Advertisement

“ಮುಖ್ಯಮಂತ್ರಿ ಜತೆ ಭಿನ್ನಾಭಿಪ್ರಾಯವಿಲ್ಲ’: ಡಾ.ಜಿ.ಪರಮೇಶ್ವರ್‌

10:21 AM Sep 04, 2017 | |

ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, “ಅನಾರೋಗ್ಯದ ಕಾರಣ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲಿಲ್ಲ’ ಎಂದೂ ಸಮಜಾಯಿಷಿ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಾಗೂ ಮುಖ್ಯಮಂತ್ರಿಯವರು ಚರ್ಚಿಸಿಯೇ ಸಂಪುಟ ಸೇರುವ ನೂತನ ಸಚಿವರ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ ಒಪ್ಪಿಗೆ ಪಡೆದೆವು. ಇದರಲ್ಲಿ ಅಸಮಾಧಾನ ಅಥವಾ ಕೋಲ್ಡ್‌ ವಾರ್‌, ಹಾಟ್‌ವಾರ್‌ ಯಾವುದೂ ಇಲ್ಲ ಎಂದು ಹೇಳಿದರು. 

Advertisement

ಪಕ್ಷದ ಉನ್ನತಿಗಾಗಿ ತಾಳ್ಮೆಯಿಂದ ಕೆಲಸ ಮಾಡುತ್ತೇನೆ, ಇಂದೂ ಮಾಡುತ್ತೇನೆ, ಮುಂದೆಯೂ ಮಾಡುತ್ತೇನೆ ಎಂದೂ ಮಾರ್ಮಿಕವಾಗಿ ನುಡಿದರು.
ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಅಪಪ್ರಚಾರ ಮಾಡಿರುವುದರ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ನನ್ನನ್ನು ಕೇಳದೆ ಏನನ್ನೂ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ನಾನು, ರಾಹುಲ್ ಗಾಂಧಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರೂ ಸೇರಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದ್ದೆವು ಎಂದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ನಮ್ಮಲ್ಲಿ ಎಡಬಲ ಯಾವುದೂ ಇಲ್ಲ. ಪಕ್ಷದ ಸಂವಿಧಾನ, ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧ. ವಿಧಾನ
ಪರಿಷತ್‌ ಸದಸ್ಯರ ಆಯ್ಕೆ ವಿಷಯದಲ್ಲಿ ಚರ್ಚೆ ಆಗಿರೋದು ನಿಜ. ಇಬ್ಬರೂ ಕೆಲವು ಹೆಸರುಗಳನ್ನು ಸೂಚಿಸಿದ್ದೆವು. ಕೊನೆಗೆ ಒಮ್ಮತವಾದ ಹೆಸರುಗಳನ್ನು ಆಯ್ಕೆ ಮಾಡಿದೆವು. ಎಲ್ಲ ಸಮುದಾಯ ಮತ್ತು ಪ್ರಾಂತ್ಯಗಳಿಗೆ ಪ್ರಾತಿನಿಧ್ಯ ಕೊಡಬೇಕು. ಹೀಗಾಗಿ ಗೀತಾ ಮಹದೇವ ಪ್ರಸಾದ್‌ ಅವರನ್ನು ಆಯ್ಕೆ ಮಾಡಲಾಯಿತು. ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ನಿಯಮ ಇದ್ದರೂ ಆರ್‌.ಬಿ.ತಿಮ್ಮಾಪುರ ವಿಚಾರದಲ್ಲಿ ಪ್ರಾಂತ್ಯ ಮತ್ತು ಜನಾಂಗದ ಪ್ರಾತಿನಿಧ್ಯದ ದೃಷ್ಟಿಯಿಂದ ನಿಯಮಾವಳಿಗೆ ವಿನಾಯಿತಿ ನೀಡಲಾಯಿತು ಎಂದು ತಿಳಿಸಿದರು.

ನಮ್ಮ ಪಕ್ಷದ ಸಂವಿಧಾನದಲ್ಲಿ ಒಂದು ಕಾನೂನು ಇದೆ. ಅಂತಿಮವಾಗಿ ಲೆಫ್ಟ್ ಟು ಪ್ರಸಿಡೆಂಟ್‌ ಎಂದ ಮೇಲೆ ಅಂತಿಮ ತೀರ್ಮಾನ
ಅವರೇ ಕೈಗೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ನಾನು ಬೇಸರ ಮಾಡಿಕೊಂಡು ರಾಜೀನಾಮೆಗೆ ಮುಂದಾದೆ ಎಂಬೆಲ್ಲ ಮಾತುಗಳು ಕೇಳಿಬಂದಿವೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.

ಗೃಹ ಸಚಿವರಿಗೆ ಬಿಟ್ಟ ವಿಷಯ: ರಾಮಲಿಂಗಾರೆಡ್ಡಿ ಅವರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೆಂಪಯ್ಯ ಅವರ ವಿಷಯವೇ ಪ್ರಸ್ತಾಪವಾಗಲಿಲ್ಲ. ಸಲಹೆಗಾರರನ್ನು ಮುಂದುವರಿಸುವುದು ಬಿಡುವುದು ಗೃಹ ಸಚಿವರಿಗೆ ಬಿಟ್ಟ ವಿಷಯ. ಆದರೆ ಕೋಮು ಗಲಭೆಯಂತಹ ಸೂಕ್ಷ್ಮ ಸನ್ನಿವೇಶಗಳ ನಿರ್ವಹಣೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದ್ದೇನೆ ಎಂದು ಹೇಳಿದರು. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ರಾಜ್ಯಕ್ಕೆ ಇನ್ನೂ ಹೆಚ್ಚಿನ ಅವಕಾಶ ಸಿಗುತ್ತದೆ, ಶೋಭಾ ಕರಂದ್ಲಾಜೆ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಈಗ ಅನಂತಕುಮಾರ್‌ ಹೆಗಡೆಗೆ
ಸ್ಥಾನ ಸಿಕ್ಕಿದೆ. ಅವರು ಸೀಬರ್ಡ್‌ ನೌಕಾನೆಲೆ ನಿರಾಶ್ರಿತರಿಗೆ ಮೊದಲು ಪರಿಹಾರ ಒದಗಿಸಲಿ ಎಂದು ತಿಳಿಸಿದರು.

Advertisement

3 ವರ್ಷದಲ್ಲಿ ಮೂವರು ಸಚಿವರ ವರ್ಗಾವಣೆ
ರೈಲ್ವೆ ಖಾತೆಗೆ ಮೂರು ವರ್ಷದಲ್ಲಿ ಮೂವರು ಸಚಿ ವ ರನ್ನು ಬದಲಾಯಿಸಿದ್ದು ಆಶ್ಚರ್ಯ ತಂದಿದೆ. ಅದರಲ್ಲೂ ಸದಾನಂದಗೌಡ ಅವರನ್ನು ರೈಲ್ವೆ
ಖಾತೆಯಿಂದ ಬದಲಾವಣೆ ಮಾಡಿದಾಗ ತುಂಬಾ ಬೇಸರವಾಗಿತ್ತು. ಇದು ಪ್ರಧಾನಿಯವರ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ನಿವೃತ್ತ ಅಧಿಕಾರಿಗಳನ್ನು
ಸಚಿವರಾಗಿ ಆಯ್ಕೆ ಮಾಡಿಕೊಂಡಿರುವುದು ಆಡಳಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next