Advertisement

ಸಾಲರೂಪದ ವಿದ್ಯಾರ್ಥಿ ವೇತನ ಪಡೆಯುವವರೇ ಇಲ್ಲ!

06:00 AM Nov 21, 2018 | |

ಬೆಂಗಳೂರು: ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾಜೀವ್‌ ಗಾಂಧಿ ಸಾಲರೂಪದ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳೇ ಹಿಂದೇಟು ಹಾಕುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2013-14ರಲ್ಲಿ ರಾಜೀವ್‌ ಗಾಂಧಿ ಸಾಲರೂಪದ
ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದು, 2014-15ನೇ ಸಾಲಿನಿಂದ ಅನುಷ್ಠಾನ ಮಾಡಿತ್ತು.

Advertisement

ರಾಜ್ಯದ 412 ಸರ್ಕಾರಿ ಹಾಗೂ 325 ಖಾಸಗಿ ಅನುದಾನಿತ ಕಾಲೇಜುಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಯೋಜನೆ ರೂಪಿಸಲಾಗಿದ್ದು, ವಾರ್ಷಿಕವಾರು 3 ಸಾವಿರ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸುವ ಗುರಿ 
ನಿಗದಿಪಡಿಸಲಾಗಿತ್ತು. ಆದರೆ, ನಾಲ್ಕು ವರ್ಷ ಕಳೆದರೂ 400 ವಿದ್ಯಾರ್ಥಿಗಳು ಫ‌ಲಾನುಭವ ಪಡೆದಿಲ್ಲ. ವರ್ಷಕ್ಕೆ 50ರಂತೆ ಈವರೆಗೆ 206 ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆದಿದ್ದಾರೆ. ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಲು ಆರ್ಥಿಕ ಸಹಾಯ ಮಾಡಿಕೊಡುವುದು ಯೋಜನೆಯ ಮೂಲ
ಉದ್ದೇಶವಾಗಿದೆ. ಕಾಲೇಜುಗಳ ಮೂಲಕವೇ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. 

ಯೋಜನೆಯ ಫ‌ಲ ಪಡೆದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಮುಗಿಯುವವರೆಗೂ ಬಡ್ಡಿ ಇರುವುದಿಲ್ಲ. ಕಾಲೇಜು ಶುಲ್ಕದ ಜತೆಗೆ  ಶೈಕ್ಷಣಿಕ ಕಲಿಕೆಗೆ ಅಗತ್ಯವಾದ ಪರಿಕರಗಳಾದ ಲ್ಯಾಪ್‌ಟಾಪ್‌, ಕ್ಯಾಮರಾ, ಲ್ಯಾಬ್‌ ಸಾಮಗ್ರಿ ಇತ್ಯಾದಿಗಳನ್ನು ಖರೀದಿಸಲು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಆದರೆ, ಸೌಲಭ್ಯ ಪಡೆಯಲು ವಿದ್ಯಾರ್ಥಿಗಳೇ ಮುಂದೇ ಬರುತ್ತಿಲ್ಲ.

ಮಾಹಿತಿಯ ಕೊರತೆ: ರಾಜೀವ್‌ ಗಾಂಧಿ ಸಾಲ ರೂಪದ ವಿದ್ಯಾರ್ಥಿ ವೇತನದ ಬಗ್ಗೆ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶದ ಸಂದರ್ಭದಲ್ಲೇ ಮಾಹಿತಿ ನೀಡಬೇಕು ಮತ್ತು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಕಾಲೇಜಿನಿಂದಲೇ ಸಾಲ ಒದಗಿಸುವ ವ್ಯವಸ್ಥೆ
ಮಾಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಬಹುತೇಕ ಕಾಲೇಜುಗಳಲ್ಲಿ ಪ್ರಾಂಶುಪಾಲರು ಈ ಬಗ್ಗೆ ವಿದ್ಯಾರ್ಥಿ ಗಳಿಗೆ ಸೂಕ್ತವಾಗಿ ಮಾಹಿತಿಯನ್ನೇ ನೀಡಿಲ್ಲ.

ತಾಂತ್ರಿಕ ಸಮಸ್ಯೆಯೂ ಇದೆ: ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಡಿಮೆ ಇರುತ್ತದೆ. ಖಾಸಗಿ  ಅನುದಾನಿತ ಕಾಲೇಜುಗಳಲ್ಲಿ ಶುಲ್ಕದ ನಿಯಂತ್ರಣ ಸರ್ಕಾರವೇ ಮಾಡುವುದರಿಂದ ಅಷ್ಟೇನೂ ದುಬಾರಿ ಇಲ್ಲ. ಈ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗೆ ಸೇರುವ
ವಿದ್ಯಾರ್ಥಿಗಳು ಬ್ಯಾಂಕ್‌ ಸಾಲದ ಮೊರೆ ಹೋಗುವುದಿಲ್ಲ. ಖಾಸಗಿ ಕಾಲೇಜು ಸೇರುವ ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೋ, ಇಲ್ಲವೋ ಎನ್ನುವ ಸ್ಪಷ್ಟತೆ ಇಲ್ಲ. ಸಾಲ ನೀಡಲು ಬ್ಯಾಂಕ್‌ಗಳು ಹತ್ತಾರು ದಾಖಲೆ ಕೇಳುವುದರಿಂದ ವಿದ್ಯಾರ್ಥಿಗಳಿಗೆ ಅದನ್ನು ಒದಗಿಸಲು ಕಷ್ಟ ಆಗುತ್ತಿದೆ. ಸರ್ಕಾರವೇ ಲ್ಯಾಪ್‌ ಟಾಪ್‌ ನೀಡುವುದಾಗಿ ಘೋಷಿಸಿದ್ದರಿಂದ ಇನ್ನಷ್ಟು ಹಿನ್ನೆಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಾಲ ಮೇಳಕ್ಕೆ ಸೂಚನೆ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ವಿದ್ಯಾರ್ಥಿಗಳೇ ಇಲ್ಲದೇ ಹಳ್ಳ ಹತ್ತುತ್ತಿರುವುದನ್ನು ತಪ್ಪಿಸಲು ಇಲಾಖೆ ಪ್ರಾಂಶುಪಾಲರಿಗೆ ಹೊಸದಾಗಿ ಸುತ್ತೋಲೆ ಹೊರಡಿಸಿದೆ. ಕಾಲೇಜು ಪ್ರವೇಶದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ಮಾಹಿತಿ ಪಡೆದು ಯೋಜನೆಯ ಅರಿವು ಮೂಡಿಸಬೇಕು. ಕಾಲೇಜಿನ ಸೂಚನಾ ಫ‌ಲಕದಲ್ಲಿ ಯೋಜನೆಯ ವಿವರ ಪ್ರಕಟಿಸಬೇಕು ಮತ್ತು ಈ ಕುರಿತು ವಿದ್ಯಾರ್ಥಿಗಳಿಗೆ ಕರಪತ್ರ ಹಂಚಬೇಕು. ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕ್‌ನ ವ್ಯವಸ್ಥಾಪಕರ ಜತೆ ಸೇರಿ ಸಾಲ ಮೇಳದಂತಹ ಕಾರ್ಯಕ್ರಮ ಆಯೋಜಿಸಲು ಸೂಚಿಸಿದೆ. 

● ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next