಂಡಿ ನೀರು ಹರಿಯುತ್ತಿರುವುದರಿಂದ ಕೆರೆ ನೀರು ಕಲುಷಿತಗೊಂಡು, ಹೂಳು ತುಂಬಿದೆ. ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರು ಸ್ಥಗಿತಗೊಳ್ಳುವವರೆಗೆ ಬೆಂಗಳೂರಿನ ಕೆರೆಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ನೀರು ಬಳಸಲೂ ಯೋಗ್ಯವಲ್ಲ: ಪಾಲಿಕೆ ತೆಕ್ಕೆಯಲ್ಲಿನ ಕೆರೆಗಳ ಪೈಕಿ ಒಂದೇ ಒಂದು ಕೆರೆಯ ನೀರು ಬಳಸಲು ಯೋಗ್ಯವಾಗಿಲ್ಲ ಎಂಬುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಿಂದ ಬಹಿರಂಗವಾಗಿದೆ. ನಗರದಲ್ಲಿ 40 ಕೆರೆಗಳಲ್ಲಿನ ನೀರಿನ ಮಾದರಿ ಪರೀಕ್ಷೆ ನಡೆಸಿದೆ. ಈ ವೇಳೆ ಬಹುತೇಕ ಕೆರೆಗಳಲ್ಲಿ ನೀರು ಕೇವಲ ಕೃಷಿ, ಕೈಗಾರಿಕೆಗಳಲ್ಲಿ ಬಿಸಿ ಯಂತ್ರಗಳನ್ನು ತಂಪುಗೊಳಿಸಲು ಯೋಗ್ಯವಾಗಿದೆ ಎಂಬ ಅಂಶ ಪತ್ತೆಯಾಗಿದೆ.
Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚಿನ ಕೆರೆಗಳಲ್ಲಿನ ನೀರು ಬಳಸಲೂ ಆಗದಷ್ಟು ಕಲುಷಿತಗೊಂಡಿದೆ. ನಗರಕ್ಕೆ ಬೇಕಾಗುವಷ್ಟು ನೀರು ನಗರದಲ್ಲೇ ಲಭ್ಯವಿದ್ದರೂ ಬಳಸಿಕೊಳ್ಳಲು ಸರ್ಕಾರ, ಪಾಲಿಕೆ ಆಸಕ್ತಿ ತೋರುತ್ತಿಲ್ಲ. ನಗರದ 194 ಕೆರೆಗಳು ಸುಮಾರು 5 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಪಾಲಿಕೆ ಒಡೆತನದಲ್ಲಿರುವ 92 ಕೆರೆಗಳು 2.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪೂರ್ಣ ಪ್ರಮಾಣದ ಬಳಸಲು ಯೋಗ್ಯ ನೀರು ಇಲ್ಲಿ ಸಂಗ್ರಹವಾದರೆ, ಬೆಂಗಳೂರು ಕೇಂದ್ರ ಭಾಗದ ನೀರಿನ ದಾಹ ತಣಿಯಲಿದೆ. ಬಿಬಿಎಂಪಿ ಒಡೆತನದಲ್ಲಿರುವ ಕೆರೆಗಳ ಒಟ್ಟು ವಿಸ್ತೀರ್ಣ 3,415.75 ಎಕರೆ. ಈ ಪೈಕಿ, 2,426.92 ಎಕರೆ ಜಾಗದಲ್ಲಿನ ಕೆರೆಗಳು ನೀರು ಹಿಡಿದಿಟ್ಟುಕೊಂಡರೆ, ವಾರ್ಷಿಕ 2.50 ಟಿಎಂಸಿ ನೀರು ಸಂಗ್ರಹಿಸಬಹುದು. ಆದರೆ, ಬಿಬಿಎಂಪಿ ನಿರ್ಲಕ್ಷ್ಯದಿಂದ ಕೆರೆ ನೀರು ಕಲುಷಿತಗೊಂಡಿದೆ.
Related Articles
Advertisement
ಅಂತರ್ಜಲ ಸೇರುವುದು ವಿಳಂಬ: ಕೆರೆಗಳು ತುಂಬಿದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗುತ್ತದೆ. ಕೆರೆಯಲ್ಲಿರುವ ನೀರು ಅಂತರ್ಜಲ ಸೇರಲು ಸಾಕಷ್ಟು ಸಮಯ ಬೇಕಾಗುತ್ತದೆ. ಅಂತರ್ಜಲ ಸೇರುವ ನೀರು ನಿತ್ಯ ಒಂದು ಇಂಚಿನಷ್ಟು ಮಾತ್ರ ಭೂಮಿಯೊಳಗೆ ಹೋಗಲು ಸಾಧ್ಯವಾಗುತ್ತದೆ. ಆದರೆ, ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರೆ ನೀರು ಅಂತರ್ಜಲ ಸೇರುವುದು ವಿಳಂಬವಾಗುತ್ತದೆ ಎನ್ನುತ್ತಾರೆ ತಜ್ಞರು.
ಹೆಸರಘಟ್ಟ ಕೆರೆ ನೀರು ಕುಡಿಯಲು ಯೋಗ್ಯ!
ದಾಸರಹಳ್ಳಿ ವಲಯದ ಹೆಸರಘಟ್ಟ ಕೆರೆಯ ನೀರು ಮಾತ್ರ ಸಂಸ್ಕರಿಸಿ ಬ್ಯಾಕ್ಟೀರಿಯಾ ನಿವಾರಿಸಿದ ಬಳಿಕ ಕುಡಿಯಲು ಯೋಗ್ಯವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಹೆಸರಘಟ್ಟ ಕೆರೆಗಳಿಗೆ ಯಾವುದೇ ರೀತಿಯ ಒಳಚರಂಡಿ ನೀರು ಹರಿಯುತ್ತಿಲ್ಲ. ಜತೆಗೆ ಮಳೆ ನೀರು ಮಣ್ಣಿನ ಕಾಲುವೆಗಳಿಂದಲೇ ಹರಿಯುವುದರಿಂದ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಮಂಡಳಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪಾಲಿಕೆಯಿಂದ 19 ಕೆರೆಗಳ ಅಭಿವೃದ್ಧಿ
ಬಿಬಿಎಂಪಿ ವ್ಯಾಪ್ತಿಯ 19 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈಗಾಗಲೇ ಅಭಿವೃದ್ಧಿಯಾಗಿರುವ 74 ಕೆರೆಗಳಲ್ಲಿ ಹೂಳು ತೆರವುಗೊಳಿಸುವ ಕೆಲಸ ನಿಯಮಿತವಾಗಿ ನಡೆಯದಿರುವುದು ನೀರಿನ ಶೇಖರಣೆ ಪ್ರಮಾಣ ಕಗ್ಗುವಂತೆ ಮಾಡಲಿದೆ.