Advertisement

ಹೊಸ ಕಟ್ಟಡ ಭಾಗ್ಯ ದೊರೆತರೂ ಸೇವೆ ನೀಡಲು ವೈದ್ಯರಿಲ್ಲ 

10:10 AM Oct 31, 2018 | |

ಬಜಪೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡ ಭಾಗ್ಯ ದೊರೆತರೂ ಖಾಯಂ ವೈದ್ಯರಿಲ್ಲದೆ ಉಪಯೋಗಕ್ಕಿಲ್ಲ ಎಂಬಂತಾಗಿದೆ. ಮೈಸೂರು ರಾಜ್ಯದ ಗವರ್ನರ್‌ ಆಗಿದ್ದ ಜಯಚಾಮರಾಜ ಒಡೆಯರ್‌ ಅವರಿಂದ 1953ರಲ್ಲಿ ಉದ್ಘಾಟನೆಗೊಂಡ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 1.45 ಕೋಟಿ ರೂ. ಅನುದಾನದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಆದರೆ ವೈದ್ಯರಿಲ್ಲದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

Advertisement

ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರವು 8 ಗ್ರಾಮ, 9 ಉಪ ಕೇಂದ್ರ ವ್ಯಾಪ್ತಿಯನ್ನು ಹೊಂದಿದೆ. ಕೊಳಂಬೆ, ಪಡುಪೆರಾರ, ಮೂಡುಪೆರಾರ, ಬಜಪೆ, ಪೆರ್ಮುದೆ, ಜೋಕಟ್ಟೆ, ಕಂದಾವರ, ಮಳವೂರು, ಬಜಪೆ ವಿಮಾನ ನಿಲ್ದಾಣ, ಎಂಆರ್‌ಪಿಎಲ್‌, ಎಂಎಸ್‌ಇಝಡ್‌ ವ್ಯಾಪ್ತಿಯ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ ಅನುದಾನದಲ್ಲಿ ನೂತನ ಕಟ್ಟಡ ಕಾಮಗಾರಿಗೆ 2017ರ ಮಾರ್ಚ್‌ 26ರಂದು ಶಂಕು ಸ್ಥಾಪನೆ ನೆರವೇರಿಸಿದ್ದು, ಸುಮಾರು 19 ತಿಂಗಳಲ್ಲಿ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದೆ.  ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ವೈದ್ಯರಿಲ್ಲ ಎಂಬಂತಾಗಿದೆ.

ಇಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಬೇರೆಡೆಗೆ ಹೋಗಿರುವುದರಿಂದ ಅ. 19ರಿಂದ ಇಲ್ಲಿ ವೈದ್ಯರೇ ಇಲ್ಲ ಎಂಬಂತಾಗಿದೆ. ಬೋಂದೆಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದು, ಈಗ ಅವರು ಕೂಡ ತರಬೇತಿಗಾಗಿ ತೆರಳಿದ್ದಾರೆ. ಕಟೀಲು, ಗಂಜಿಮಠ, ಕೊಂಪದವು, ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿವೆ. ಗಂಜಿಮಠ ಆರೋಗ್ಯ ಕೇಂದ್ರಕ್ಕೆ ಇತ್ತೀಚಿಗೆ ಖಾಯಂ ವೈದ್ಯರು ಆಗಮಿಸಿದ್ದಾರೆ. ಇತರೆಡೆಗಳಲ್ಲಿ ಎರಡೆರಡು ಕಡೆ ಕಾರ್ಯನಿರ್ವಹಿಸುವ ವೈದ್ಯರುಗಳೇ ಇದ್ದಾರೆ.

ಗ್ರಾಮ ಸಭೆಯಲ್ಲಿ ತರಾಟೆ
ಪಡುಪೆರಾರ ಮತ್ತು ಅದ್ಯಪಾಡಿಗೆ ಆರೋಗ್ಯ ಸಹಾಯಕಿಯರು ಬಂದಿದ್ದಾರೆ. ಅವರು 15- 49ರ ಅರ್ಹ ದಂಪತಿಗಳ ಸರ್ವೆ ಕಾರ್ಯದಲ್ಲಿದ್ದಾರೆ. ಇದು ಒಂದು ನಿಟ್ಟುಸಿರು ಬಿಡುವ ವಿಷಯವಾದರೂ ಕೆಲಕಾಲದಿಂದ ಇವರೂ ಆರೋಗ್ಯ ಕೇಂದ್ರದಲ್ಲಿ ಇಲ್ಲದೇ ಇರುವ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಆರೋಗ್ಯ ಇಲಾಖೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.

Advertisement

ಮೇಲ್ದರ್ಜೆಗೇರಿಸಿ: ಆಗ್ರಹ 
ಹೊಸ ಕಟ್ಟಡದಲ್ಲಿ ಮುಂದುವರಿಯಲಿರುವ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಕೇಂದ್ರವಾಗಿಲ್ಲ. ಇದನ್ನು ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯರು ಬಹುಕಾಲದಿಂದ ಆಗ್ರಹಿಸುತ್ತಿದ್ದಾರೆ. 

ಕೂಡಲೇ ನೇಮಕ ಮಾಡಲಾಗುವುದು
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ರೆಡಿಯಾಗಿದೆ. ಇದರ ಉದ್ಘಾಟನೆಗೆ ಜನಪ್ರತಿನಿಧಿಗಳ ಅನುಮತಿ ಪಡೆದು ದಿನಾಂಕ ನಿಗದಿಪಡಿಸಲಾಗುತ್ತದೆ. ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದರಿದ್ದವರು ವರ್ಗಾವಣೆಗೊಂಡ ಕಾರಣ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಲಾಗಿತ್ತು. ಈಗ ಅವರೂ ಬಿಟ್ಟು ಹೋಗಿದ್ದಾರೆ. ಇನ್ನು ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಕೊಡಲೇ ಆ ಹುದ್ದೆಗೆ ಅರ್ಜಿ ಆಹ್ವಾನಿಸಿ ನೇಮಕ ಮಾಡಲಾಗುವುದು.
 - ಡಾ| ರಾಮಕೃಷ್ಣ ರಾವ್‌,
   ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತುರ್ತು ಚಿಕಿತ್ಸೆಯೂ ಸಿಗುತ್ತಿಲ್ಲ
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಕಾರ್ಮಿಕರ ವೈದ್ಯಕೀಯ ತಪಾಸಣೆ, ಆರೋಗ್ಯ ಪ್ರಮಾಣ ಪತ್ರ ವಿತರಣೆ, ಮರಣೋತ್ತರ ಪರೀಕ್ಷೆ, ತುರ್ತುಚಿಕಿತ್ಸೆಗಳೂ ನಡೆಯುತ್ತಿಲ್ಲ. ಹೆಚ್ಚಿನ ಆರೋಗ್ಯ ಸಹಾಯಕಿಯರು ತರಬೇತಿ ಹೊಂದಿದವರಾದ ಕಾರಣ ಬೇರೆ ಸೇವೆಗಳನ್ನು ಮಾತ್ರ ನೀಡುತ್ತಿದ್ದಾರೆ.

‡ ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next