ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ನೂತನ ನಿಯಮದಂತೆ ನಿಧಾನಗತಿಯ ಓವರ್‌ರೇಟ್ ತಪ್ಪಿಗೆ ಇನ್ನು ಮುಂದೆ ತಂಡದ ನಾಯಕರಿಗೆ ಅಮಾನತು ಆಗುವ ಭಯವಿಲ್ಲ. ಇದರ ಬದಲು ಇಂತಹ ತಪ್ಪಿಗಾಗಿ ಇಡೀ ತಂಡಕ್ಕೆ ದಂಡ ಹೇರುವ ಜತೆಗೆ ಅಂಕವನ್ನು ಕಡಿತಗೊಳಿಸಲಾಗುತ್ತದೆ. ಈ ಹೊಸ ನಿಯಮ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಜಾರಿಗೊಳ್ಳಲಿದೆ.
ನಿಧಾನಗತಿಯ ಓವರ್ ರೇಟ್ ಪಿಡುಗನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಐಸಿಸಿ ಕ್ರಿಕೆಟ್ ಸಮಿತಿಯು ಮಾಡಿದ ಶಿಫಾರಸುಗಳಿಗೆ ಐಸಿಸಿ ಒಪ್ಪಿಗೆ ಸೂಚಿಸಿದೆ. ಆ. ಒಂದರಿಂದ ನಡೆ ಯುವ ಆ್ಯಶಸ್ ಸರಣಿ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ಪಂದ್ಯ ಮುಗಿದಾಗ ಅಗತ್ಯವಿರುವ ಓವರ್‌ರೇಟ್‌ನಿಂದ ಹಿಂದುಳಿದರೆ ಪ್ರತಿ ಯೊಂದು ಓವರ್‌ಗೆ 2 ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಇನ್ನೊಂದು ದೊಡ್ಡ ಬೆಳವಣಿಗೆ ಯೆಂದರೆ, ನಿಧಾನಗತಿಯ ಓವರ್‌ರೇಟ್ ತಪ್ಪಿಗೆ ನಾಯಕರ ಅಮಾನತು ಶಿಕ್ಷೆಯನ್ನು ತೆಗೆದುಹಾಕಿರುವುದು. ನಿಧಾನಗತಿಯ ಓವರ್ ರೇಟ್‌ಗೆ ಎಲ್ಲ ಆಟಗಾರರು ಜವಾಬ್ದಾರರಾ ಗಿರುತ್ತಾರೆ. ಹಾಗಾಗಿ ಪೂರ್ಣ ತಂಡಕ್ಕೆ ದಂಡ ವಿಧಿಸಲಾಗುತ್ತದೆ. ಈ ಹಿಂದೆ ವರ್ಷವೊಂದರಲ್ಲಿ ಎರಡು ಬಾರಿ ನಿಧಾನಗತಿಯ ಓವರ್‌ರೇಟ್ ತಪ್ಪು ಎಸಗಿದರೆ ನಾಯಕನಿಗೆ ಒಂದು ಪಂದ್ಯ ನಿಷೇಧ ಹೇರಲಾಗುತ್ತಿತ್ತು.
ಜಿಂಬಾಬ್ವೆ ಕ್ರಿಕೆಟ್ ಅಮಾನತು
ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ಜಿಂಬಾಬ್ವೆ ಕ್ರಿಕೆಟನ್ನು ಅಮಾನತು ಮಾಡಿರುವುದು ಲಂಡನ್‌ನಲ್ಲಿ ನಡೆದ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ತೆಗೆದುಕೊಂಡ ಇನ್ನೊಂದು ಪ್ರಮುಖ ನಿರ್ಧಾರವಾಗಿದೆ.
ಐಸಿಸಿಯ ಪೂರ್ಣ ಸದಸ್ಯರಾಗಿರುವ ಜಿಂಬಾಬ್ವೆ ಕ್ರಿಕೆಟ್ ಐಸಿಸಿ ಸಂವಿಧಾನದ ಆರ್ಟಿಕಲ್ 2.4 (ಸಿ) ಮತ್ತು (ಡಿ) ಅನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅಮಾನತು ಗೊಳಿಸಲು ಐಸಿಸಿ ಮಂಡಳಿ ಅವಿರೋಧವಾಗಿ ನಿರ್ಧರಿಸಿತ್ತು.