Advertisement

ದಸರಾ ರಜೆ ಕಡಿತವಿಲ್ಲ : ಖಾದರ್‌

04:20 AM Sep 28, 2018 | Karthik A |

ಮಂಗಳೂರು: ರಾಜ್ಯದ ಇತರೆಡೆಗಳಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ದಸರಾ ರಜೆ ಅ. 7ರಿಂದ 21ರವರೆಗೆ ಇರಲಿದೆ. ರಜೆ ಕಡಿತ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಸರಾ ರಜೆಗಾಗಿ ಹಲವರು ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳನ್ನು ನಿಗದಿ ಮಾಡಿರುತ್ತಾರೆ. ಕಡಿತಗೊಳಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಎಂದಿನಂತೆಯೇ ದಸರಾ ರಜೆ ನೀಡಲಾಗುವುದು. ಮುಂದಿನ ರಜಾ ದಿನಗಳಲ್ಲಿ ಪೂರ್ಣ ದಿನ ಶಾಲೆ ನಡೆಸಿ ಶಾಲಾ ಕರ್ತವ್ಯದ ಅವಧಿಯನ್ನು ಸರಿದೂಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

Advertisement

ಭೂಪರಿವರ್ತನೆ, ನೋಂದಣಿ ಸಮಸ್ಯೆ ನಿವಾರಣೆಯಾಗುತ್ತಾ ಬಂದಿದೆ. ನಿಯಮಾವಳಿಗಳನ್ನು ಸರಳಗೊಳಿಸಲಾಗಿದ್ದು, ಮುಂದೆ ಹಂತಹಂತವಾಗಿ ಸಮಸ್ಯೆ ಪೂರ್ಣಮಟ್ಟದಲ್ಲಿ ಇತ್ಯರ್ಥವಾಗಲಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಕಂದಾಯ ಸಚಿವರು ಎರಡೂ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ನಗರ ವ್ಯಾಪ್ತಿಯಲ್ಲಿ 11ಇ ಬದಲು ಯುಪಿಒಆರ್‌ ನಕ್ಷೆಯನ್ನೇ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ 11ಇ ನಕ್ಷೆ ರದ್ದು ಅಸಾಧ್ಯ ಎಂದರು.

ತಾಲೂಕು ಮಟ್ಟದಲ್ಲಿ ಕಂದಾಯ ತಂಡ
ಜಿಲ್ಲಾ ಮಟ್ಟದಲ್ಲಿ ಕಂದಾಯ ಅದಾಲತ್‌ ನಡೆಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇರುವ ಆರ್‌ಟಿಸಿ ದೋಷಗಳನ್ನು ನಿಗದಿತ ಸಮಯದಲ್ಲಿ ಸರಿಪಡಿಸಲಾಗುವುದು. ಇದಕ್ಕಾಗಿ ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗುವುದು ಎಂದರು.

ಮೂಲರಪಟ್ಣ, ಗುರುಪುರದಲ್ಲಿ ಹೊಸ ಸೇತುವೆ
ಮೂಲರಪಟ್ಣ ಸೇತುವೆ ದುರಸ್ತಿ ಬದಲು ಹೊಸ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದಕ್ಕೆ 50 ಕೋ.ರೂ.ಗಳನ್ನು ಲೋಕೋಪಯೋಗಿ ಸಚಿವರು ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದವರು ಕಾಮಗಾರಿ ಆರಂಭಿಸಲಿದ್ದಾರೆ. ಜತೆಗೆ ಗುರುಪುರ ರಾ. ಹೆದ್ದಾರಿಯಲ್ಲಿ ನೂತನ ಸೇತುವೆಯನ್ನು 37.84 ಕೋಟಿ ರೂ. ವೆಚ್ಚದಲ್ಲಿ ರಾ. ಹೆ. ಪ್ರಾಧಿಕಾರದವರು ನಿರ್ಮಿಸಲಿದ್ದಾರೆ. ಈಗಿನ ಸೇತುವೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅ. 15ರೊಳಗೆ ಮರಳು ಲಭ್ಯ
ಜಿಲ್ಲೆಯ ಸಿಆರ್‌ಝಡ್‌ ವಲಯದ ನದಿಗಳಿಂದ ಮರಳು ತೆಗೆಯಲು, ಕಡಿಮೆ ದರದಲ್ಲಿ ಮರಳು ಲಭ್ಯವಾಗುವಂತೆ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾನ್‌ ಸಿಆರ್‌ಝಡ್‌ ಪ್ರದೇಶದ ಮರಳು ತೆಗೆಯುವು ದಕ್ಕೆ ಟೆಂಡರ್‌ ಷರತ್ತುಗಳನ್ನು ಸಡಿಲಿಸಲು ಸೂಚಿಸಲಾಗಿದೆ. ಅ. 15ರೊಳಗೆ ಸಮಸ್ಯೆ ಇತ್ಯರ್ಥವಾಗಿ ಮರಳು ಲಭ್ಯವಾಗಲಿದೆ. ಇದು ಸಾಧ್ಯವಾದರೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆಯಲ್ಲಿ ಮರಳು ಸಿಗಲಿದೆ. ಠೇವಣಿ ಮೊತ್ತ ಇಳಿಕೆಯಾದರೆ, ಅಧಿಕ ಜನರು ಟೆಂಡರ್‌ನಲ್ಲಿ ಭಾಗವಹಿಸಲಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next