Advertisement

ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಸೋಂಕು ಪ್ರಕರಣವಿಲ್ಲ

02:34 PM Mar 21, 2020 | Suhan S |

ಬೆಳಗಾವಿ: ಜಿಲ್ಲೆಗೆ ಹೊರದೇಶಗಳಿಂದ ಇದುವರೆಗೆ 134 ಜನರು ಆಗಮಿಸಿದ್ದು,ಎಲ್ಲರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದ್ದಾರೆ.

Advertisement

ವಿದೇಶಗಳಿಂದ ಬಂದಿರುವ 134 ಜನರಲ್ಲಿ ಮೂವರು 28 ದಿನಗಳ ಪ್ರತ್ಯೇಕತಾ ಅವಧಿ (ಕ್ವಾರಂಟೈನ್‌) ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ. 17 ಜನರು 14 ದಿನಗಳ ಪ್ರತ್ಯೇಕತಾ ಅವಧಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಉಳಿದ ಈ ಎಲ್ಲ ವ್ಯಕ್ತಿಗಳನ್ನು ಅವರ ಮನೆಯಲ್ಲಿಯೇ ನಿಗಾದಲ್ಲಿಡಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಇದುವರೆಗೆ ಒಟ್ಟು ಇಬ್ಬರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಸಾರ್ವಜನಿಕರು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಎಂದು ಅವರು ಹೇಳಿದ್ದಾರೆ.

ಸಂಪೂರ್ಣ ಸ್ಕ್ಯಾನಿಂಗ್: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರ ಸ್ಕ್ಯಾನಿಂಗ್‌ (ತಪಾಸಣೆ) ಮಾಡಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯವನ್ನು ಸಹ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇದರ ಜೊತೆಗೆ ಈ ಎರಡೂ ರಾಜ್ಯಗಳಿಂದ ಬಸ್‌ನಲ್ಲಿ ಆಗಮಿಸುವ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯ ತಂಡಗಳು ತಪಾಸಣೆಗೆ ಒಳಪಡಿಸುತ್ತಿವೆ. ಇದರ ಹೊರತಾಗಿ ಬಸ್‌ ನಿಲ್ದಾಣದಲ್ಲೂ ಸಹ ತಪಾಸಣಾ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ 19 ವೈರಸ್‌ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿದ್ದು ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ರೋಗ ತಡೆಗಟ್ಟುವದು ಹಾಗೂ ಮುನ್ನೆಚ್ಚರಿಕೆ ವಹಿಸಲು ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಸಿಬ್ಬಂದಿಯ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಸಂಚಾರ ನಿಷೇಧ: ಕೋವಿಡ್ 19 ವೈರಸ್‌ ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಹಾಗೂ ಜಿಲ್ಲೆಯಿಂದ ಹೋಗುವ ಬಸ್‌ ಸೇರಿದಂತೆ ಮ್ಯಾಕ್ಸಿಕ್ಯಾಬ್‌ ಮತ್ತು ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ವದಂತಿ ನಂಬದಿರಲು ಮನವಿ: ಕೋವಿಡ್ 19 ವೈರಸ್‌ಗೆ ಸಂಬಂಧಪಟ್ಟಂತೆ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕುರಿತು ಸಾಮಾಜಿಕ ಮಾದ್ಯಮಗಳಲ್ಲಿ ತಪ್ಪು ಸಂದೇಶ ಹರಿಬಿಡಲಾಗುತ್ತಿದೆ. ಕೊರೊನಾ ವೈರಸ್‌ ಕೋವಿಡ್‌ -19 ಸೋಂಕಿತ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರು ಹಾಗೂ ಆಸ್ಪತ್ರೆಯಲ್ಲಿನ ರೋಗಿಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಕೋವಿಡ್‌ -19 ಸೋಂಕು ಪೀಡಿತ ಯಾವುದೇ ರೋಗಿಯು ನಮ್ಮಲ್ಲಿ ದಾಖಲಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ಕೋವಿಡ್‌ -19 ವೈರಸ್‌ ಗುಣಲಕ್ಷಣಗಳನ್ನು ಹೊಂದಿರುವ ಹಾಗೂ ಅದರಿಂದ ಬಳಲುತ್ತಿರುವ ರೋಗಿಯು ನಮ್ಮ ಆಸ್ಪತ್ರೆಯಲ್ಲಿ ಕಂಡು ಬಂದಿಲ್ಲ. ಸರಕಾರದ ನಿಯಮಾವಳಿ ಅನುಸಾರ ಒಂದು ವೇಳೆ ಈ ರೋಗ ಅಥವಾ ಸೋಂಕಿನ ಗುಣಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಸಮಗ್ರವಾಗಿ ತಪಾಸಿಸಿ, ನಿಗದಿಪಡಿಸಿದ ಸರಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ ಅಥವಾ ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯ ಬೀಳುವ ಅವಶ್ಯವಿಲ್ಲ. ಮುಖ್ಯವಾಗಿ ಬೆಳಗಾವಿ ಜಿಲ್ಲಾದ್ಯಂತ ಸೋಂಕು ಪೀಡಿತರು ಕಂಡು ಬಂದಿಲ್ಲ. ಕಾರಣ ಯಾವುದೇ ಉಹಾಪೋಹಗಳಿಗೆ ಕಿವಿಗೊಡದೇ ನಿರ್ದಿಷ್ಟ ಸಂಸ್ಥೆಯಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next