Advertisement

ಪ್ರಧಾನಿ ಅಭ್ಯರ್ಥಿ ಕುರಿತು ಭಿನ್ನಾಭಿಪ್ರಾಯವಿಲ್ಲ

12:30 AM Jan 20, 2019 | Team Udayavani |

ಕೋಲ್ಕತಾ: ವಿಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬ ವಿಚಾರದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ನಮ್ಮಲ್ಲಿ ಪ್ರಧಾನಿ ಯಾರು ಎಂಬುದನ್ನು ಲೋಕಸಭೆ ಚುನಾವಣೆಯ ಅನಂತರ ನಿರ್ಧರಿಸಲಾಗುತ್ತದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ. 

Advertisement

ಈ ಮೂಲಕ, ಪ್ರಧಾನಿ ಹುದ್ದೆಗಾಗಿ ತಾವು ಮೈತ್ರಿಕೂಟದಲ್ಲಿ ಪಟ್ಟು ಹಿಡಿದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿರುವ ಅವರು, ಮಹಾ ಘಟಬಂಧನದಲ್ಲಿ ಓರ್ವ ವಧುವಿಗಾಗಿ (ಪ್ರಧಾನಿ ಕುರ್ಚಿ) ಅನೇಕ ವರರು ಪೈಪೋಟಿ ನಡೆಸಿದ್ದಾರೆ ಎಂಬ ಬಿಜೆಪಿ ಮತ್ತು ಎನ್‌ಡಿಎ ಅಂಗಪಕ್ಷಗಳ ಕುಹಕಕ್ಕೆ ಉತ್ತರ ನೀಡಿದ್ದಾರೆ. 

ಕೋಲ್ಕತಾದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದ ವಿಪಕ್ಷಗಳ ಶಕ್ತಿ ಪ್ರದರ್ಶನದ ಮಹಾ ಸಮ್ಮೇಳನದಲ್ಲಿ  (ಯುನೈಟೆಡ್‌ ಇಂಡಿಯಾ ರ್ಯಾಲಿ) ಮಾತನಾಡಿದ ಅವರು, “ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರ “ಎಕ್ಸ್‌ಪೈರಿ ದಿನಾಂಕ’ ಮೀರಿ ಮುನ್ನಡೆದಿದೆ. ಹಾಗಾಗಿ, ಆ ಸರಕಾರವನ್ನು ತುರ್ತಾಗಿ ಬದಲಾಯಿಸಬೇಕಿದೆ’ ಎಂದರು.  

ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “ಯಾರು ಬಿಜೆಪಿ ಮೈತ್ರಿಯಲ್ಲಿಲ್ಲವೋ ಅವರನ್ನು ಕಳ್ಳರೆಂದು ಆ ಪಕ್ಷ ಕರೆಯುತ್ತದೆ. ಮೋದಿ ಸರಕಾರದಲ್ಲೇ ಹಿರಿಯ ನಾಯಕರಾದ ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಇಂಥವರು ಸಾಂ ಕ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗಿಂತ ಘೋರವಾದ ಸೂಪರ್‌ ತುರ್ತು ಪರಿಸ್ಥಿತಿ ಈಗ ನಮ್ಮ ದೇಶದಲ್ಲಿದೆ’ ಎಂದರು.
 
ಬಿಜೆಪಿಯದ್ದು ಇಬ್ಬಗೆಯ ನೀತಿ: ಕುಮಾರಸ್ವಾಮಿ: ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ, ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರಕ್ಕೆ ಕೈಹಾಕುವ ಮೂಲಕ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿರುವ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, “ಕೇಂದ್ರದಲ್ಲಿ ಪ್ರಜಾಪ್ರಭುತ್ವದ ಸರಕಾರ ಅಧಿಕಾರದಲ್ಲಿದೆ. ಆದರೆ, ಆ ಸರಕಾರವನ್ನು ಪ್ರಜಾಪ್ರಭುತ್ವ ವಿರೋಧಿಗಳೇ ಮುನ್ನಡೆಸುತ್ತಿದ್ದಾರೆ. ಆ ಸರಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ’ ಎಂದರು. 

ಅಲ್ಲದೆ, ಪ್ರಾದೇಶಿಕ ಮಟ್ಟದಲ್ಲಿ ಜನಪರ ಆಡಳಿತ ನೀಡಲು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದ ಅವರು, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಮಹಿಳೆಯರಿಗೆ ಮಾದರಿ ಎಂದು ಹಾಡಿ ಹೊಗಳಿದರು.

Advertisement

ಖರ್ಗೆ ಕಿಡಿ: “ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ಆಡಳಿತ ವೈಖರಿಗೆ ದೇಶದ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳು ಹಾಳಾಗಿವೆ. ಹಾಗಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಜರೂರತ್ತು ಈಗ ಉದ್ಭವಿಸಿದೆ’ ಎಂದು ಕಾಂಗ್ರೆಸ್‌ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅಲ್ಲದೆ, “ಮೈತ್ರಿಕೂಟದ ಉದಯಕ್ಕೆ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಶುಭಾಶಯ ಸಲ್ಲಿಸಿದ್ದಾರೆ’ ಎಂದರು. 

ಒಗ್ಗಟ್ಟಾಗಿ ಚುನಾವಣೆ ಎದುರಿಸಿ 
ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, “ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ಎಲ್ಲ ವಿಪಕ್ಷಗಳೂ ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚುನಾವಣೆ ಎದುರಿಸಬೇಕು. ಮೈತ್ರಿಕೂಟದ ಮುಂದಿನ ನಡೆಯ ರೂಪುರೇಷೆಗಾಗಿ ಎಲ್ಲ ಮಿತ್ರಪಕ್ಷಗಳ ಹಿರಿಯ ನಾಯಕರನ್ನೊಳಗೊಂಡ ಸಮಿತಿ ರಚನೆಯಾಗಬೇಕು’ ಎಂದು ಸಲಹೆ ನೀಡಿದರು.  “ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಕೆಲ ಪಕ್ಷಗಳ ನಡುವೆ ಭಿನ್ನಮತವಿದೆ. ಇದನ್ನು ಆದಷ್ಟು ಬೇಗನೆ ಬಗೆಹರಿಸಿಕೊಳ್ಳಬೇಕಿದೆ’ ಎನ್ನುವ ಮೂಲಕ ಕರ್ನಾಟಕದಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಗೌಡರು ಪರೋಕ್ಷವಾಗಿ ತಿಳಿಹೇಳಿದರು. 

ಇವಿಎಂ ಸುಧಾರಣೆಗೆ ಸಮಿತಿ
ಇವಿಎಂ ತಂತ್ರಜ್ಞಾನ ಬದಲಿಸಿ ಬಿಜೆಪಿ ತನ್ನ ಆಶಯಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಿದೆ ಎಂಬ ಆರೋಪಗಳ‌ ಹಿನ್ನೆಲೆಯಲ್ಲಿ, ವಿಪಕ್ಷಗಳ ಮೈತ್ರಿ ಕೂಟ ನಾಲ್ವರು ಹಿರಿಯ ನಾಯಕರ ಸಮಿತಿ ರಚಿಸಿದೆ ಎಂದು ಪಶ್ಚಿಮ ಬಂಗಾಲದ ಸಿಎಂ ಮಮತಾ ತಿಳಿಸಿದ್ದಾರೆ. ಸಮಿತಿಯಲ್ಲಿ ಅಭಿಷೇಕ್‌ ಮನು ಸಿಂ Ì (ಕಾಂಗ್ರೆಸ್‌), ಅಖೀಲೇಶ್‌ (ಎಸ್‌ಪಿ), ಸತೀಶ್‌ ಮಿಶ್ರಾ (ಬಿಎಸ್‌ಪಿ) ಹಾಗೂ ಅರವಿಂದ್‌ ಕೇಜ್ರಿವಾಲ್‌ (ಆಪ್‌) ಇದ್ದಾರೆ. ಈ ಸಮಿತಿಯು ಇವಿಎಂಗಳ ಕಾರ್ಯವೈಖರಿಯ ಮೌಲ್ಯಮಾಪನ ಮಾಡುವುದಲ್ಲದೆ, ಚುನಾವಣಾ ಪ್ರಕ್ರಿಯೆಯಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳನ್ನು ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ನೀಡಲಿದೆ.

ಲೂಟಿ ಮಾಡಲಾಗದ್ದಕ್ಕೆ ಮೈತ್ರಿ: ಪ್ರಧಾನಿ ಮೋದಿ ತಿರುಗೇಟು “ಯಾರಿಗೆ ದೇಶ ಲೂಟಿ ಮಾಡುವ ಅವಕಾಶ ಕೈ ತಪ್ಪಿದೆಯೋ ಅವರೆಲ್ಲ ಸೇರಿಕೊಂಡು ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಬಿಜೆಪಿ ವಿರುದ್ಧ ರೂಪುಗೊಳ್ಳುತ್ತಿರುವ ಮಹಾಘಟಬಂಧನವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. 

ದಾದರ್‌-ನಗರ್‌ ಹವೇಲಿಯ ರಾಜಧಾನಿ ಸಿಲ್ವಾಸಾದಲ್ಲಿ ಶನಿವಾರ ಮಾತನಾಡಿದ ಅವರು, ಕೋಲ್ಕತಾದಲ್ಲಿ ಸಾಗಿದ್ದ ವಿಪಕ್ಷಗಳ ಮಹಾ ರ್ಯಾಲಿಯತ್ತ ಬೆರಳು ಮಾಡಿ ಆಕ್ಷೇಪ ವ್ಯಕ್ತಪಡಿಸಿದರು. “ಮಹಾ ಘಟಬಂಧನ’ವು ಕೇವಲ ಮೋದಿ ವಿರುದ್ಧ ಮಾಡಿಕೊಂಡ ಮೈತ್ರಿಯಲ್ಲ. ಇಡೀ ದೇಶದ ಜನತೆಯ ವಿರುದ್ಧದ ಮೈತ್ರಿ. ಭ್ರಷ್ಟಾಚಾರದ ವಿರುದ್ಧ ನಾನು ಕೈಗೊಂಡ ಕ್ರಮಗಳು ಕೆಲವರಿಗೆ ಸಾರ್ವಜನಿಕರ ಹಣ ಲೂಟಿ ಹೊಡೆಯುವುದನ್ನು ತಪ್ಪಿಸಿದೆ. ಇಂಥವರೆಲ್ಲರೂ ಈಗ ಒಗ್ಗಟ್ಟಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದರು. “ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ರಥಯಾತ್ರೆಗೆ ಮಮತಾ ಬ್ಯಾನರ್ಜಿ ಸರಕಾರ ಅನುಮತಿ ನೀಡುತ್ತಿಲ್ಲ. 

ಆ ರಾಜ್ಯದಲ್ಲಿ ವಿವಿಧ ಚುನಾವಣೆಗಳ ವೇಳೆ ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ತಮ್ಮ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಈ ಮಟ್ಟಿಗೆ ಹಾಳುಗೆಡವಿರುವ ಬ್ಯಾನರ್ಜಿ, ಈಗ ಪ್ರಜಾಪ್ರಭುತ್ವ ರಕ್ಷಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಮಾತುಗಳನ್ನು ಕೇಳಿದ ಜನ, “ವ್ಹಾ… ಎಂಥ ಮಾತು’ ಎಂದು ಉದ್ಗರಿಸುತ್ತಿದ್ದಾರೆ’ ಎಂದರು.

“ಪ. ಬಂಗಾಲದಲ್ಲಿ ಕೇವಲ ಒಬ್ಬರೇ ಬಿಜೆಪಿ ಶಾಸಕರಿದ್ದು, ಮಮತಾಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡುತ್ತಿದ್ದಾರೆ. ಹಾಗಾಗಿಯೇ, ಮಮತಾಗೆ ಬೆಂಬಲಕ್ಕಾಗಿ ಎಲ್ಲ ವಿಪಕ್ಷಗಳ ನಾಯಕರು ಜಮಾಯಿಸಿ ತಾವು ಮಮತಾ ಬೆಂಬಲಕ್ಕಿದ್ದೇವೆ ಎಂಬುದನ್ನು ಜಗಜ್ಜಾಹೀರುಗೊಳಿಸುತ್ತಿದ್ದಾರೆ’ ಎಂದು ರ್ಯಾಲಿ ಬಗ್ಗೆ ಮೋದಿ ಅಣಕವಾಡಿದರು. ಇದೇ ವೇಳೆ, ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಅವಕಾಶವಾದಿ ಶಕ್ತಿಗಳು ಒಂದಾಗಿವೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಮೊದಲು ಘೋಷಿಸಲಿದೆ ಎಂದೂ ಹೇಳಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಎಲ್ಲ ಮೈತ್ರಿ ಪಕ್ಷಗಳೂ ಅರ್ಜುನರಂತೆ ಮುನ್ನುಗ್ಗಬೇಕು. ಬಹುಶಃ ಮಹಾ ಘಟಬಂಧನದ ಗುರಿ ಇದೊಂದೇ ಆಗಿರಬೇಕು. 
– ಅರುಣ್‌ ಶೌರಿ  
ಬಿಜೆಪಿಯ ಮಾಜಿ ನಾಯಕ

ಜಮ್ಮು -ಕಾಶ್ಮೀರದಲ್ಲಿ ಕೋಮುಭಾವನೆ ಬಿತ್ತಿರುವ ಬಿಜೆಪಿ ಅಲ್ಲಿನ ಜನತೆಯನ್ನು ಇಬ್ಭಾಗವಾಗಿಸಿದೆ. ಅಲ್ಲಿನ ನಾಗರಿಕರಿಗೆ ಪಾಕಿಸ್ಥಾನಿಗಳೆಂಬ ಹಣೆಪಟ್ಟಿ ಹಚ್ಚುತ್ತಿದೆ. 
ಫಾರೂಕ್‌ ಅಬ್ದುಲ್ಲಾ
ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ

ಸ್ವತಂತ್ರ ಭಾರತದಲ್ಲಿ ಈ ಮಟ್ಟದ ಸೇಡಿನ ರಾಜಕೀಯ ಹಿಂದೆಂದೂ ನೋಡಿರಲಿಲ್ಲ. ಉತ್ತರ ಪ್ರದೇಶದಲ್ಲಿ ಅಮಿತ್‌ ಶಾ 100 ರ್ಯಾಲಿಗಳನ್ನು ಮಾಡಿದಾಗ ಯಾರೂ ಕೇಳಲಿಲ್ಲ. ಆರ್‌ಜೆಡಿ ಒಂದು ರ್ಯಾಲಿ ಮಾಡಿದ್ದಕ್ಕೆ ಐಟಿ ನೋಟಿಸ್‌ ಜಾರಿಗೊಂಡಿತು. 
– ಅಭಿಷೇಕ್‌ ಸಿಂ Ì  ಕಾಂಗ್ರೆಸ್‌ ನಾಯಕ

 ದೇಶದಲ್ಲಿಂದು ಸರಕಾರವನ್ನು ಹೊಗಳಿದರೆ ಅದು ದೇಶಭಕ್ತಿ, ತೆಗಳಿದರೆ ಅದು ರಾಷ್ಟ್ರದ್ರೋಹ ಎನ್ನುವಂಥ ವಾತಾವರಣ ಇದೆ. ಸುಳ್ಳು ಅಭಿವೃದ್ಧಿ ಅಂಕಿ- ಸಂಖ್ಯೆ ಬಳಸಿ ಜನರನ್ನು ಮೂರ್ಖರನ್ನಾಗಿ ಸುತ್ತಿರುವ ಸರಕಾರ ಅಸ್ತಿತ್ವದಲ್ಲಿರುವುದು ಇದೇ ಮೊದಲು. 
– ಯಶವಂತ್‌ ಸಿನ್ಹಾ ಬಿಜೆಪಿ ಮಾಜಿ ನಾಯಕ

ಮೋದಿ-ಅಮಿತ್‌ ಶಾ ಅವರಿಗೆ ಮತ್ತೂಮ್ಮೆ ಅಧಿಕಾರ ಸಿಕ್ಕರೆ, ಸಂವಿಧಾನವನ್ನೇ ಬದಲಿಸಿ ದೇಶದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಯದಂತೆ ಮಾಡುತ್ತಾರೆ. 
– ಅರವಿಂದ್‌ ಕೇಜ್ರಿವಾಲ್‌
 ದಿಲ್ಲಿ ಮುಖ್ಯಮಂತ್ರಿ

ಮುಂದಿನ ಲೋಕಸಭಾ ಚುನಾವಣೆ ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ. ಹಿಂದುತ್ವದ ಹೆಸರಿನಲ್ಲಿ ದೇಶಾದ್ಯಂತ ಹರಡುತ್ತಿರುವ ವಿಷವನ್ನು ತಡೆಯಲೇಬೇಕಿದೆ. 
– ಎಂ.ಕೆ. ಸ್ಟಾಲಿನ್‌  ಡಿಎಂಕೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next