Advertisement

ವೀರಾಪುರದಲ್ಲಿ ರುದ್ರಭೂಮಿಯೇ ಇಲ್ಲ

03:36 PM Jan 15, 2020 | Suhan S |

ಗಜೇಂದ್ರಗಡ: ಬಹುತೇಕ ಹಿಂದುಗಳೇ ವಾಸಿಸುವ ತಾಲೂಕಿನ ವೀರಾಪುರ ಗ್ರಾಮದಲ್ಲಿ ರುದ್ರಭೂಮಿಯೇ ಇಲ್ಲ. ಇದರಿಂದ ಗ್ರಾಮದ ಜನರು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತಾಲೂಕಾಡಳಿತಕ್ಕೆ ಹಿಡಿಶಾಪ ಹಾಕುವುದು ತಪ್ಪಿಲ್ಲ.

Advertisement

ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ವೀರಾಪುರ ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಮೂಲ ಸೌಲಭ್ಯಗಳ ಜೊತೆ ಸ್ಮಶಾನದ ಸಮಸ್ಯೆ ದಶಕಗಳಿಂದ ಕಾಡುತ್ತಿದೆ. ಈ ಕುರಿತು ಪ್ರತಿಯೊಂದು ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೇ ಗ್ರಾಪಂ ಆಡಳಿತ ಮಂಡಳಿ ಸಭೆಯಲ್ಲಿಯೂ ಮೌಖೀಕ ಮತ್ತು ಲಿಖೀತವಾಗಿ ಒತ್ತಾಯಿಸಿದರೂ ತಾಲೂಕಾಡಳಿತವಾಗಲಿ, ಗ್ರಾಮ ಪಂಚಾಯತಿಯಾಗಲಿ ಈವರೆಗೂ ಸರ್ಕಾರಿ ರುದ್ರಭೂಮಿ ಸಮಸ್ಯೆ ನಿವಾರಿಸಿಲ್ಲ

ಶವ ಸಂಸ್ಕಾರ ಕಷ್ಟ: ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರನ್ನು ಗ್ರಾಮದ ಹೊರ ವಲಯದ ಹಳ್ಳದಲ್ಲಿ ಸುಡುವ ಮೂಲಕ ಶವ ಸಂಸ್ಕಾರ ಮಾಡಬೇಕಾಗುತ್ತದೆ. ಒಂದು ವೇಳೆ ಮಳೆ ಬಂತೆಂದರೆ ಆ ಸಂದರ್ಭ ಸ್ಥಿತಿ ಹೇಳ ತೀರದಾಗುತ್ತದೆ. ಇದರಿಂದ ಈ ಗ್ರಾಮದ ಜನರಿಗೆ ರುದ್ರಭೂಮಿ ಇಲ್ಲದೇ ನರಕಯಾತನೆ ಪಡುವಂತಾಗಿದೆ.

ಮುಸ್ಲಿಮರ ಪಾಡಂತೂ ಹೇಳತೀರದು: ಗ್ರಾಮದಲ್ಲಿ ಬೆರಳೆಣಿಕೆಯಲ್ಲಿ ಮುಸ್ಲಿಂ ಸಮುದಾಯವಿದ್ದರೂ ಅವರಲ್ಲಿ ಮರಣ ಹೊಂದಿದಾಗ ಅವರ ಶವ ಸಂಸ್ಕಾರ ಮಾಡಬೇಕಾದರೆ ಖಬರಸ್ಥಾನ ಇಲ್ಲದ ಪರಿಣಾಮ ಅವರ ದುಸ್ಥಿತಿ ಹೇಳತೀರದು. ಇದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಹೀಗೆ ರುದ್ರಭೂಮಿ ಹಾಗೂ ಖಬರಸ್ಥಾನಕ್ಕೆ ಜಾಗೆ ನೀಡಲು ಖಾಸಗಿಯವರು ಮುಂದಾಗಿದ್ದರು. ಅದರಂತೆಯೇ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲಿಸಿ, ತಾಲೂಕಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ನೀಡಿದ ಭರವಸೆ ಈ ವರೆಗೂ ಈಡೇರಿಲ್ಲ. ಈವರೆಗೂ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕೇವಲ ರಸ್ತೆ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯಕ್ಕಾಗಿ ಕೋಟ್ಯಂತರ ಅನುದಾನ ಬಿಡುಗಡೆಗೊಳಿಸಿ ನೀರಿನಂತೆ ಹಣವನ್ನು ವ್ಯಯಿಸುತ್ತಾರೆ. ಆದರೆ ಮನುಷ್ಯನ ಕನಿಷ್ಠ ಮೂಲ ಸೌಲಭ್ಯಗಳಲ್ಲಿ ರುದ್ರಭೂಮಿಯೂ ಒಂದಾಗಿದ್ದು, ಇದರ ಬಗೆಗೆ ಸರ್ಕಾರಗಳು ಏಕೆ ಗಂಭೀರ ಚಿಂತನೆಗೆ ಮುಂದಾಗುತ್ತಿಲ್ಲ ಎನ್ನುವುದು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

Advertisement

ವೀರಾಪುರ ಗ್ರಾಮದಲ್ಲಿ ಸರ್ಕಾರಿ ರುದ್ರಭೂಮಿಗಾಗಿ ಹಲವಾರು ವರ್ಷಗಳಿಂದ ಗ್ರಾಪಂ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಭೂಮಿ ನೀಡಲು ಖಾಸಗಿಯವರು ಮುಂದಾದರೂ ಕೊಂಡುಕೊಳ್ಳಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸದೇ ಬೇಜವಾಬ್ದಾರಿಕೆ ಪ್ರದರ್ಶಿಸುತ್ತಿದೆ. ಇದರಿಂದ ಸ್ಮಶಾನ ಸಮಸ್ಯೆ ಗ್ರಾಮದಲ್ಲಿ ತೀವ್ರವಾಗಿ ಕಾಡುತ್ತಿದೆ. -ಎಂ.ವೈ. ಅವಧೂತ್‌, ಗ್ರಾಪಂ ಸದಸ್ಯ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next