Advertisement

ದೇವರಬಾಳು; ಬಸ್‌ ಇಲ್ಲದಿರುವುದೇ ಗೋಳು

06:00 AM Sep 22, 2018 | Team Udayavani |

ಹಳ್ಳಿಹೊಳೆ: ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳೆರಡರ ಗಡಿಭಾಗದಲ್ಲಿ ಇರುವ ನಕ್ಸಲ್‌ ಪೀಡಿತ ಪ್ರದೇಶವಾದ ದೇವರಬಾಳುವಿಗೆ ಇನ್ನೂ ಕೂಡ ಬಸ್‌ ಸಂಚಾರ ವ್ಯವಸ್ಥೆಯೇ ಇಲ್ಲ. 

Advertisement

ಹಳ್ಳಿಹೊಳೆಯಿಂದ ಚಕ್ರಾ ಮೈದಾನದವರೆಗೆ ಬಸ್‌ ಸಂಪರ್ಕವಿದೆ. ಆದರೆ ಅಲ್ಲಿಂದ ಮುಂದಕ್ಕೆ ದೇವರಬಾಳು, ಕಬ್ಬಿನಾಲೆ, ಕಟ್ಟಿನಾಡಿ ಊರಿಗೆ ಸುಮಾರು 6 ಕಿ.ಮೀ. ದೂರದವರೆಗೆ ಬಸ್‌ ಸಂಪರ್ಕವೇ ಇಲ್ಲ. ಇಲ್ಲಿನ ನಿವಾಸಿಗಳು ಸ್ವಂತ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. 

ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ದೇವರಬಾಳುವಿನಲ್ಲಿ 2005 ರ ಜೂ. 23ರಂದು ನಕ್ಸಲರೆಂದು ಗುರುತಿಸಿಕೊಂಡ ಅಜಿತ್‌ ಹಾಗೂ ಉಮೇಶ್‌ ಅವರನ್ನು ಆಗಿನ ಉಡುಪಿ ಎಸ್ಪಿಯಾಗಿದ್ದ ಮುರುಗನ್‌ ನೇತೃತ್ವದ ವಿಶೇಷ ಪೊಲೀಸ್‌ ತಂಡ ಹಾಗೂ ನಕ್ಸಲ್‌ ನಿಗ್ರಹ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್‌ ಮಾಡಲಾಗಿತ್ತು. ಅಲ್ಲಿಯವರೆಗೆ ಈ ಊರಿನ ಬಗ್ಗೆ ಹೆಚ್ಚು ಮಂದಿಗೆ ತಿಳಿದಿರಲಿಲ್ಲ. 

ಭರವಸೆ ಮಾತ್ರ
ಆ ಎನ್‌ಕೌಂಟರ್‌ ಪ್ರಕರಣ ನಡೆದು 13 ವರ್ಷಗಳು ಕಳೆದಿವೆ. ಆ ಬಳಿಕ ನಕ್ಸಲ್‌ ಪ್ಯಾಕೇಜ್‌ನಡಿ ಅನುದಾನ ಬಂದರೂ ಇಲ್ಲಿನ ಅರಣ್ಯ ವಾಸಿ ಜನರ ಬದುಕು ಮಾತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ದೇವರಬಾಳು, ಕಬ್ಬಿನಾಲೆ, ಕಟ್ಟಿನಾಡಿ, ಭಾಗದಲ್ಲಿ ಸುಮಾರು 40 ರಿಂದ 50 ಮನೆಗಳಿವೆ. ಇಲ್ಲಿನ ಜನರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳು, ಸರಕಾರ ಅನೇಕ ಭರವಸೆಗಳನ್ನು ನೀಡಿತ್ತು. 5 ವರ್ಷಗಳ ಹಿಂದೆ ನಕ್ಸಲ್‌ ಪ್ಯಾಕೇಜ್‌ ಅನುದಾನದಡಿ ಇಲ್ಲಿನ ಮನೆಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿದ್ದು, ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿಯಾಗಿಲ್ಲ. 

ಬಸ್‌ ಸೌಕರ್ಯ ವಿಸ್ತರಿಸಲಿ
ಹಳ್ಳಿಹೊಳೆಯಿಂದ ದೇವರಬಾಳುವಿಗೆ ಸುಮಾರು 8 ಕಿ.ಮೀ. ದೂರವಿದ್ದು, ಈಗಿರುವ ಚಕ್ರಾ ಮೈದಾನದವರೆಗೆ ಇರುವ ಬಸ್‌ ಸೌಕರ್ಯವನ್ನು ದೇವರಬಾಳುವರೆಗೂ ವಿಸ್ತರಿಸಿದರೆ ಇಲ್ಲಿನ ನೂರಾರು ಮಂದಿಗೆ ಪ್ರಯೋಜನವಾಗಲಿದೆ. ಇಲ್ಲಿಂದ ಶಂಕರನಾರಾಯಣ, ಕೊಲ್ಲೂರು ಕಡೆಗೆ ತೆರಳುವವರಿಗೂ ಪ್ರಯೋಜನವಾಗಲಿದೆ.  
-ಶಂಕರ, ದೇವರಬಾಳು ನಿವಾಸಿ

Advertisement

ಬಸ್‌ ಬೇಡಿಕೆ ಸಲ್ಲಿಕೆ
ಹಳ್ಳಿಹೊಳೆಯಿಂದ ದೇವರಬಾಳುವಿಗೆ ಬಸ್‌ ಸೌಕರ್ಯ ಕಲ್ಪಿಸುವ ಸಂಬಂಧ ಹಳ್ಳಿಹೊಳೆ ಗ್ರಾ.ಪಂ. ವತಿಯಿಂದ ಈಗಾಗಲೇ ಕೆಎಸ್‌ಆರ್‌ಟಿಸಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. 
– ಸುದರ್ಶನ್‌, ಹಳ್ಳಿಹೊಳೆ ಗ್ರಾ.ಪಂ. ಪಿಡಿಒ

ಹಲವೆಡೆಯಿಂದ ಬೇಡಿಕೆಗಳಿವೆ
ದೇವರಬಾಳು ಸೇರಿದಂತೆ ಕರಾವಳಿಯ ಅನೇಕ ಕಡೆಗಳಿಗೆ ಬಸ್‌ ಸಂಪರ್ಕ ಕಲ್ಪಿಸಲು ಬೇಡಿಕೆಗಳು ಬಂದಿವೆ. ಆದರೆ ಈಗ ಸದ್ಯಕ್ಕೆ ಹೊಸ ಬಸ್‌ ಆರಂಭಿಸುವ ಯಾವುದೇ ಪ್ರಸ್ತಾವನೆ ಇಲಾಖೆ ಮುಂದಿಲ್ಲ. 
– ಜೈಶಾಂತ್‌, ಕೆಎಸ್‌ಆರ್‌ಟಿಸಿ ಡಿಟಿಒ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next