ಹುಬ್ಬಳ್ಳಿ: ಬಿಜೆಪಿ ಸರಕಾರದ ಮೇಲೆ ಮಾಡಿರುವ ಪರ್ಸಂಟೇಜ್ ಆರೋಪದ ಪತ್ರವನ್ನು ಬರೆದದ್ದು ಕಾಂಗ್ರೆಸ್ ನಾಯಕರು, ಅದನ್ನು ಸಲ್ಲಿಸಲು ಬಂದಿರುವುದಾಗಿ ಗುತ್ತಿಗದಾರರ ಸಂಘದ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ಕೆಂಪಣ್ಣ ಅವರು ನನ್ನ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಇದು ದೇವರಾಣೆಗೂ ಸತ್ಯ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿದರು.
ಗುರುವಾರ ನವಲಗುಂದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನವಿ ಸಲ್ಲಿಸಲು ನನ್ನ ಕಚೇರಿಗೆ ಬಂದಂತಹ ಸಂದರ್ಭದಲ್ಲಿ ಅವರು ಬಳಸಿದ ಶಬ್ದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಕೊಟ್ಟಿದ್ದ ಮನವಿ ಪತ್ರವನ್ನು ಕಾಂಗ್ರೆಸ್ ನಾಯಕರು ಬರೆದುಕೊಟ್ಟಿದ್ದು ಎಂದು ಕೆಂಪಣ್ಣ ಅವರು ಒಪ್ಪಿಕೊಂಡಿದ್ದಾರೆ. ಈ ಮಾತುಗಳನ್ನು ಹೇಳಿರುವುದು ದೇವರಾಣೆಗೂ ಸತ್ಯವಾಗಿದೆ. ಈ ಬೆಳವಣಿಗೆ ನೋಡಿದರೆ ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಮಾಡಿರುವ ಆರೋಪ ನಿಜವಾಗಿದ್ದರೆ ದಾಖಲೆ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದರು.
ಪೂರ್ಣ ವರದಿ ಬರಲಿದೆ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರದಲ್ಲಿ ಸರಕಾರ ಬದ್ಧವಾಗಿದೆ. ಸಮಾಜದ ವ್ಯಕ್ತಿ ಹಾಗೂ ಸರಕಾರದ ಮಂತ್ರಿಯಾಗಿ ತಂತಿ ಮೇಲಿನ ನಡಿಗೆಯಾಗಿದೆ. ಸಮಾಜದ ವ್ಯಕ್ತಿಯಾಗಿ ಪೂರ್ಣ ಪ್ರಮಾಣದ ವರದಿ ಬರಲಿದೆ. ಮೀಸಲಾತಿ ವಿಚಾರದಲ್ಲಿ ಸರಕಾರ ಸಂಪೂರ್ಣ ಸಮಾಜದ ಪರವಾಗಿದೆ. ಇದನ್ನು ಶ್ರೀಗಳು ಅರ್ಥ ಮಾಡಿಕೊಳ್ಳುತ್ತಾರೆ. ಅಂತಿಮವಾಗಿ ಮುಖ್ಯಮಂತ್ರಿಗಳು ವರದಿ ತರಿಸಿಕೊಳ್ಳಬೇಕು. ಅವರು ಒಂದೇ ಸಮಾಜವನ್ನು ನೋಡದೆ ಎಲ್ಲಾ ಸಮಾಜವನ್ನು ಗಮನಿಸಬೇಕಾಗುತ್ತದೆ ಎಂದರು.
ಎನ್.ಎಚ್.ಐ.ಎ ನಿರ್ಮಿಸಿರುವ ಬೆಂಗಳೂರು- ಮೈಸೂರು ಎಕ್ಸಪ್ರೆಸ್ ಹೆದ್ದಾರಿ ಆರಂಭಗೊಂಡು ಬಹಳ ದಿನಗಳಾಗಿವೆ. ಉದ್ಘಾಟನೆಯಾಗಿರುವುದು ಮೊನ್ನೆಯಷ್ಠೆ. ಉದ್ಘಾಟನೆ ಮಾರನೇ ದಿನ ಹಾಳಾಗಿದೆ ಎಂಬುವುದು ಸರಿಯಲ್ಲ. ಟೋಲ್ ಸಂಗ್ರಹದ ಬಗ್ಗೆ ಉಂಟಾಗಿರುವ ಗೊಂದಲವನ್ನು ಹೆದ್ದಾರಿ ಪ್ರಾಧಿಕಾರ ಪರಿಗಣಿಸಲಿದೆ ಎಂದು ತಿಳಿಸಿದರು.