Advertisement

ಪರಂ ಜತೆ ಭಿನ್ನಾಭಿಪ್ರಾಯವಿಲ್ಲ

06:00 AM Dec 28, 2018 | Team Udayavani |

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರ 24 ಗಂಟೆಗಳಲ್ಲಿ ಬಿದ್ದು ಹೋಗುತ್ತದೆ ಎಂಬುದೆಲ್ಲ ಶುದ್ಧ ಸುಳ್ಳು. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಪರಮೇಶ್ವರ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಸರ್ಕಾರಕ್ಕೆ ಏನೂ ಆಗಲ್ಲ. ಅಧಿಕಾರಾವಧಿ ಪೂರ್ಣಗೊಳಿಸಲಿದೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಆದರೆ, ಅದು ಸಾಧ್ಯವಾಗಲ್ಲ. ಮಾಜಿ ಸಚಿವ ಉಮೇಶ ಕತ್ತಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು. ರಮೇಶ ಜಾರಕಿಹೊಳಿ ಮಂತ್ರಿ ಸ್ಥಾನದಿಂದ ತೆಗೆದಿದ್ದಕ್ಕೆ ಬೇಸರಗೊಂಡಿದ್ದಾರೆ. ನನ್ನ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೂಲತಃ ಅವರು ಕಾಂಗ್ರೆಸ್ಸಿಗರಾಗಿದ್ದು, ಪಕ್ಷದಲ್ಲಿಯೇ ಇರುತ್ತಾರೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದರು. 

ಡಿಸಿಎಂ ಡಾ.ಜಿ.ಪರಮೇಶ್ವರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲ ಸಚಿವರಿಗೆ ರಾಹುಲ… ಗಾಂಧಿ ಅವರಿಂದ ಖಾತೆಗಳು ಹಂಚಿಕೆಯಾಗಲಿವೆ. ಗೃಹ ಖಾತೆಯನ್ನು ಇಂಥವರಿಗೆ ಕೊಡಬೇಕೆಂದು ನಾನು ಪಟ್ಟು ಹಿಡಿದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ.
ಆದರೆ, ಯಾರಿಗೆ ಎಷ್ಟು ಸ್ಥಾನ ನೀಡಬೇಕೆಂಬುದು ಇನ್ನೂ ತೀರ್ಮಾನ ಆಗಿಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಸಭೆ ಬಳಿಕ ಸ್ಥಾನ ಹಂಚಿಕೆ ಅಂತಿಮವಾಗಲಿದೆ ಎಂದರು.

ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ: ಬಳಿಕ, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅತೃಪ್ತ ಆತ್ಮಗಳ ನಾಯಕ ಸಿದ್ದರಾಮಯ್ಯ ಎಂದು ಟೀಕಿಸಿದ್ದ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ಈಶ್ವರಪ್ಪ ತಲೆಯಲ್ಲಿ ಮೆದುಳೇ ಇಲ್ಲ. ಅತೃಪ್ತಿ ಇರುವುದು ನನಗಲ್ಲ, ಈಶ್ವರಪ್ಪನಿಗೆ. ಅಧಿಕಾರದಲ್ಲಿ ಇಲ್ಲದೇ ಇರೋರಿಗೆ ಅತೃಪ್ತಿ ಇರುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿಗಿಂತ ದೊಡ್ಡ ಹುದ್ದೆ ಇಲ್ಲ. ಅಂತಹ ದೊಡ್ಡ ಹುದ್ದೆಯನ್ನು ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಯಾವತ್ತೂ
ಅಧಿಕಾರದ ಹಿಂದೆ ಹೋಗಿಲ್ಲ ಎಂದರು.

ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸಿದ್ದು ವಿರೋಧ: ಬಾದಾಮಿ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ 48 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆಗಿರಬೇಕು. ಇಂಗ್ಲಿಷ್‌ ಬಗ್ಗೆ ಅತಿಯಾದ ವ್ಯಾಮೋಹ ಇರಬಾರದು. ನಾನೂ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದೇನೆ. ಆದರೆ, 5ನೇ ತರಗತಿ ಇದ್ದಾಗಲೇ ಇಂಗ್ಲಿಷ್‌ ಕಲಿತಿದ್ದೆ. ಕನ್ನಡ ಕಲಿತವರೆಲ್ಲ ದಡ್ಡರಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ದಡ್ಡನಾ ಎಂದು ಪ್ರಶ್ನಿಸಿದರು.

Advertisement

ಸಿದ್ದು ಕೈ ಬೆರಳಿಗೆ ಗಾಯ: ಬಾದಾಮಿಯಲ್ಲಿ ನಡೆದ ಕನಕದಾಸ ಜಯಂತಿ ವೇಳೆ ಸಿದ್ದರಾಮಯ್ಯ ಡೊಳ್ಳು ಬಾರಿಸುತ್ತಿದ್ದರು. ಈ ವೇಳೆ, ಡೊಳ್ಳು ಬಾರಿಸುವ ಕೋಲಿನ ಬಿದಿರು ಚುಚ್ಚಿ ಬಲಗೈನ ಬೆರಳಿಗೆ ಗಾಯವಾಯಿತು. ಕೂಡಲೇ ಕೆಲವು ಕಾರ್ಯಕರ್ತರು ಬೆರಳಿಗೆ ಚುಚ್ಚಿದ್ದ ಸಿಬಿರು ತೆಗೆದು, ಹ್ಯಾಂಡಿ ಪ್ಲಾಸ್ಟರ್‌ ಹಚ್ಚಿ ಪ್ರಥಮ ಚಿಕಿತ್ಸೆ ನೀಡಿದರು.

ಸಿಎಂಗೆ ಟ್ವೀಟ್‌ ತಿರುಗೇಟು
ಮುಂದಿನ ಶೈಕ್ಷಣಿಕ ವರ್ಷದಿಂದ 1 ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಿದ್ದರಾಮಯ್ಯ, ಟ್ವೀಟ್‌ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. 1 ಸಾವಿರ ಇಂಗ್ಲಿಷ್‌ ಶಾಲೆ ಆರಂಭಿಸುವುದು ಸರಿಯಲ್ಲ. ಇದರಿಂದ ಕನ್ನಡ ಭಾಷೆ, ಶೈಕ್ಷಣಿಕ ವಲಯಕ್ಕೆ ಪೆಟ್ಟು ಬೀಳುತ್ತದೆ. ಕರುನಾಡಲ್ಲಿ ಕನ್ನಡವೇ ಸಾರ್ವಭೌಮ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರ ಮುನ್ನಡೆಯಬೇಕೆಂಬ ಆಸೆ ಸಿದ್ದರಾಮಯ್ಯಗೆ ಇಲ್ಲ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಯಾವ ವಿಚಾರ ಇಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಅವರ ಜತೆಗೆ ನಾನು ಮಾತನಾಡುತ್ತೇನೆ.
● ಸಿದ್ದರಾಮಯ್ಯ, ಮಾಜಿ ಸಿಎಂ.

Advertisement

Udayavani is now on Telegram. Click here to join our channel and stay updated with the latest news.

Next