ಬೀದರ: ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಿಂದ ಬಡವರಿಗೆ ನೇರ ಲಾಭವಿಲ್ಲ. ಹಾಗಾಗಿ ಇದು ಮಾಯಾ ಬಜಾರ್ ತೋರಿಸಿದಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಕ್‌ಡೌನ್‌ದಿಂದ ಸಮಸ್ಯೆಗೆ ಸಿಲುಕಿದ ಬಡವರ ಆರ್ಥಿಕ ಉತ್ತೇಜನಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಬಡವರ ಖಾತೆಗೆ ತಿಂಗಳಿಗೆ ಕನಿಷ್ಠ ಏಳು ಸಾವಿರ ರೂ.ನಂತೆ ಮೂರು ತಿಂಗಳು ನೇರ ಹಣ ವರ್ಗಾವಣೆ ಯೋಜನೆ ಜಾರಿಗೆ ತಂದಾಗ ಮಾತ್ರ ಸಂಕಷ್ಟದಲ್ಲಿದ್ದ ಬಡವರು, ವಲಸೆ ಕಾರ್ಮಿಕರಿಗೆ ಸಹಕಾರಿಯಾಗುತ್ತದೆ. ಈ ವಿಷಯದಲ್ಲಿ ಆರ್ಥಿಕ ತಜ್ಞರು-ಪ್ರತಿಪಕ್ಷಗಳ ವಿಶ್ವಾಸಕ್ಕೆ ಪಡೆದು ಅವರ ಸಲಹೆಯಂತೆ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.
ಪ್ಯಾಕೇಜ್ ಘೋಷಿಸಲಿ: ರಾಜ್ಯದಲ್ಲಿ ಕೋವಿಡ್-19 ಬಗ್ಗೆ ಎಚ್ಚರಿಕೆ ಮತ್ತು ಜಾಗೃತಿ ಮೂಡಿಸುತ್ತಿರುವ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಕೋವಿಡ್-19 ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಾಧ್ಯಮ ಸಂಸ್ಥೆಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತುರ್ತಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಗ್ರಾಪಂ ಸದಸ್ಯರ ಸದಸ್ಯತ್ವ ಅವಧಿ ಮುಕ್ತಾಯ ಹಂತಕ್ಕೆ ಬಂದಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆವರೆಗೂ ಹಾಲಿ ಪ್ರತಿನಿಧಿಗಳನ್ನೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಆಡಳಿತಾಧಿಕಾರಿ, ಆಡಳಿತ ಉಸ್ತುವಾರಿ ನೇಮಕ ಮಾಡಬಾರದು ಎಂದು ಖಂಡ್ರೆ ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಿಂದ ಬಡವರಿಗೆ ನೇರ ಲಾಭವಿಲ್ಲ. ಹಾಗಾಗಿ ಇದು ಮಾಯಾ ಬಜಾರ್ ತೋರಿಸಿದಂತಾಗಿದೆ. ಲಾಕ್‌ಡೌನ್‌ದಿಂದ ಸಮಸ್ಯೆಗೆ ಸಿಲುಕಿದ ಬಡವರ ಆರ್ಥಿಕ ಉತ್ತೇಜನಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
–
ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ