Advertisement

ಆವಾಸ್‌ ಯೋಜನೆಗೆ ಅರ್ಜಿಯೇ ಇಲ್ಲ

01:09 PM Jan 12, 2020 | Suhan S |

ಗಜೇಂದ್ರಗಡ: ಬಡ ಹಾಗೂ ಮಧ್ಯಮ ವರ್ಗದವರು ಸ್ವಂತ ಸೂರು ಹೊಂದಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ್‌ ಯೋಜನೆ ಸಮರ್ಪಕ ಜಾರಿಗೆ ಬರುತ್ತಿಲ್ಲ. ಅಧಿಕಾರಿಗಳ ನಿರುತ್ಸಾಹದಿಂದಾಗಿ ಮಹತ್ವಾಕಾಂಕ್ಷೆ ಯೋಜನೆ ಲಾಭ ಜನ ಪಡೆಯುತ್ತಿಲ್ಲ.

Advertisement

ದೇಶದ ಪ್ರತಿಯೊಂದು ಕುಟುಂಬ ಸ್ವಂತ ಸೂರು ಹೊಂದಬೇಕು ಎನ್ನುವ ಮಹದಾಸೆಯಿಂದ ಕೇಂದ್ರ ಸರ್ಕಾರ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಸಹಕಾರಿಯಾಗುವ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಸ್ಕಿಂ ಜಾರಿಗೆ ತಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿರಲ್ಲಿ ಜಾಗೃತಿ ಮೂಡಿಸದ ಪರಿಣಾಮ ಹಲವಾರು ಕುಟುಂಬಗಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಏನಿದು ಯೋಜನೆ?: ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ನಗರ, ಪಟ್ಟಣ ಮಧ್ಯಮ ವರ್ಗದ ಜನತೆಗೆ ಸಾಲ ಆಧಾರಿತ ಸಬ್ಸಿಡಿ ಯೋಜನೆ ಇದಾಗಿದೆ. ಯೋಜನೆಯ ಉಪ ಘಟಕವಾದ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಸ್ಕಿಂ ಅಡಿಯಲ್ಲಿ ಬಹುತೇಕ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ವಾರ್ಷಿಕ 18 ಲಕ್ಷ ರೂ. ವರೆಗೆ ಆದಾಯ ಹೊಂದಿದವರು ಬಡ್ಡಿ ಸಬ್ಸಿಡಿ ಪಡೆಯಬಹುದು. ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸುವವರಿಗೆ ಅಥವಾ ಫ್ಲಾಟ್‌ ಖರೀದಿಯ ಸಾಲಕ್ಕೂ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳು, ಅವಿವಾಹಿತರಾಗಿದ್ದರೂ ಸಂಪಾದನೆ ಮಾಡುತ್ತಿರುವ ವಯಸ್ಕ ವ್ಯಕ್ತಿ ಇದ್ದರೆ ಅವರನ್ನೂ ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿದೆ.

ಸ್ವಂತ ಮನೆ ಇಲ್ಲದವರು ಈ ಯೋಜನೆ ಪ್ರಯೋಜನ ಪಡೆಯಬಹುದು. ಪತಿ-ಪತ್ನಿ ಜಂಟಿಯಾಗಿಯೂ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ಸರಕಾರಿ ಹೌಸಿಂಗ್‌ ಯೋಜನೆಯ ನೆರವು ಹೊಂದಿರುವಂತಿಲ್ಲ. ಇದರಲ್ಲಿ ಆದಾಯವನ್ನು ಅವಲಂಬಿಸಿ 6 ಲಕ್ಷದಿಂದ 18 ಲಕ್ಷ ರೂ. ವರೆಗೆ ಸಾಲ ಪಡೆಯಬಹುದಾಗಿದೆ.

16 ಫಲಾನುಭವಿಗಳಿಗೆ ಮಾತ್ರ ಯೋಜನೆ ಲಾಭ : ಕೇಂದ್ರ ಸರ್ಕಾರ 2015ರಲ್ಲಿಯೇ ಈ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ವರ್ಷದಲ್ಲಿ 70ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ಕೇವಲ 16 ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ದೊರೆತಿದೆ. ಎಷ್ಟು ಜನರು ಅರ್ಜಿ ಸಲ್ಲಿಸುತ್ತಾರೋ ಅವರೆಲ್ಲರೂ ಸ್ಕಿಂ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ಸಮರ್ಪಕ ದಾಖಲೆಗಳು ಮತ್ತು ಬ್ಯಾಂಕಿನೊಂದಿಗಿನ ವಹಿವಾಟಿನ ಆಧಾರದ ಮೇಲೆ ಈ ಸೌಲಭ್ಯ ದೊರೆಯಲಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯೋಜನೆ ಬಗ್ಗೆ ಸಾರ್ವಜನಿರಿಗೆ ಸರಿಯಾಗಿ ಮಾಹಿತಿ ನೀಡದಿರುವುದೇ ಮಹತ್ವಾಕಾಂಕ್ಷೆ ಯೋಜನೆ ಬಡ ಕುಟುಂಬಗಳಿಗೆ ತಲುಪುತ್ತಿಲ್ಲ ಎನ್ನುವುದು ಜನಸಾಮಾನ್ಯರ ಅಳಲಾಗಿದೆ.

Advertisement

ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಕ್ರೆಡಿಟ್‌ ಲಿಂಕ್ಡ್ ಸಬ್ಸಿಡಿ ಸ್ಕಿಂ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಕೆಲ ಅಧಿಕಾರಿಗಳು ನಿರುತ್ಸಾಹ ತೋರಿದ ಬಗ್ಗೆ ಗಮನಕ್ಕೆ ಬಂದಿದೆ. ಯೋಜನೆ ಕುರಿತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಮತ್ತು ಬ್ಯಾಂಕ್‌ ಅಧಿಕಾರಿಗಳಿಗೆ ತರಬೇತಿ ನೀಡಿ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಲಾಗುವುದು. ಜೊತೆಗೆ ಜಿಲ್ಲೆಯ ಲೀಡ್‌ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ಯೋಜನೆ ಜಾರಿಗೆ ಸಹಕರಿಸಲು ಮನವಿ ಮಾಡಲಾಗುವುದು.  ಎನ್‌. ರುದ್ರೇಶ, ಜಿಲ್ಲಾ ಯೋಜನಾ ನಿರ್ದೇಶಕ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next